ಹೀಥ್ರೂ, ಸಿಂಗಾಪುರ ಏರ್‌ಪೋರ್ಟ್ ಬಿಟ್ಹಾಕಿ.. ಕೆಂಪೇಗೌಡ ಏರ್‌ಪೋರ್ಟ್ ಹೇಗಾಗಿದೆ ನೋಡಿದ್ರಾ!
ವಿಶ್ವದ ಐಷಾರಾಮಿ ಹಾಗೂ ಉತ್ಕೃಷ್ಟ ಏರ್‌ಪೋರ್ಟ್‌ಗಳ ವಿಚಾರ ಬಂದಾಗಲೆಲ್ಲಾ, ಇಂಗ್ಲೆಂಡ್‌ನ ಅತ್ಯಂತ ಜನಿನಿಬಿಡ ಹೀಥ್ರೂ ಏರ್‌ಪೋರ್ಟ್, ಸಿಂಗಾಪುರದ ಚಾಂಗಿ ಏರ್‌ಪೋರ್ಟ್ ಮಾತ್ರವೇ ಕಣ್ಣಿಗೆ ಕಾಣುತ್ತಿದ್ದವು. ಆದರೆ, ಈ ಎರಡು ಏರ್ಪೋರ್ಟ್‌ಗಳಷ್ಟೇ ಅತ್ಯಾಕರ್ಷವಾಗಿ ಸಿಲಿಕಾನ್ ಸಿಟಿಯ ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್-2 ನಿರ್ಮಾಣವಾಗಿದೆ. ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಇದರ ಉದ್ಘಾಟನೆ ಮಾಡಲಿದ್ದಾರೆ.
ಸಿಲಿಕಾನ್ ಸಿಟಿನ ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್-2 ಒಳಹೊಕ್ಕರೆ ಖಂಡಿತವಾಗಿ ಇದು ಭಾರತದ ಏರ್ಪೋರ್ಟ್ ಅಂತಾ ನಿಮಗೆ ಅನಿಸದೇ ಇರುವಷ್ಟು ಬದಲಾಗಿ ಹೋಗಿದೆ. ಉದ್ಯಾನನಗರಿ ಎನ್ನುವ ಹೆಸರಿಗೆ ತಕ್ಕಂತೆ ಇಡೀ ಏರ್‌ಪೋರ್ಟ್‌ನ ಟರ್ಮಿನಲ್-2 ಅನ್ನು ವಿನ್ಯಾಸ ಮಾಡಲಾಗಿದೆ.
ಅಂದಾಜು 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ನಿರ್ಮಾಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇದರ ಅನಾವರಣ ಮಾಡಲಿದ್ದಾರೆ.
ಟರ್ಮಿನಲ್-2 ಅನಾವರಣದೊಂದಿಗೆ ವಿಮಾನ ನಿಲ್ದಾಣದ ಚೆಕ್ ಇನ್ ಹಾಗೂ ಇಮಿಗ್ರೇಷನ್‌ನಲ್ಲಿ ಪ್ರಯಾಣಿಕರ ಸೇವೆ ನೀಡುವ ಸಾಮರ್ಥ್ಯವೂ ದ್ವಿಗುಣಗೊಳ್ಳಲಿದೆ. ಇಲ್ಲಿಯವರೆಗೂ ಒಂದೇ ಟರ್ಮಿನಲ್‌ನಲ್ಲಿ ಪ್ರೇಕ್ಷಕರು ವಿಮಾನಕ್ಕಾಗಿ ಒದ್ದಾಟ ಮಾಡಬೇಕಾಗಿತ್ತು.
ಹೊಸ ಟರ್ಮಿನಲ್ ಅನಾವರಣದಿಂದ ವಾರ್ಷಿಕವಾಗಿ 5 ರಿಂದ 6 ಕೋಟಿ ಪ್ರಯಾಣಿಕರು ಕೆಂಪೇಗೌಡ ಏರ್‌ಪೋರ್ಟ್‌ನಿಂದ ಪ್ರಯಾಣ ಮಾಡಬಹುದು. ಪ್ರಸ್ತುತ ವರ್ಷಕ್ಕೆ 2.5 ಕೋಟಿ ಜನ ಮಾತ್ರವೇ ಬೆಂಗಳೂರು ಏರ್‌ಪೋರ್ಟ್‌ನಿಂದ ಪ್ರಯಾಣ ಮಾಡುತ್ತುದ್ದಾರೆ.
ಟರ್ಮಿನಲ್ 2 ಅನ್ನು ಉದ್ಯಾನ ನಗರಿ ಬೆಂಗಳೂರಿನ ಹೆಸರಿನಂತೆ ವಿನ್ಯಾಸಗೊಳಿಸಲಾಗಿದೆ. ಟರ್ಮಿನಲ್-2ನಲ್ಲಿ ಏನಾದರೂ ನಡೆಯಲು ಆರಂಭಿಸಿದರೆ, ಪಾರ್ಕ್‌ನಲ್ಲಿ ನಡಿಗೆ ಮಾಡಿದಂತೆ ಅನಿಸಲಿದೆ ಎಂದು ಅರ್ಥೈಸಲಾಗಿದೆ.
ಪ್ರಯಾಣಿಕರು 10,000+ ಚದರ ಮೀಟರ್‌ಗಳಷ್ಟು ಹಸಿರು ಗೋಡೆಗಳು, ತೂಗುವ ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣ ಮಾಡುತ್ತಾರೆ. ಈ ಉದ್ಯಾನಗಳನ್ನು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲಿಯೇ ನಿರ್ಮಾಣ ಮಾಡಲಾಗಿದೆ.
ಈ ವಿಮಾನ ನಿಲ್ದಾಣವು ಈಗಾಗಲೇ ತನ್ನ ಕ್ಯಾಂಪಸ್‌ನಾದ್ಯಂತ ನವೀಕರಿಸಬಹುದಾದ ಶಕ್ತಿಯ 100% ಬಳಕೆಯೊಂದಿಗೆ ಸುಸ್ಥಿರತೆಯ ಮಾನದಂಡವನ್ನು ಸ್ಥಾಪಿಸಿದೆ. ಒಟ್ಟಾರೆ ಇಡೀ ಟರ್ಮಿನಲ್-2 ನೋಡಿದಾಕ್ಷಣ ವಿದೇಶದ ಅತ್ಯುನ್ನತ ಏರ್‌ಪೋರ್ಟ್ ಕಂಡಂತೆ ಭಾಸವಾಗಲಿದೆ.
ಏರ್‌ಪೋರ್ಟ್‌ನ ಟರ್ಮಿನಲ್-2 ಚಿತ್ರಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಉದ್ಯಾನನಗರಿಯ ಗರಿಮೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಮೋಹಕತಾರೆ ರಮ್ಯಾ ಕೂಡ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್-2 ವಿನ್ಯಾಸಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದು, ಏರ್‌ಪೋರ್ಟ್‌ನ ಟರ್ಮಿನಲ್-2 ಅತ್ಯಂತ ಆಕರ್ಷಕವಾಗಿ ಕಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಎರಡನೇ ಟರ್ಮಿನಲ್ ಉದ್ಘಾಟನೆಯೊಂದಿಗೆ ಪ್ರಧಾನಿಯವರು ವಿಮಾನ ನಿಲ್ದಾಣದ ಆವರಣದಲ್ಲಿ ಬೆಂಗಳೂರಿನ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಬೆಂಗಳೂರು ಭೇಟಿಯ ಸಮಯದಲ್ಲಿ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಅನಾವರಣ ಮಾಡಲಿದ್ದಾರೆ, ಇದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಆಗಿರಲಿದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳೊಂದಿಗೆ ಭಾರತದ ಅತ್ಯುತ್ತಮ ವಿನ್ಯಾಸ ಮತ್ತು ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.