ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಟಿಕೆಟ್ ಖರೀದಿ ಇನ್ನು ಸುಲಭ, ನೀವಿದ್ದಲ್ಲೇ ಸಿಗುತ್ತೆ ಟೆಕೆಟ್!
ಬೆಂಗಳೂರಿನಲ್ಲಿ ಎಲ್ಲಾ ರೈಲು ನಿಲ್ದಾಣಗಳು ಪ್ರಯಾಣಿಕರಿಂದ ಸದಾ ಗಿಜಿಗಿಡುತ್ತದೆ. ಹಬ್ಬ, ರಜಾ ದಿನಗಳಲ್ಲಿ ಟಿಕೆಟ್ ಖರೀದಿಸಲು ದೊಡ್ಡ ಕ್ಯೂ ನಿಲ್ಲಬೇಕು. ಆದರೆ ಇನ್ಮುಂದೆ ಈ ಚಿಂತೆ ಇಲ್ಲ. ನೀವು ನಿಂತ ಜಾಗದಲ್ಲೇ ಟಿಕೆಟ್ ಸಿಗಲಿದೆ. ಹೊಸ ವಿಧಾನ ಈಗಾಗಲೇ ಜಾರಿಯಾಗಿದೆ.
ಬೆಂಗಳೂರು ಮಹಾ ನಗರದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಪ್ರಮುಖ ಮೂರು ನಿಲ್ದಾಣಗಳು ಸದಾ ಪ್ರಯಾಣಿಕರಿಂದ ತುಂಬಿರುತ್ತದೆ. ಸಾಮಾನ್ಯ ದಿನದಲ್ಲಿ ಕೌಂಟರ್‌ಗೆ ತೆರಳಿ ಟಿಕೆಟ್ ಖರೀದಿಸಲು ಸಾಹಸ ಮಾಡಬೇಕು. ಇನ್ನು ಹಬ್ಬ,ರಜಾ ದಿನಗಳು ಅಂದರೆ ಕೇಳವುದೇ ಬೇಡ. ಟಿಕೆಟ್ ಖರೀದಿಗೆ ಕ್ಯೂ ನಿಲ್ಲಬೇಕು, ನೂಕು ನುಗ್ಗಲಿನ ಜೊತೆಗೆ ಹಲವು ಗಂಟೆಗಳ ಕಾಲ ಕ್ಯೂ ನಿಂತು ಟಿಕೆಟ್ ಖರೀದಿಸುವ ಅನಿವಾರ್ಯತೆ ಇತ್ತು.ಆದರೆ ಇದೀಗ ಸೌತ್ ವೆಸ್ಟರ್ನ್ ರೈಲ್ವೇ ಹೊಸ ರೈಲು ಟಿಕೆಟ್ ವಿಧಾನ ಜಾರಿಗೊಳಿಸಿದೆ. ಇಲ್ಲಿ ಪ್ರಯಾಣಿಕರು ಕ್ಯೂ ನಿಲ್ಲಬೇಕಿಲ್ಲ. ಪ್ರಯಾಣಿಕರು ಎಲ್ಲಿ ನಿಂತಿದ್ದಾರೋ ಅಲ್ಲೆ ಟಿಕೆಟ್ ಪಡೆಯಲು ಸಾಧ್ಯವಿದೆ.
ಸೌತ್ ವೆಸ್ಟರ್ನ್ ರೈಲ್ವೇಸ್ ಇದೀಗ ಎಂ ಯುಟಿಎಸ್( M-UTS) ಟಿಕೆಟ್ ಸಿಸ್ಟಮ್ ಜಾರಿಗೊಳಿಸಿದೆ. ಹೊಸ M-UTS( ಮೊಬೈಲ್ ಅನ್‌ರಿಸರ್ವ್ಡ್ ಟಿಕೆಟ್ ಸಿಸ್ಟಮ್) ಟಿಕೆಟ್ ವ್ಯವಸ್ಥೆ ಮೂಲಕ ರೈಲು ನಿಲ್ದಾಣಗಳ ಆವರಣದಲ್ಲಿ ಸಿಬ್ಬಂದಿಗಳು ಪ್ರಯಾಣಿಕರು ನಿಂತ ಜಾಗಕ್ಕೆ ತೆರಳಿ ರೈಲು ಟಿಕೆಟ್ ನೀಡಲಿದ್ದಾರೆ. ಹೀಗಾಗಿ ಪ್ರಯಾಣಿಕರು ಉದ್ದ ಕ್ಯೂ ನಿಂತು ಸಮಯ ವ್ಯರ್ಥ ಮಾಡಬೇಕಾದ ಅವಶ್ಯತೆ ಇಲ್ಲ. ಆಯಾ ರೈಲು ನಿಲ್ದಾಣಗಳ ಕೌಂಟರ್ ಹೊರಭಾಗ, ರೈಲು ನಿಲ್ದಾಣದ ಪ್ರವೇಶ ದ್ವಾರ ಸೇರಿದಂತೆ ರೈಲು ನಿಲ್ದಾಣದ ಆವರಣದಲ್ಲಿ ಈ ಸಿಬ್ಬಂದಿಗಳು ಸೇವೆ ನೀಡಲಿದ್ದಾರೆ.
ಸದ್ಯ ಈ ಟಿಕೆಟ್ ವ್ಯವಸ್ಥೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣಗಳಲ್ಲಿ ಲಭ್ಯವಿದೆ. ಈ ರೈಲು ನಿಲ್ದಾಣಧಲ್ಲಿ M-UTS ಮಶಿನ್ ಮೂಲಕವೂ ರೈಲು ಟಿಕೆಟ್ ಖರೀದಿಸಬಹುದು. ಆದರೆ ಹೊಸ ವ್ಯವಸ್ಥೆ ರೈಲು ನಿಲ್ದಾಣ 500 ಮೀಟರ್ ಆಸುಪಾಸಿನಲ್ಲಿ ಸಿಗಲಿದೆ.
ಹಲವರು ಮಶಿನ್ ಮೂಲಕ ಟಿಕೆಟ್ ಖರೀದಿಸುವುದಿಲ್ಲ. ಮಶಿನ್ ಆಪರೇಟ್ ಗೊತ್ತಿಲ್ಲದ ಹಲವರು ಕೌಂಟರ್‌ನಲ್ಲಿ ಕ್ಯೂ ನಿಂತು ಸಮಯ ವ್ಯರ್ಥವಾಗುತ್ತದೆ. ಹಲವು ಬಾರಿ ಬೆಳಗಿನ ರೈಲಿಗೆ ಹೊರಡಲು ಬಂದು ಟಿಕೆಟ್ ಸಿಗದೆ ಕೊನೆಗೆ ತಡ ರಾತ್ರಿ ರೈಲಿಗೆ ಪ್ರಯಾಣಿಸುತ್ತಿರುವ ಘಟನೆಗಳು ನಡೆಯುತ್ತಿದೆ. ಇದೀಗ ರೈಲು ಪ್ರಯಾಣಿಕರು ರೈಲು ನಿಲ್ದಾಣದ ಆವರಕ್ಕೆ ಬರುತ್ತಿದ್ದಂತೆ ಟಿಕೆಟ್ ಸೇವೆ ಸಿಗಲಿದೆ. ಹೀಗಾಗಿ ಯಾರೂ ಕಾಯಬೇಕಿಲ್ಲ, ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯೂ ಇಲ್ಲ ಎಂದು ಸೌತ್ ವೆಸ್ಟರ್ನ್ ರೈಲ್ವೇ ವಕ್ತಾರ ಡಾ. ಮಂಜುನಾಥ ಕನಮಾಡಿ ಹೇಳಿದ್ದಾರೆ.
ಸ್ಮಾರ್ಟ್‌ಫೋನ್ ಮೂಲಕ ಅಥವಾ ಮಶಿನ್ ಮೂಲಕ ಕಾಯ್ದಿರಿಸದ ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್ ಸೇರಿದಂತೆ ಟ್ರೈನ್ ಟಿಕೆಟ್‌ಗಳನ್ನು ಹೊಸ ವ್ಯವಸ್ಥೆ ಮೂಲಕ ಪ್ರಯಾಣಿಕರು ನಿಂತಿರುವ ಜಾಗಕ್ಕೆ ಅಥವಾ ಇರುವ ಜಾಗಕ್ಕೆ ತೆರಳಿ ಟಿಕೆಟ್ ವಿತರಿಸುತ್ತಾರೆ. ಟಿಕೆಟ್ ಬುಕಿಂಗ್ ಹಾಗೂ ಪ್ರಿಂಟಿಂಗ್ ಮಶೀನ್ ಹಿಡಿದಿರುವ ಸಿಬ್ಬಂದಿಗಳು ರೈಲು ನಿಲ್ದಾಣದ ಆಸುಪಾಸುಗಳಲ್ಲಿ ಕಾಣಸಿಗಲಿದ್ದಾರೆ. ಈ ಸಿಬ್ಬಂದಿಗಳು ರೈಲು ಟಿಕೆಟ್ ಯಾವುದೇ ವಿಳಂಬವಿಲ್ಲದೆ ಟಿಕೆಟ್ ನೀಡುತ್ತಾರೆ.
ಹೊಸ ವ್ಯವಸ್ಥೆಯಿಂದ ರೈಲಿನ ಆದಾಯಕೂಡ ಹೆಚ್ಚಲಿದೆ. ಕಾರಣ ಭಾರಿ ಜನಸಂದಣಿಯಿಂದ ಹಲವು ರೈಲುಗಳ ಕಾಯ್ದಿರಿಸದ ಸೀಟುಗಳ ಟಿಕೆಟ್ ಮಾರಾಟವಾಗದೇ ಉಳಿಯುತ್ತದೆ. ಇಲ್ಲಿ ಸಿಬ್ಬಂದಿಗಳೇ ರೈಲು ಪ್ರಯಾಣಿಕರ ಬಳಿ ತೆರಳಿ ಟಿಕೆಟ್ ವಿತರಿಸುವ ಕಾರಣ ಎಲ್ಲಾ ರೈಲುಗಳ ಕಾಯ್ದಿರಿಸದ ಟಿಕೆಟ್ ಬುಕ್ ಆಗಲಿದೆ ಎಂದು ಡಾ. ಮಂಜುನಾಥ ಕನಮಾಡಿ ಹೇಳಿದ್ದಾರೆ.