ಆಪರೇಷನ್ ಸಿಂದೂರ ಹೆಸರಲ್ಲಿ ರಿಲಯನ್ಸ್ ವಿವಾದ, ತಕ್ಷಣ ಜಾರಿಕೊಂಡ ಅಂಬಾನಿ ಕಂಪೆನಿ!
ರಿಲಯನ್ಸ್ ಇಂಡಸ್ಟ್ರೀಸ್ 'ಆಪರೇಷನ್ ಸಿಂದೂರ' ಹೆಸರನ್ನು ಟ್ರೇಡ್‌ಮಾರ್ಕ್ ಮಾಡಲು ಸಲ್ಲಿಸಿದ ಅರ್ಜಿಯನ್ನು ಹಿಂತೆಗೆದುಕೊಂಡಿದೆ. ಈ ಹೆಸರು ಭಾರತೀಯ ಸೇನೆಯ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಸೂಚಿಸುತ್ತದೆ, ಮತ್ತು ಈ ಕ್ರಮವು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಉಗ್ರರ ನೆಲೆಗಳ ದಾಳಿಯನ್ನು ಆಪರೇಷನ್ ಸಿಂದೂರ ಎಂಬ ಹೆಸರನ್ನು ನೋಂದಣಿ ಮಾಡಲು ಮುಕೇಶ್ ಅಂಬಾನಿ ಕಂಪೆನಿ ಸಲ್ಲಿಸಿದ ಅರ್ಜಿಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ರಿಲಾಯನ್ಸ್ ಸ್ಪಷ್ಟನೆ ನೀಡಿದೆ. ಕಂಪೆನಿಯ ನಿರ್ಧಾರ ಯಾವಾಗ ಇದು ವಿವಾದವಕ್ಕೆ ನಾಂದಿ ಹಾಡಿತೋ ತಕ್ಷಣ ಎಚ್ಚೆತ್ತ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರಿಸ್ (RIL) "ಆಪರೇಷನ್ ಸಿಂದೂರ" ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಲು ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಂಡಿದೆ.
ಈ ಹೆಸರಿನ ಅರ್ಜಿ ಅವರ ಮನರಂಜನಾ ವಿಭಾಗವಾದ ಜಿಯೋ ಸ್ಟುಡಿಯೋಸ್ ನಿಂದ "ಆಕಸ್ಮಿಕವಾಗಿ" ಕಿರಿಯ ಉದ್ಯೋಗಿಯೊಬ್ಬರಿಂದ ಸಲ್ಲಿಸಲಾಯಿತು. ಈ ಬಗ್ಗೆ ಆಂತರಿಕ ಪರಿಶೀಲನೆಯ ನಂತರ ಕಂಪನಿ ತಕ್ಷಣವೇ ಅರ್ಜಿಯನ್ನು ಹಿಂತೆಗೆದುಕೊಂಡಿತು ಎಂದು ಸ್ಪಷ್ಟಪಡಿಸಿದೆ. “ಭಾರತದ ಸೇನೆ ಮತ್ತು ಭಯೋತ್ಪಾದನಾ ವಿರುದ್ಧದ ಕಾರ್ಯಾಚರಣೆಗಳಲ್ಲಿ ಸೈನಿಕರು ತೋರಿದ ಶೌರ್ಯವನ್ನು ನಾವು ಗೌರವಿಸುತ್ತೇವೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂದೂರ್' ಬಗ್ಗೆ ನಮ್ಮ ತಂಡ ಹೆಮ್ಮೆಪಡುತ್ತದೆ." ಎಂದು ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸಿದೆ.
ಆಪರೇಷನ್ ಸಿಂದೂರ ನಡೆದ ಹಿನ್ನೆಲೆಯಲ್ಲಿ ಮೇ 7, 2025ರಂದು ಬೆಳಿಗ್ಗೆ 10:42ರಿಂದ ಸಂಜೆ 6:27ರವರೆಗೆ ನಾಲ್ವರು ಈ ಹೆಸರನ್ನು ರಿಜಿಸ್ಟ್ರೇಷನ್ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಅವರೆಂದರೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿ, ಮುಂಬೈ ನಿವಾಸಿ ಮುಖೇಶ್ ಚೆತ್ರಮ್ ಅಗರವಾಲ್, ನಿವೃತ್ತ ವಾಯುಪಡೆ ಅಧಿಕಾರಿ – ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೆರ್ಹ್ ಮತ್ತು ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ. ಇವರು ಅರ್ಜಿ ಸಲ್ಲಿಸಿದ್ದ ವರ್ಗ “ನೈಸ್ ವರ್ಗ 41”, ಇದರಲ್ಲಿ ಶಿಕ್ಷಣ, ಚಲನಚಿತ್ರ, ಮಾಧ್ಯಮ ನಿರ್ಮಾಣ, ಕಾರ್ಯಕ್ರಮಗಳು, ಡಿಜಿಟಲ್ ಮಾಧ್ಯಮ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಈ ಸೇವೆಗಳು ಒಳಗೊಂಡಿರುತ್ತವೆ ಈ ವರ್ಗ ಸಾಮಾನ್ಯವಾಗಿ ಸಿನಿಮಾ ಸಂಸ್ಥೆಗಳು, ಟಿವಿ ಚಾನೆಲ್‌ಗಳು ಮತ್ತು ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದೆ. ಆದ್ದರಿಂದ “ಆಪರೇಷನ್ ಸಿಂದೂರ್” ಒಂದು ಸಿನಿಮಾ, ವೆಬ್‌ಸೀರಿಸ್ ಅಥವಾ ಡಾಕ್ಯುಮೆಂಟರಿ ಆಗಬಹುದೆಂಬ ಊಹೆ ವ್ಯಕ್ತವಾಗಿದೆ. ಜೊತೆಗೆ ಇಂತಹ ಸಮಯದಲ್ಲಿ ಕೂಡ ಈ ಸ್ವಾರ್ಥ ಏಕೆ ಎಂಬ ಟೀಕೆ, ವಿರೋಧ ವ್ಯಕ್ತವಾಗಿತ್ತು.
ಆಪರೇಷನ್ ಸಿಂದೂರ ಎಂಬ ಪದದ ಅರ್ಥವೇನು?
“ಆಪರೇಷನ್ ಸಿಂದೂರ” ಎಂಬುದು ಭಾರತದ ಸೇನೆ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿದ ಪ್ರತಿಕಾರ ದಾಳಿಗೆ ಇಟ್ಟ ಹೆಸರಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ನಾಗರಿಕರು ಹುತಾತ್ಮರಾದ ನಂತರ, ಸೇನೆ ಈ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಹಾಗೂ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗಳ ನೆಲೆಗಳು ಗುರಿಯಾಗಿದ್ದವು. “ಸಿಂದೂರ” ಎಂಬ ಪದ ಭಾರತೀಯ ಸಂಸ್ಕೃತಿಯಲ್ಲಿ ತ್ಯಾಗ, ಶಕ್ತಿಯ ಸಂಕೇತವಾಗಿದ್ದು, ಈ ಹೆಸರಿಗೆ ಭಾವನಾತ್ಮಕ ಮಹತ್ವವಿದೆ. ಗಂಡನ ಗೌರವದ ಸಂಕೇತವಾಗಿ ಪತ್ನಿ ತನ್ನ ಹಣೆಯ ಮೇಲೆ ಸಿಂದೂರ ಇಟ್ಟುಕೊಳ್ಳುತ್ತಾಳೆ. ಆದರೆ ಪಹಲ್ಗಾಮ್ ದಾಳಿಯಲ್ಲಿ ಗಂಡನನ್ನು ಪತ್ನಿಯ ಎದುರೇ ಕೊಂದು ಆಕೆಯ ಪವಿತ್ರ ಸಿಂದೂರವನ್ನು ಉಗ್ರರು ಅಳಿಸಿ ಹಾಕಿದ್ದರು. ಇದಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ.
ಅಂತಹ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಬಹುದೆ?
ಭಾರತದಲ್ಲಿ ಸೇನೆಯ ಕಾರ್ಯಾಚರಣೆಯ ಹೆಸರುಗಳು ಕಾನೂನುಬದ್ಧವಾಗಿ ಸುರಕ್ಷಿತವಾಗಿಲ್ಲ. ಅಂದರೆ, ಯಾವೊಬ್ಬರೂ ಅಂತಹ ಹೆಸರನ್ನು ವ್ಯಾಪಾರದ ಉದ್ದೇಶಕ್ಕೆ ಬಳಸಲು ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಟ್ರೇಡ್‌ಮಾರ್ಕ್ ಕಾಯಿದೆ ಪ್ರಕಾರ, ಯಾವುದೇ ಹೆಸರು ಸಾರ್ವಜನಿಕ ಭಾವನೆಗೆ ಧಕ್ಕೆ ಉಂಟುಮಾಡಿದರೆ ಅಥವಾ ಗೊಂದಲ ಮೂಡಿಸಬಹುದಾದರೆ, ಅದನ್ನು ನೋಂದಾಯಿಸುವುದಿಲ್ಲ. ಕೆಲವೊಮ್ಮೆ ಈ ರೀತಿ ಅರ್ಜಿಗಳನ್ನು ತಡೆಹಿಡಿಯಲು ಇನ್ನೊಬ್ಬರು ವಿರೋಧಿಸಿ ಅರ್ಜಿ ಸಲ್ಲಿಸಬಹುದು ಅಥವಾ ಸಂಬಂಧಿತ ಕಂಪನಿಗಳು ಪರಸ್ಪರ ಒಪ್ಪಂದಕ್ಕೆ ಬರಬಹುದು.