ಏರ್ ಇಂಡಿಯಾ ದುರಂತಕ್ಕೆ ಮರುಗಿದ ಮುಕೇಶ್ ಅಂಬಾನಿಯಿಂದ ಅತೀ ದೊಡ್ಡ ಘೋಷಣೆ
ಏರ್ ಇಂಡಿಯಾ ವಿಮಾನ ದುರಂತಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಮರುಗಿದ್ದಾರೆ. ತೀವ್ರ ನೋವು ಹಾಗೂ ಆಘಾತ ವ್ಯಕ್ತಪಡಿಸಿರುವ ಮುಕೇಶ್ ಅಂಬಾನಿ ಇದೇ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.

ಏರ್ ಇಂಡಿಯಾ ವಿಮಾನ ದುರಂತ ಭಾರತದ ನಾಗರೀಕ ವಿಮಾನಯಾನ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ದುರಂತಗಳಲ್ಲೊಂದು. ವಿಮಾನದಲ್ಲಿ ಪ್ರಯಾಣಿಸಿದ 242 ಮಂದಿ ಪೈಕಿ 241 ಮಂದಿ ಮೃತಪಟ್ಟಿದ್ದಾರೆ. ಇನ್ನು ವಿಮಾನ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡ ಕಾರಣ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ 291ಕ್ಕೆ ಏರಿಕೆಯಾಗಿದೆ. ಇದೀಗ ಏರ್ ಇಂಡಿಯಾದ ವಿಮಾನ ದುರಂತಕ್ಕೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
ವಿಮಾನ ದುರಂತದಲ್ಲಿ ಮಡಿದವರ ಜೊತೆ ನಾವಿದ್ದೇನೆ. ಸದ್ಯ ನಡೆಯುತ್ತಿರುವ ಪರಿಹಾರ ಕಾರ್ಯ ಹಾಗೂ ಕುಟುಂಬಕ್ಕೆ ನಮ್ಮಿಂದ ಎಲ್ಲಾ ನೆರವು ನೀಡಲಾಗುತ್ತದೆ ಎಂದು ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ನಾನು, ನೀತಾ ಅಂಬಾನಿ ಹಾಗೂ ರಿಲಯನ್ಸ್ ಸಂಪೂರ್ಣ ಕುಟುಂಬ ನೋವಿನಲ್ಲಿದೆ. ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಿಂದ ಆದ ಜೀವಹಾನಿಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ. ಈ ದುರಂತದಿಂದ ಭರಿಸಲಾರದ ನಷ್ಟಕ್ಕೆ ಗುರಿಯಾಗಿರುವ ಪ್ರತಿ ಕುಟುಂಬಕ್ಕೆ ನಮ್ಮ ಪ್ರಾಮಾಣಿಕ ಹಾಗೂ ಹೃದಯಸ್ಪರ್ಶಿ ಸಂತಾಪ ಎಂದು ಅಂಬಾನಿ ಹೇಳಿದ್ದಾರೆ.
ಈ ದುಃಖದ ಸನ್ನಿವೇಶದಲ್ಲಿ ರಿಲಯನ್ಸ್ ನಿಂದ ಸಂಪೂರ್ಣವಾದ ಬೆಂಬಲ ನೀಡಲಾಗುತ್ತದೆ. ಈಗ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಮಾರ್ಗದಲ್ಲಿಯೂ ನೆರವಾಗುತ್ತೇವೆ. ಈ ರೀತಿಯ ಊಹಿಸಲು ಕೂಡ ಸಾಧ್ಯವಾಗದಂಥ ದುರ್ಘಟನೆಯಿಂದ ದುಃಖ ಅನುಭವಿಸುತ್ತಿರುವ ಪ್ರತಿಯೊಬ್ಬರಿಗೆ ಇದರಿಂದ ಹೊರಬರುವುದಕ್ಕೆ ಶಕ್ತಿ ದೊರೆಯಲಿ . ನಮ್ಮ ಸಾಂತ್ವನ ಅವರ ಜೊತೆಗಿದೆ. ಓಂ ಶಾಂತಿ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಅಹಮ್ಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಜೂನ್ 12ರಂದು ಅಹಮ್ಮದಾಬಾದ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಪತನಗೊಂಡಿತ್ತು. ಟೇಕ್ ಆಫ್ ಆದ ಕೆಲವೆ ಸೆಕೆಂಡ್‌ಗಳಲ್ಲಿ ವಿಮಾನ ಪತನಗೊಂಡಿದೆ. ಅತೀ ದೊಡ್ಡ ವಿಮಾನ ಪತನ ಇದಾಗಿದ್ದು, ಅಪಘಾತದ ತೀವ್ರತೆಯೂ ಹೆಚ್ಚಾಗಿದೆ. ಹೀಗಾಗಿ ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ.
ಟಾಟಾ ಮಾಲೀಕತ್ವದ ಏರ್ ಇಂಡಿಯಾ ವಿಮಾನ ಪತನ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇತ್ತ ಮಡಿದವರ ಕುಟುಂಬಕ್ಕೆ ಟಾಟಾ ಗ್ರೂಪ್ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು ಗಾಯಾಳುಗಳಿಗೆ ಚಿಕಿತ್ಸೆ ವೆಚ್ಚಾ ಸೇರಿದಂತೆ ಇತರ ವೆಚ್ಚಗಳನ್ನು ಭರಿಸಲಿದೆ ಎಂದಿದೆ. ಇದೇ ವೇಳೆ ವಿಮಾನ ಪತನದಿಂದ ಹಾನಿಯಾಗಿರುವ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡವನ್ನು ಮರು ನಿರ್ಮಾಣ ಮಾಡುವುದಾಗಿ ಹೇಳಿದೆ. ಇತ್ತ ವಿದ್ಯಾರ್ಥಿಗಳಿಗೂ ನೆರವಾಗುವುದಾಗಿ ಟಾಟಾ ಸನ್ಸ್ ಚೇರ್ಮೆನ್ ಚಂದ್ರಶೇಖರನ್ ಹೇಳಿದ್ದಾರೆ.
ಬೋಯಿಂಗ್ 787 ಡ್ರೀಮ್ ಲೈನರ್ (AI 171) ವಿಮಾನದಲ್ಲಿ 230 ಪ್ರಯಾಣಿಕರು ಹಾಗೂ ಸಿಬ್ಬಂದಿ 12 ಮಂದಿ ಸೇರಿ ಒಟ್ಟು 242 ಜನ ಇದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕಂಡುಕೇಳರಿಯದಂಥ ಭೀಕರ ವಿಮಾನ ದುರಂತ ಇದಾಗಿದೆ. 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ