ನಮ್ಮ ಸೈನಿಕರು ಭಾರತ ಮಾತೆಯ ರಕ್ಷಾ ಕವಚ : ಯೋಧರೊಂದಿಗೆ ಮೋದಿ ದೀಪಾವಳಿ ಸಂಭ್ರಮ!
ಸೈನಿಕರಿಗೆ ಸಿಹಿ ತಿನಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ "ನಮ್ಮ ಸೈನಿಕರು ಭಾರತ ಮಾತೆಯ ಸುರಕ್ಷಾ ಕವಚ" ಎಂದು ಹೇಳಿದ್ದಾರೆ. ಯೋಧರೊಂದಿಗೆ ಮೋದಿ ದೀಪಾವಳಿ ಆಚರಿಸಿದ ಫೋಟೋಗಳು ಇಲ್ಲಿವೆ ನೋಡಿ...!
ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ನಮ್ಮ ಸೈನಿಕರೊಂದಿಗೆ ಆಚರಿಸುವುದನ್ನು ನೋಡುವುದೇ ಚೆಂದ. ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ (ನವೆಂಬರ್ 4) ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ನೌಶೇರಾ ಸೆಕ್ಟರ್‌ಗೆ (Nowshera sector) ಆಗಮಿಸಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ದೆಹಲಿಯಿಂದ (Delhi) ಬೆಳಗ್ಗೆ 7:30ಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ ಪ್ರಧಾನಿ ಮೋದಿ, ಕನಿಷ್ಠ ಭದ್ರತಾ ವ್ಯವಸ್ಥೆಗಳು ಮತ್ತು ಯಾವುದೇ ಸಂಚಾರ ನಿರ್ಬಂಧಗಳಿಲ್ಲದೇ ರಾಜೌರಿಯ ನೌಶೇರಾ ಸೆಕ್ಟರ್‌ಗೆ ತಲುಪಿದ್ದಾರೆ. ಗಡಿ ಕಾಯುವ ಸೈನಿಕರಿಗೆ ಸಿಹಿ ತಿನಿಸುವ ಮೂಲಕ ದೀಪಾವಳಿ ಶುಭಾಶಯ ಕೋರಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ (Jammu and Kasmir) ರಜೌರಿಯ ಗಡಿ ಜಿಲ್ಲೆಯ ನೌಶೇರಾ ತಲುಪಿದ ಪ್ರಧಾನಿ, ಅಲ್ಲಿನ ಯೋಧರಿಗಾಗಿ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ತನ್ನೊಂದಿಗೆ ತಂದಿದ್ದೇನೆ ಎಂದು ಹೇಳಿದ್ದಾರೆ. "ನಮ್ಮ ಸೈನಿಕರು 'ಮಾ ಭಾರತಿ'ಯ 'ಸುರಕ್ಷಾ ಕವಚ'. ನಿಮ್ಮೆಲ್ಲರಿಂದಾಗಿ ನಮ್ಮ ದೇಶದ ಜನರು ಶಾಂತಿಯುತವಾಗಿ ಮಲಗಲು ಮತ್ತು ಹಬ್ಬಗಳ ಸಮಯದಲ್ಲಿ ಸಂತೋಷವಾಗಿರಲು ಸಾಧ್ಯ. "ನಿಮ್ಮ ಸಾಮರ್ಥ್ಯ ಹಾಗೂ ಶಕ್ತಿಯು ದೇಶದ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸುತ್ತದೆ" ಎಂದು ಪ್ರಧಾನಿ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಉಗ್ರಗಾಮಿಗಳ ಲಾಂಚ್ ಪ್ಯಾಡ್‌ಗಳ ವಿರುದ್ಧ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗಳನ್ನು (Surgicle strike) ನೆನಪಿಸಿಕೊಂಡ ಪ್ರಧಾನಿ, ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಈ ಬ್ರಿಗೇಡ್ ನಿರ್ವಹಿಸಿದ ಪಾತ್ರದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಿದೆ "ಅದರ ನಂತರ ಇಲ್ಲಿ ಭಯೋತ್ಪಾದನೆಯನ್ನು ಹರಡಲು ಅನೇಕ ಪ್ರಯತ್ನಗಳನ್ನು ಮಾಡಲಾಯಿತು, ಆದರೆ ನಮ್ಮ ಯೋಧರು ತಕ್ಕ ಉತ್ತರವನ್ನು ನೀಡಿದರು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗುರುವಾರ (ನ.4) ಮುಂಜಾನೆ, ಪ್ರಧಾನಿ ಮೋದಿ ದೀಪಾವಳಿಯ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ. "ದೀಪಾವಳಿಯ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯಗಳು. ಈ ಬೆಳಕಿನ ಹಬ್ಬ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ ಎಂದು ನಾನು ಬಯಸುತ್ತೇನೆ" ಎಂದು ಪ್ರಧಾನಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿಯವರು ತಮ್ಮ ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸುವ ಸಂಪ್ರದಾಯವನ್ನು ಆರಂಭಿಸಿದ್ದರು. ಅಂದಿನಿಂದ ಪ್ರತಿವರ್ಷ ಸೈನಿಕರಿಗೆ ಸಿಹಿತಿನಿಸುವ ಮೂಲಕ ಪ್ರಧಾನಿ ದೀಪಾವಳಿ ಆಚರಿಸುತ್ತಾರೆ. ಮೋದಿ ಸೈನಿಕರೊಂದಿಗೆ ದೀಪಾವಳಿ ಅಚರಿಸುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತವೆ.
ಕಳೆದ ವರ್ಷ ಜೈಸಲ್ಮೇರ್‌ಗೆ (Jaisalmer) ದೀಪಾವಳಿ ಆಚರಿಸಲು ಭೇಟಿ ನೀಡಿದ್ದ ವೇಳೆ ಪ್ರಧಾನಿ ಮೋದಿ, "2014ರಲ್ಲಿ ನಾನು ಪ್ರಧಾನಿಯಾದ ಮೊದಲ ವರ್ಷದಲ್ಲಿ ಸಿಯಾಚಿನ್‌ಗೆ ಹೋದಾಗ, ಜನರು ಆಶ್ಚರ್ಯಚಕಿತರಾದರು, ಆದರೆ ಇಂದು ನನ್ನ ಭಾವನೆಗಳು ಎಲ್ಲರಿಗೂ ತಿಳಿದಿದೆ. ಸೈನಿಕರ ನಡುವೆ ಇರುವುದು ನನ್ನ ಕುಟುಂಬದ ಜತೆ ಇದ್ದಂತೆ. ಇಂದು ನಾನು ನನ್ನ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸಲು ಇಲ್ಲಿದ್ದೇನೆ." ಎಂದು ಹೇಳಿದ್ದರು.
ವರ್ಷಗಳೇ ತೆಗೆದುಕೊಳ್ಳುತ್ತಿದ್ದ ರಕ್ಷಣಾ ಸಾಧನಗಳ ಖರೀದಿಯ ಬಗ್ಗೆ ಮೋದಿ ಮಾತನಾಡಿ. "ರಕ್ಷಣಾ ವಲಯದಲ್ಲಿ ಸ್ವಾವಲಂಬನೆಗೆ ಸಾಧಿಸುವುದು, ಹಳೆಯ ವಿಧಾನಗಳನ್ನು ಬದಲಾಯಿಸುವ ಏಕೈಕ ಮಾರ್ಗವಾಗಿದೆ" ಎಂದು ಅವರು ಹೇಳಿದ್ದರು. ಈ ಮೂಲಕ ರಕ್ಷಣಾ ವಲಯದಲ್ಲಿ ಭಾರತ ಬಲಿಷ್ಟವಾಗಿದೆ ಎಂಬ ಸಂದೇಶ ನೀಡಿದ್ದರು.
"ನೀವು ಹಿಮಭರಿತ ಬೆಟ್ಟಗಳ ಮೇಲೆ ಅಥವಾ ಮರುಭೂಮಿಯಲ್ಲೇ ವಾಸಿಸುತ್ತಿರಲಿ, ನಿಮ್ಮ ನಡುವೆ ಬರುವ ಮೂಲಕ ನನ್ನ ದೀಪಾವಳಿ ಸಾರ್ಥಕವಾಗುತ್ತದೆ, ನಾನು ನಿಮ್ಮ ಮುಖದ ಸಂತೋಷವನ್ನು ನೋಡುತ್ತೇನೆ, ಆಗ ನನಗೆ ದುಪ್ಪಟ್ಟು ಸಂತೋಷವಾಗುತ್ತದೆ" ಎಂದು ನರೇಂದ್ರ ಮೋದಿ ಜೈಸಲ್ಮೇರ್ ಭೇಟಿ ವೇಳೆ ಹೇಳಿದ್ದರು.
ಈ ವರ್ಷವು ಭಾರತ ಮಾತೆಗೋಸ್ಕರ ತಮ್ಮ ಪ್ರಾಣವನ್ನೇ ಲೆಕ್ಕಿಸದೇ ಮುನ್ನುಗ್ಗುವ ಭಾರತೀಯ ಸೇನೆಯ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಭಾರತದ ಪ್ರತಿಯೊಬ್ಬರ ಆಶೀರ್ವಾದ ಸೈನಿಕರೊಂದಿಗೆ ಇದೆ ಎಂದ ಸ್ಪಷ್ಟ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.