ಗುರುವಾಯೂರು ದೇವಸ್ಥಾನಕ್ಕೆ ಮೋದಿ ಭೇಟಿ, ಬಿಜೆಪಿ ನಾಯಕ ನಟ ಸುರೇಶ್ ಗೋಪಿ ಪುತ್ರಿ ಮದುವೆಯಲ್ಲಿ ಭಾಗಿ!
ಪ್ರಧಾನಿ ನರೇಂದ್ರ ಮೋದಿ ಕೇರಳದ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದರೊಂದಿಗೆ ನಟ ಹಾಗೂ ಬಿಜೆಪಿ ನಾಯಕ ಸುರೇಶ್ ಗೋಪಿ ಅವರ ಪುತ್ರಿಯ ವಿವಾಹದಲ್ಲಿ ಭಾಗಿಯಾದರು.
ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು.
ತ್ರಿಶೂರ್‌ನಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ದೇವಸ್ಥಾನದ ಆಡಳಿತ ಮಂಡಳಿ ಸ್ಮರಣಿಕೆ ನೀಡಿ ಸನ್ಮಾನಿಸಿತು.
ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಒಳಗೆ ಸಾಂಪ್ರದಾಯಿಕವಾಗಿ ಪಂಚೆ, ಶಲ್ಯ ಧರಿಸಿ ಹೋಗಿದ್ದ ಪ್ರಧಾನಿ ಮೋದಿಯ ಭದ್ರತಾ ಸಿಬ್ಬಂದಿ ಕೂಡ ಇದೇ ವಸ್ತ್ರ ಧರಿಸಿದ್ದರು.
ಗುರುವಾಯೂರು ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಮಲದ ಹೂವಿನ ತುಲಾಭಾರವನ್ನೂ ನೀಡಿದರು. ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ವಿಭಾಗದಲ್ಲಿರುವ ಎಸ್‌ಪಿಜಿ ಗಾರ್ಡ್ಸ್‌ಗಳು ಸಾಮಾನ್ಯವಾಗು ಸೂಟು-ಬೂಟು ಧರಿಸಿರುತ್ತಿದ್ದರು. ಆದರೆ, ದೇವಸ್ಥಾನದ ಸಂಪ್ರದಾಯ ಇದಕ್ಕೆ ಅನುವು ಮಾಡಿಕೊಡದ ಕಾರಣ, ಹೆಂಗೋ ಪಂಚೆಯನ್ನು ಸುತ್ತಿಕೊಂಡು ಮೋದಿಗೆ ಭದ್ರತೆ ನೀಡಲು ತೆರಳಿದ್ದರು.
ಬೆಳಗ್ಗೆ 7.30ಕ್ಕೆ ಕೊಚ್ಚಿಯಿಂದ ಹೆಲಿಕಾಪ್ಟರ್ ಮೂಲಕ ಗುರುವಾಯೂರಿನ ಶ್ರೀಕೃಷ್ಣ ಕಾಲೇಜು ಮೈದಾನಕ್ಕೆ ಆಗಮಿಸಿದ ಪ್ರಧಾನಿ ಅವರನ್ನು ಸ್ವಾಗತಿಸಲು ನೂರಾರು ಜನರು ಮೈದಾನದಲ್ಲಿ ನೆರೆದಿದ್ದರು. ತ್ರಿಶೂರ್ ಜಿಲ್ಲಾಡಳಿತ ಹಾಗೂ ಬಿಜೆಪಿ ಮುಖಂಡರು ಪ್ರಧಾನಿ ಅವರನ್ನು ಬರಮಾಡಿಕೊಂಡರು.
ಗುರುವಾಯೂರು ದೇವಸ್ವಂ ವ್ಯವಸ್ಥಾಪನಾ ಸಮಿತಿಯಿಂದ ಶ್ರೀ ವಲ್ಸಂ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದ ನಂತರ ಶ್ರೀ ಮೋದಿ ಶ್ರೀಕೃಷ್ಣ ದೇವಸ್ಥಾನಕ್ಕೆ ತೆರಳಿದರು. ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಸೋಪಾನಂನಲ್ಲಿ ತುಪ್ಪ ಮತ್ತು ಕಮಲದ ಹೂವುಗಳನ್ನು ಅರ್ಪಿಸಿದರು. ಶ್ರೀ ಮೋದಿ ಅವರು ದೇವಸ್ಥಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಕಳೆದರು.
ಆ ಬಳಿಕ ಮೋದಿ ಅವರು ತಿರುವನಂತಪುರಂ ಮೂಲದ ಉದ್ಯಮಿ ಶ್ರೇಯಸ್ ಅವರೊಂದಿಗೆ ಬಿಜೆಪಿ ನಾಯಕ ಮತ್ತು ನಟ ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಅವರ ವಿವಾಹದಲ್ಲಿ ಪಾಲ್ಗೊಂಡರು.
ಸುಮಾರು 20 ನಿಮಿಷಗಳ ಕಾಲ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ನವ ದಂಪತಿಗಳಿಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಮಾಡಿ, ಅವರಿಗೆ ದೇವಸ್ಥಾನದ ವತಿಯಿಂದ ಉಡುಗೊರೆ ನೀಡಿದರು.
ಕೆಲವು ದಿನಗಳ ಹಿಂದೆ ಬಿಜೆಪಿ ನಾಯಕ ಹಾಗೂ ನಟ ಸುರೇಶ್ ಗೋಪಿ ಸಂಸಾರ ಸಮೇತರಾಗಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮದುವೆಗೆ ಆಹ್ವಾನಿಸಿದ್ದರು.
ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಭಕ್ತಾದಿಗಳೊಂದಿಗೆ ಸಂವಾದ ನಡೆಸಿದರು. ಕೆಲವರು ಅವರೊಂದಿಗೆ ಫೋಟೋ ಕೂಡ ತೆಗೆಸಿಕೊಂಡರು,
ಕೇರಳ ಚಿತ್ರರಂಗದ ಸ್ಟಾರ್ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್ ಸೇರಿದಂತೆ ಸಿನಿಮಾ ನಟರು ತಮ್ಮ ಕುಟುಂಬ ಸಮೇತ ಮದುವೆಯಲ್ಲಿ ಪಾಲ್ಗೊಂಡಿದ್ದರು.
ದೇವಸ್ಥಾನದಲ್ಲಿದ್ದ ಹಿರಿಯರಿಗೆ ಕೈಮುಗಿದು ನಮಸ್ಕರಿಸಿದ ಪ್ರಧಾನಿ ಮೋದಿ ಬಳಿಕ, ಕೇರಳ ಚಿತ್ರರಂಗದ ಗಣ್ಯರನ್ನೂ ಮಾತನಾಡಿಸಿದರು.
ಮುಂಬರುವ ಲೋಕಸಭಾ ಚುನಾವಣೆ ಮತ್ತು ತ್ರಿಶೂರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್ ಗೋಪಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸುರೇಶ್ ಗೋಪಿ ಅವರ ಮಗಳ ಮದುವೆಯಲ್ಲಿ ಮೋದಿ ಉಪಸ್ಥಿತಿಯು ರಾಜಕೀಯ ಪ್ರಾಮುಖ್ಯತೆಯನ್ನು ಪಡೆದಿದೆ. ಕೇರಳದಲ್ಲಿ ಬಿಜೆಪಿ ತನ್ನ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಕ್ಷೇತ್ರಗಳಲ್ಲಿ ತ್ರಿಶೂರ್ ಕೂಡ ಒಂದು.