ಎಂಬಿಎ ಓದಿ ಕುಲ ಕಸುಬಿಗೆ ಮರಳಿದ ಅರುಣ್ ಯೋಗಿರಾಜ್ ಬದುಕು ಸಾರ್ಥಕ, ಕಲೆ ಇವರಿಗೆ ಕರಾತಲಮಲಕ
ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾ ವಿಗ್ರಹ ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲು ಆಯ್ಕೆಯಾಗಿದೆ. ಆದರೆ ಈಗಾಗಲೇ ಅರುಣ್ ಕೆತ್ತನೆಯ ಅನೇಕ ವಿಗ್ರಹಗಳು ದೇಶದ ಹಲವೆಡೆ ಕಂಗೊಳಿಸುತ್ತಿವೆ.
ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮನ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರಕ್ಕೆ ಆಯ್ಕೆ ಮಾಡಲಾಗಿರುವುದು ಕರ್ನಾಟಕದ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಇದರಿಂದ ಅರುಣ್ ಕುರಿತಾಗಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಈಗಾಗಲೇ ಅರುಣ್ ಕೈಯ್ಯಲ್ಲಿ ಮೂಡಿ ಬಂದ ವಿಗ್ರಹಗಳು, ಪ್ರತಿಮೆಗಳು ದೇಶದ ಹಲವೆಡೆ ಕಂಗೊಳಿಸುತ್ತಿವೆ.
ಐದನೇ ತಲೆಮಾರಿನ ಶಿಲ್ಪಿ
ಮೈಸೂರಿನ ಪ್ರಸಿದ್ಧ ಶಿಲ್ಪಿಗಳ ಕುಟುಂಬದ ಐದನೇ ತಲೆಮಾರಿನವರು ಅರುಣ್ ಯೋಗಿರಾಜ್. ಇವರು ತಯಾರಿಸಿದ ಶಿಲ್ಪಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಾಪಿಸಲಾಗಿದೆ. ಇವರ ಅಜ್ಜ ಬಿ ಬಸವಣ್ಣ ದೇಶದ ಮೊದಲ ಪ್ರಧಾನಿ ನೆಹರೂಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರು ಪ್ರಧಾನಿ ಮೋದಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೆಲಸ ಬಿಟ್ಟು ಕುಶಲಕರ್ಮಿಯಾದ
ಅರುಣ್ ಯೋಗಿರಾಜ್ ಅವರ ರಕ್ತದಲ್ಲಿ ಕಸುಬುದಾರಿಕೆ ಇದ್ದರೂ, ಅವರು ಎಂಬಿಎ ಮಾಡಿದ ಬಳಿಕ ಎಂಎನ್ ಸಿಯಲ್ಲಿ ಕೆಲಕಾಲ ಕೆಲಸ ಮಾಡಿದರು. ಕಡೆಗೆ ಕೆಲಸ ಬಿಟ್ಟು ಕುಲಕಸುಬಿಗೆ ಹೊರಳಿದ ಅವರ ನಿರ್ಧಾರ ಸರಿಯಾಗಿಯೇ ಇತ್ತು.
ರಾಮನ ವಿಗ್ರಹಕ್ಕೂ ಮುನ್ನ ಅರುಣ್ ಯೋಗಿರಾಜ್ ಅವರು ದೇಶದ ಹಲವು ಪ್ರಮುಖ ಸ್ಥಳಗಳು ಮತ್ತು ದೇವಾಲಯಗಳಿಗೆ ಪ್ರತಿಮೆಗಳನ್ನು ಮಾಡಿದ್ದಾರೆ.
ಆದಿ ಶಂಕರಾಚಾರ್ಯ
ಹಿಂದೂಗಳ ನಂಬಿಕೆಯ ಕೇಂದ್ರವಾದ ಕೇದಾರನಾಥ ಧಾಮದಲ್ಲಿ ಸ್ಥಾಪಿಸಲಾದ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಿಸಿದ್ದು ಶಿಲ್ಪಿ ಅರುಣ್ ಯೋಗಿರಾಜ್ ಅವರೇ. ಈ ವಿಗ್ರಹವು ಸುಮಾರು 30 ಟನ್ ತೂಕವಿದೆ. ಈ ಮೂರ್ತಿಯನ್ನು ಕಪ್ಪು ಗ್ರಾನೈಟ್ ಕಲ್ಲಿನಿಂದ ಮಾಡಲಾಗಿದೆ.
ಸುಭಾಷ್ ಚಂದ್ರ ಬೋಸ್
ಅರುಣ್ ಯೋಗಿರಾಜ್ ನಿರ್ಮಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಹಿಂಭಾಗದ ಭವ್ಯವಾದ ಮೇಲಾವರಣದಲ್ಲಿ ಸ್ಥಾಪಿಸಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿಯವರ ಕೊಡುಗೆಯನ್ನು ಗೌರವಿಸಲು ಅವರ 125ನೇ ಜನ್ಮ ವಾರ್ಷಿಕೋತ್ಸವದ ಮೊದಲು ಈ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಪ್ರಧಾನಿ ಮೋದಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.
ಹನುಮಾನ್ ಪ್ರತಿಮೆ
ಮೈಸೂರು ಜಿಲ್ಲೆಯ ಚುಂಚನಕಟ್ಟೆಗೆ ಅರುಣ್ ಯೋಗಿರಾಜ್ 21 ಅಡಿ ಎತ್ತರದ ಹನುಮಾನ್ ಪ್ರತಿಮೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 15 ಅಡಿ ಎತ್ತರದ ಪ್ರತಿಮೆ, ಮೈಸೂರಿನಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸರ ಶ್ವೇತ ಅಮೃತಶಿಲಾ ಪ್ರತಿಮೆ, ಆರು ಅಡಿ ಎತ್ತರದ ಏಕಶಿಲಾ ನಂದಿ ಪ್ರತಿಮೆ, ಆರು ಅಡಿ ಎತ್ತರದ ಬನಶಂಕರಿ ದೇವಿಯ ಮೂರ್ತಿ ಸೇರಿದಂತೆ ಹಲವು ಪ್ರತಿಮೆಗಳನ್ನು ರಚಿಸಿದ್ದಾರೆ.
ಮೈಸೂರು ಮಹಾ ರಾಜ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಹಲವಾರು ಪ್ರಮುಖ ಸಂಸ್ಥೆಗಳು, ಉದ್ದಿಮೆಗಳು ಆರಂಭವಾದವು. ಅವರ ಪ್ರತಿಮೆ ಅರುಣ್ ಕೈಚಳಕದಲ್ಲಿ..
ತಾವು ಸೃಷ್ಟಿಸಿದ ಭಾರತದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕಂಚಿನ ಪ್ರತಿಮೆಯೊಂದಿಗೆ ಪೋಸ್ ನೀಡುತ್ತಿರುವ ಅರುಣ್ ಯೋಗಿರಾಜ್.
ಆಯುರ್ವೇದ ಪದ್ಧತಿಯ ಪಿತಾಮಹ, ಸುಶ್ರುತ ಸಂಹಿತ ಪುಸ್ತಕ ಬರೆದು ಭಾರತೀಯರಿಗೆ ಕೊಡುಗೆ ನೀಡಿದ ಮಹರ್ಷಿ ಸುಶ್ರುತ ಅವರ ಪ್ರತಿಮೆ ಕೆತ್ತನೆಯಲ್ಲಿ ತೊಡಗಿರುವ ಅರುಣ್.