ಸಮುದ್ರಜೀವಿಗಳ ಮಾರಾಟ ನಡೆಯುತ್ತೆ, ಆದ್ರೆ ಆಮೆಗಳ ಮಾರಾಟ, ಕಳ್ಳಸಾಗಣೆ ಏಕೆ ಅಪರಾಧ?
ಪೊಲೀಸರು ಆಮೆಗಳನ್ನು ಕಳ್ಳಸಾಗಣೆ ಮಾಡುವ ಗ್ಯಾಂಗ್‌ಗಳನ್ನು ಹಿಡಿದಿದ್ದಾರೆ ಅಂತ ನಾವು ಆಗಾಗ್ಗೆ ಸುದ್ದಿಗಳಲ್ಲಿ ಕೇಳ್ತೀವಿ. ಆದರೆ ಆಮೆಗಳನ್ನು ಯಾಕೆ ಕಳ್ಳಸಾಗಣೆ ಮಾಡ್ತಾರೆ ಅಂತ ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿನ ನಿಜವಾದ ಕಥೆ ಏನು ಅಂತ ಈಗ ತಿಳಿದುಕೊಳ್ಳೋಣ.

ಭಾರತದಲ್ಲಿ ಆಮೆಗಳ ಕಳ್ಳಸಾಗಣೆ ಅಪರಾಧ. ಹೀಗೆ ಮಾಡುವವರಿಗೆ ಶಿಕ್ಷೆ ಇದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಆಮೆಗಳ ಕಳ್ಳಸಾಗಣೆ ನಡೀತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಇವುಗಳನ್ನು ಕಳ್ಳತನದಿಂದ ಸಾಗಿಸಲಾಗುತ್ತದೆ. ಈ ಆಮೆಗಳನ್ನು ಮಾರುವ ಮೂಲಕ ಕಳ್ಳರು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾರೆ. ಕೆಲವು ಆಮೆಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.
ನಕ್ಷತ್ರ ಆಮೆ ಇವುಗಳಲ್ಲಿ ಮುಖ್ಯವಾದದ್ದು. ನಕ್ಷತ್ರ ಆಮೆಯ ಬೆನ್ನಿನಲ್ಲಿ ಹಳದಿ, ಕಪ್ಪು ಮಚ್ಚೆಗಳಂತಹ ಸುಂದರ ಆಕಾರ ಇರುತ್ತದೆ. ಇದು ಪಿರಮಿಡ್‌ನಂತೆ ಕಾಣುತ್ತದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಭಾರತೀಯ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುವುದು, ಸಂಗ್ರಹಿಸುವುದು ಅಪರಾಧ. ವನ್ಯಜೀವಿಗಳ ಕಳ್ಳಸಾಗಣೆ ಅಥವಾ ಖರೀದಿ, ಮಾರಾಟದ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9(44)ರ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಇದರಲ್ಲಿ ಶಿಕ್ಷೆ ವಿಧಿಸುವ ನಿಯಮವೂ ಇದೆ. ಅದೇ ರೀತಿ, ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಅಂತಾರಾಷ್ಟ್ರೀಯ ವ್ಯಾಪಾರದ ಕುರಿತ ಅಂತಾರಾಷ್ಟ್ರೀಯ ಸಮಾವೇಶದ ಪ್ರಕಾರ, ಯಾವುದೇ ಪ್ರಾಣಿಯನ್ನು ಖರೀದಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ವಿದೇಶಿ ಪ್ರಾಣಿಗಳ ಆಗಮನದಿಂದ ಸ್ಥಳೀಯ ಪ್ರಾಣಿಗಳು ಅಪಾಯಕ್ಕೆ ಸಿಲುಕುತ್ತವೆ ಎಂಬ ಉದ್ದೇಶದಿಂದ ನಿಷೇಧಿಸಲಾಗಿದೆ. ಆಮೆಯನ್ನು ಕಳ್ಳಸಾಗಣೆ ಮಾಡಿದವರನ್ನು ಹಿಡಿದರೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಯಾಕೆ ಕಳ್ಳಸಾಗಣೆ ಮಾಡ್ತಾರೆ?
ಆಮೆಗಳಿಗೆ ಇರುವ ಬೇಡಿಕೆಯಿಂದಲೇ ಇವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಆಗ್ನೇಯ ಏಷ್ಯಾ ಸೇರಿದಂತೆ ಹಲವು ಕಡೆಗಳಲ್ಲಿ, ನಕ್ಷತ್ರ ಆಮೆಗಳು ಅದೃಷ್ಟದ ಸಂಕೇತ ಎಂದು ಜನ ನಂಬುತ್ತಾರೆ. ಇವುಗಳನ್ನು ಸಾಕಿದರೆ ಒಳ್ಳೆಯದು ಆಗುತ್ತದೆ ಎಂದು ಕೆಲವರು ನಂಬುತ್ತಾರೆ. ಈ ಕಾರಣದಿಂದ ಇವುಗಳಿಗೆ ಭಾರಿ ಬೇಡಿಕೆ ಇದೆ. ನಕ್ಷತ್ರ ಆಮೆಗಳಿಂದ ಲೈಂಗಿಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ತಯಾರಿಸುತ್ತಾರೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳಿಗೆ ಉತ್ತಮ ಬೇಡಿಕೆ ಇದೆ. ಆಮೆಗಳನ್ನು ವೈದ್ಯಕೀಯದಲ್ಲಿ ಬಳಸುವುದರಿಂದ ಜಗತ್ತಿನಾದ್ಯಂತ ಕಳ್ಳಸಾಗಣೆ ನಡೆಯುತ್ತಿದೆ.