ತಿರುಮಲದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ: ಭಕ್ತರಲ್ಲಿ ಹೆಚ್ಚಾಯ್ತು ಆತಂಕ, ಎಚ್ಚರಿಕೆ ಕೊಟ್ಟ ಟಿಟಿಡಿ!
ತಿರುಮಲ ತಿರುಪತಿಗೆ ಬೆಟ್ಟದ ಮೂಲಕ ಹೋಗುವ ಭಕ್ತರು ಎಚ್ಚರಿಕೆಯಿಂದ ಇರಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ. ಯಾಕೆ ಗೊತ್ತಾ?
ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ತಿರುಪತಿ ದೇವಸ್ಥಾನಕ್ಕೆ ಪ್ರತಿದಿನ ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಕೆಲವರು ನೇರವಾಗಿ ಬಸ್ಸು ಮತ್ತು ಕಾರಿನಲ್ಲಿ ತಿರುಮಲ ತಿರುಪತಿಗೆ ಹೋಗುತ್ತಾರೆ. ಕೆಲವು ಭಕ್ತರು ತಮ್ಮ ಹರಕೆಗಳನ್ನು ತೀರಿಸಲು ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಪಾದಚಾರಿ ಮಾರ್ಗದ ಮೂಲಕ ನಡೆದು ತಿರುಮಲವನ್ನು ತಲುಪುತ್ತಾರೆ.
ಬೆಟ್ಟದ ಮಾರ್ಗದ ಮೂಲಕ ಹೋಗುವ ಭಕ್ತರು ವಿಶ್ರಾಂತಿ ಪಡೆಯಲು ಕೊಠಡಿಗಳು ಮತ್ತು ಶೌಚಾಲಯ ಸೇರಿದಂತೆ ಸೌಲಭ್ಯಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಕಲ್ಪಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಎರಡೂ ಬೆಟ್ಟದ ಮಾರ್ಗಗಳಲ್ಲಿ ಚಿರತೆಗಳ ಓಡಾಟ ಇರುವುದರಿಂದ ಭಕ್ತರು ಎಚ್ಚರಿಕೆಯಿಂದ ಸಾಗಬೇಕೆಂದು ಸೂಚಿಸಲಾಗಿತ್ತು. ಈ ನಡುವೆ, ಕೆಲವು ತಿಂಗಳ ಹಿಂದೆ ಪೋಷಕರೊಂದಿಗೆ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದ ಬಾಲಕಿಯನ್ನು ಚಿರತೆ ಎಳೆದೊಯ್ದು ಕೊಂದ ಘಟನೆ ಭಕ್ತರಲ್ಲಿ ಆತಂಕವನ್ನುಂಟು ಮಾಡಿತ್ತು.
ಇದಾದ ನಂತರ ಬೆಟ್ಟದ ಮಾರ್ಗದಲ್ಲಿ ಸುತ್ತಾಡುತ್ತಿದ್ದ 5 ಚಿರತೆಗಳನ್ನು ಬೋನುಗಳನ್ನು ಇಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದಿದ್ದರು. ಇದರಿಂದ ಭಕ್ತರು ನಿಟ್ಟುಸಿರು ಬಿಟ್ಟಿದ್ದರು. ಇದಾದ ಬಳಿಕ ಬೆಟ್ಟದ ಮಾರ್ಗದ ಮೂಲಕ ಹೋಗುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಹಲವು ನಿರ್ಬಂಧಗಳು ಮತ್ತು ಸೂಚನೆಗಳನ್ನು ನೀಡಿತು. ಪಾದಚಾರಿ ಮಾರ್ಗದಲ್ಲಿ ಹೋಗುವ ಭಕ್ತರು ಒಂಟಿಯಾಗಿ ಹೋಗಬಾರದು. ಗುಂಪಿನಲ್ಲಿ ಹೋಗಬೇಕೆಂದು ಸೂಚಿಸಲಾಯಿತು. ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ದೇವಸ್ಥಾನದ ವತಿಯಿಂದ ಕೋಲುಗಳನ್ನು ನೀಡಲಾಯಿತು.
ಬೆಟ್ಟದ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪ್ರಾಣಿಗಳ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿತ್ತು. ಇದರಿಂದ ಭಕ್ತರು ಚಿರತೆ ಭಯವಿಲ್ಲದೆ ಪಾದಚಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಈ ನಡುವೆ ನಿನ್ನೆ ರಾತ್ರಿ ಶ್ರೀವಾರಿ ಮೆಟ್ಟು ಪಾದಚಾರಿ ಮಾರ್ಗದಲ್ಲಿರುವ ನಿಯಂತ್ರಣ ಕೊಠಡಿಯ ಬಳಿ ಚಿರತೆ ಕಂಡು ಬಂದಿದೆ. ಇದನ್ನು ನೋಡಿದ ನಿಯಂತ್ರಣ ಕೊಠಡಿಯ ಸಿಬ್ಬಂದಿ ಭಯಭೀತರಾಗಿ ಕೊಠಡಿ ಒಳಗೆ ಹೋಗಿ ಬಾಗಿಲು ಹಾಕಿಕೊಂಡರು.
ಆಗ ಅಲ್ಲಿದ್ದ ನಾಯಿಗಳು ಚಿರತೆಯನ್ನು ಓಡಿಸಿದವು. ಇದರಿಂದ ಚಿರತೆ ಮತ್ತೆ ಅಲ್ಲಿಂದ ಕಾಡಿನೊಳಗೆ ಹೋಯಿತು. ಮತ್ತೆ ಪಾದಚಾರಿ ಮಾರ್ಗದಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಭಕ್ತರು ಅತ್ಯಂತ ಎಚ್ಚರಿಕೆಯಿಂದ ದರ್ಶನಕ್ಕೆ ಬರಬೇಕೆಂದು ದೇವಸ್ಥಾನದ ವತಿಯಿಂದ ಸೂಚಿಸಲಾಗಿದೆ. ಪುರಟ್ಟಾಸಿ ಮಾಸ ಆರಂಭವಾಗಿರುವುದರಿಂದ ತಿರುಪತಿಗೆ ಭಕ್ತರ ದಂಡೇ ಹರಿದು ಬರುತ್ತಿದೆ ಎಂಬುದು ಗಮನಾರ್ಹ.