ಟ್ರೈನ್‌ನಲ್ಲಿ ರೀಲ್ಸ್ ಮಾಡುತ್ತೀರಾ ಜೋಕೆ, ಹೊಸ ನಿಯಮ ಜಾರಿಗೆ ತಂದ ರೈಲ್ವೇ ಇಲಾಖೆ!
ರೈಲು ಹಳಿಗಳ ಮೇಲೆ ಅಪಾಯಕಾರಿ ರೀಲ್ಸ್‌ಗಳನ್ನು ಮಾಡುವವರ ವಿರುದ್ಧ ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ಹೊಸ ನಿಯಮ ಜಾರಿಗೊಳಿಸಿರುವ ರೈಲ್ವೇ ಇಲಾಖೆ, ನಿಯಮ ಉಲ್ಲಂಘಿಸುವ ರೀಲ್ಸ್ ತಯಾರಕರ ಮೇಲೆ ಯಾವುದೇ ಕರುಣೆ ತೋರಿಸಲಾಗುವುದಿಲ್ಲ ಎಂದಿದೆ. ಹೊಸ ನಿಯಮವೇನು
ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಗಾಗಿ ಅಪಾಯಕಾರಿ ರೀಲ್ಸ್‌ಗಳನ್ನು ಮಾಡುವುದು ಹೆಚ್ಚಾಗಿದೆ. ಲೈಕ್ಸ್‌ಗಳಿಗಾಗಿ ಪ್ರಾಣವನ್ನೇ ಪಣಕ್ಕಿಡುವವರ ಸಂಖ್ಯೆ ಹೆಚ್ಚುತ್ತಿದೆ. ರೈಲು ಹಳಿಗಳ ಮೇಲೆ ರೀಲ್ಸ್ ಮಾಡಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ. ಹಲವರು ಸ್ಟಂಟ್ ಮಾಡಿ ದುರಂತ ಅಂತ್ಯಕಂಡಿದ್ದಾರೆ. ಮತ್ತೆ ಹಲವರು ಜೀವನವಿಡಿ ನರಕ ಅನುಭವಿಸುತ್ತಿದ್ದಾರೆ. ರೀಲ್ಸ್ ಹುಚ್ಚು, ಗೀಳು ಹೆಚ್ಚಾಗುತ್ತಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.
ರಾಜಸ್ಥಾನದಲ್ಲಿ ರೈಲು ಹಳಿಗಳ ಮೇಲೆ ಕಾರನ್ನು ಚಲಾಯಿಸಿ ರೀಲ್ಸ್ ಮಾಡಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇದೇ ರೀತಿ ರೈಲು ಹಳಿ ಮೇಲೆ ರೀಲ್ಸ್, ರೈಲಿನೊಳಗೆ ಅಪಾಯಾಕಾರಿ ರೀಲ್ಸ್, ರೈಲಿನ ಬಾಗಿಲ ಬಳಿ ನಿಂತು ಸ್ಚಂಟ್ ಸೇರಿದಂತೆ ಹಲವು ರೀತಿಯಲ್ಲಿ ರೀಲ್ಸ್ ಮಾಡಲಾಗುತ್ತಿದೆ. ಆದರೆ, ಇಂತಹ ಅಪಾಯಕಾರಿ ರೀಲ್ಸ್‌ಗಳನ್ನು ತಡೆಯಲು ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ.
ರೀಲ್ಸ್‌ಗಳಿಗಾಗಿ ಮಿತಿ ಮೀರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರೈಲ್ವೆ ಇಲಾಖೆ ನಿರ್ಧರಿಸಿದೆ. ರೈಲು ಹಳಿಗಳ ಮೇಲೆ ವಸ್ತುಗಳನ್ನು ಇಡುವುದು, ವಾಹನಗಳನ್ನು ಓಡಿಸುವುದು, ಅಪಾಯಕಾರಿ ಸಾಹಸಗಳು ರೈಲು ಪ್ರಯಾಣಿಕರ ಸುರಕ್ಷತೆಗೆ ಅಪಾಯಕಾರಿ. ಹೀಗಾಗಿ ಇಂತವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ.
ಸೆಲ್ಫಿಗಾಗಿ ರೈಲು ಹಳಿಗಳ ಮೇಲೆ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ. ನಿಯಮ ಉಲ್ಲಂಘಿಸುವ ರೀಲ್ಸ್ ತಯಾರಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೇ ಇಲಾಖೆ ಹೇಳಿದೆ. ಹೊಸ ನಿಯಮದಲ್ಲಿ ಅಪಾಯಾಕಾರಿ ಸ್ಟಂಟ್ ವಿಡಿಯೋ, ಹುಚ್ಚಾಟದ ರೀಲ್ಸ್, ಮೋಜು ಮಸ್ತಿಯ ರೀಲ್ಸ್‌ಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಹೊಸ ನಿಯಮದ ಪ್ರಕಾರ ಅಪಾಯಕಾರಿ ರೀಲ್ಸ್ ಮಾಡುವಂತಿಲ್ಲ. ರೈಲಿನ ಒಳಗೂ ರೀಲ್ಸ್ ಅಥವಾ ವಿಡಿಯೋ ರೆಕಾರ್ಡ್ ಇತರ ಪ್ರಯಾಣಿಕರಿಗೆ ಸಮಸ್ಯೆ ತಂದೊಡ್ಡಿದರೂ ಶಿಕ್ಷೆಗೆ ಗುರಿಯಾಗಲಿದ್ದೀರಿ. ರೀಲ್ಸ್ ಗೀಳು ರೈಲು ಹಳಿ, ರೈಲು ಪ್ರಯಾಣ, ಪ್ಲಾಟ್‌ಫಾರ್ಮ್ ಎಲ್ಲೇ ಮಾಡಿದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ.