ಬಂಗಾಳದಲ್ಲಿ ಬಿಜೆಪಿ ಸರ್ಕಾರ, 15 ವರ್ಷ ಬಳಿಕ ಸಿಪಿಎಂ ಪತ್ರಿಕೆಗೆ ಸಿಕ್ತು ಸರ್ಕಾರಿ ಜಾಹೀರಾತು
ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ತಮ್ಮ ಪಕ್ಷದ ಬೆಂಬಲದ, ನಾಯಕರ ಪತ್ರಿಕೆ, ತಮ್ಮ ಪರವಾಗಿರುವ ಪತ್ರಿಕೆ, ಮಾಧ್ಯಮಗಳಿಗೆ ಜಾಹೀರಾತು ನೀಡುವ ಪದ್ಧತಿ ಇತ್ತು. ಇದೀಗ ಬಿಜೆಪಿ ಸರ್ಕಾರ ಬಂದ ಬೆನ್ನಲ್ಲೇ ಸಿಪಿಎಂ ಪಕ್ಷದ ಪತ್ರಿಕೆಗೆ ಜಾಹೀರಾತು ಸಿಕ್ಕಿದೆ.

15 ವರ್ಷ ಜಾಹೀರಾತು ನಿಷೇಧಿಸಿದ್ದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 35 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಪಿಎಂ, ಅಧಿಕಾರ ಕಳೆದುಕೊಂಡ ನಂತರ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿತ್ತು. ಅದರಲ್ಲೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾದ ಮೇಲೆ, ಕಳೆದ 15 ವರ್ಷಗಳಲ್ಲಿ ಸಿಪಿಎಂ ಪಕ್ಷದ ಪತ್ರಿಕೆಗೆ ಒಂದೇ ಒಂದು ಸರ್ಕಾರಿ ಜಾಹೀರಾತು ಸಿಕ್ಕಿರಲಿಲ್ಲ. ಆದರೆ ಈಗ, ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದು, ಪ್ರಮಾಣ ವಚನ ಸ್ವೀಕರಿಸಿದ ದಿನವೇ ಸಿಪಿಎಂ ಪತ್ರಿಕೆಗೆ ಸರ್ಕಾರಿ ಜಾಹೀರಾತು ಹುಡುಕಿಕೊಂಡು ಬಂದಿದೆ.

ಗಣಶಕ್ತಿ ಮೊದಲ ಪುಟದಲ್ಲಿ ಸರ್ಕಾರದ ಜಾಹೀರಾತು
ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಹಲವು ಪತ್ರಿಕೆಗಳಿಗೆ ಜಾಹೀರಾತು ನಿಷೇಧಿಸಲಾಗಿತ್ತು. ಆದರೆ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸಿಪಿಎಂ ಮುಖವಾಣಿ 'ಗಣಶಕ್ತಿ'ಯ ಮೊದಲ ಪುಟದಲ್ಲೇ ಇಂದು ಸರ್ಕಾರದ ಅಧಿಕೃತ ಜಾಹೀರಾತು ಪ್ರಕಟವಾಗಿದೆ. ಈ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಅವರ ಫೋಟೋಗಳಿವೆ.
ಸರ್ವಾಧಿಕಾರಿ ಧೋರಣೆ ಬದಲು ಉತ್ತಮ ನಿರ್ಧಾರ
ಮಮತಾ ಬ್ಯಾನರ್ಜಿ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ಬದಲಾವಣೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಂತ ಸಿಪಿಎಂ ಪಾಲಿಟ್‌ಬ್ಯೂರೋ ಸದಸ್ಯ ಹಾಗೂ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಪ್ರತಿಕ್ರಿಯಿಸಿದ್ದಾರೆ. 'ಗಣಶಕ್ತಿ'ಗೆ ಜಾಹೀರಾತು ನಿಷೇಧಿಸಿದ್ದ ಮಮತಾ ಸರ್ಕಾರದ ನಿಲುವಿನ ವಿರುದ್ಧ ಸಿಪಿಎಂ ಕಾನೂನು ಹೋರಾಟವನ್ನೂ ನಡೆಸಿತ್ತು, ಆದರೆ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಸಮಯದಲ್ಲಿ ಪತ್ರಿಕೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ಈ ಸಂಕಷ್ಟ ದೂರವಾಗಿದೆ ಎಂದು ಸಿಪಿಎಂ ರಾಜ್ಯ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಮಾಣವಚನದಲ್ಲಿ ಸಿಪಿಎಂ ನಾಯಕರ ಮೆಚ್ಚಿದ ಬಿಜೆಪಿ
ಇಂದು ನಡೆದ ಪ್ರಮಾಣ ವಚನ ಸಮಾರಂಭದಲ್ಲೂ ಬಿಜೆಪಿ ನಾಯಕರು ಸಿಪಿಎಂ ನಾಯಕರನ್ನು ಹಾಡಿ ಹೊಗಳಿದ್ದಾರೆ. ಮಾಜಿ ಮುಖ್ಯಮಂತ್ರಿ, ದಿವಂಗತ ಬುದ್ಧದೇಬ್ ಭಟ್ಟಾಚಾರ್ಯ ಮತ್ತು ಪಶ್ಚಿಮ ಬಂಗಾಳ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಅವರನ್ನು ಬಿಜೆಪಿ ನಾಯಕರು ಪ್ರಶಂಸಿದ್ದಾರೆ.
ಸಿಪಿಎಂ ನಾಯಕರ ಹೊಗಳಿದ ಸುವೇಂಧು
ಸುವೆಂಧು ಅಧಿಕಾರಿ ಅವರು ಬುದ್ಧದೇಬ್ ಭಟ್ಟಾಚಾರ್ಯರನ್ನು 'ಒಳ್ಳೆಯ ಹೃದಯದ ವ್ಯಕ್ತಿ' ಎಂದು ಪದೇ ಪದೇ ಹೇಳಿದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ಸಿಪಿಎಂ ನಾಯಕರು ಭ್ರಷ್ಟಾಚಾರದ ಕಳಂಕ ಅಂಟಿಸಿಕೊಳ್ಳದ ನಾಯಕರು ಎಂದು ಹೊಗಳಲು ಬಿಜೆಪಿ ನಾಯಕರು ಹಿಂದೆ ಮುಂದೆ ನೋಡಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

