Chandrayaan - 3: 'ಶಶಿ' ಸ್ಪರ್ಶಿಸಿದ ಇಸ್ರೋ: ವಿಜ್ಞಾನಿಗಳಿಗೆ ಅಭಿನಂದಿಸಲು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ
ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಆಗಸ್ಟ್ 26 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡಲಿದ್ದು, ಚಂದ್ರಯಾನ- 3 ಐತಿಹಾಸಿಕ ಸಾಧನೆಗೆ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
ಇಸ್ರೋದ ವಿಕ್ರಮ ಲ್ಯಾಂಡರ್ ಆಗಸ್ಟ್ 23, 2023 ರ ಸಂಜೆ 6.04ಕ್ಕೆ ಚಂದಿರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದೆ. ಪ್ರಧಾನಿ ಮೋದಿ ಈ ಕ್ಷಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕಣ್ತುಂಬಿಕೊಂಡು ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಿದ್ದರು. ಅಲ್ಲದೆ, ಮುಖ್ಯಸ್ಥ ಸೋಮನಾಥ ಅವರೊಂದಿಗೆ ದೂರವಾಣಿಯಲ್ಲೂ ಮಾತುಕತೆ ನಡೆಸಿದ್ದರು. ಆದರೂ, ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಆಗಸ್ಟ್ 26 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡಲಿದ್ದು, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
ಶನಿವಾರ ಬೆಳಗ್ಗೆ 5:55ಕ್ಕೆ ಪ್ರಧಾನಿ ಮೋದಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ ಬೆಳಗ್ಗೆ 7 ಗಂಟೆಯ ಸುಮಾರಿಗೆ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ವಿಕ್ರಮ ಲ್ಯಾಂಡರ್ ಅನ್ನು ನಿಯಂತ್ರಿಸಿದ ಸ್ಥಳ ಹಾಗೂ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿದ ಜಾಗಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. 7 ಗಂಟೆಯಿಂದ 8 ಗಂಟೆಯವರೆಗೆ ಸಂವಾದ ನಡೆಸಲಿದ್ದು, 8:05 ರ ವೇಳೆಗೆ ಆ ಸ್ಥಳದಿಂದ ನಿರ್ಗಮಿಸಲಿದ್ದಾರೆ. ನಂತರ ಮತ್ತೆ ರಸ್ತೆ ಮಾರ್ಗವಾಗಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲಿದ್ದು, 8:35ಕ್ಕೆ ವಿಶೇಷ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಲಿದ್ದಾರೆ.
ಪ್ರಧಾನಿ ಮೋದಿ ಸದ್ಯ ದಕ್ಷಿಣ ಆಫ್ರಿಕಾದಲ್ಲಿದ್ದು, ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆ, ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಿ ಇಸ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ. ಹಾಗೂ, ಅದ್ಭುತ ಸಾಧನೆ ಮಾಡಿದ ವಿಜ್ಞಾನಿಗಳು ಮತ್ತು ಸಂಸ್ಥೆಯ ಪ್ರತಿಯೊಬ್ಬರನ್ನು ಅಭಿನಂದಿಸಲು ಅವರು ಅಲ್ಲಿಗೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ಚಂದ್ರಯಾನ-3ರ ಯಶಸ್ಸಿನ ನಂತರ ಪ್ರಧಾನಿ ಮೋದಿ ಬುಧವಾರ ಸಂಜೆ ಇಸ್ರೋ ಮುಖ್ಯಸ್ಥರನ್ನು ಅಭಿನಂದಿಸಿದ್ದರು. ಚಂದ್ರಯಾನ-3 ಮಿಷನ್‌ನ ವಿಜಯೋತ್ಸವ ಮತ್ತು ಅದ್ಭುತ ವಿಜಯದ ನಂತರ, ನರೇಂದ್ರ ಮೋದಿ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರೊಂದಿಗೆ ಸಂವಾದ ನಡೆಸಿದರು. ಅವರು ದಕ್ಷಿಣ ಆಫ್ರಿಕಾದಿಂದ ಇಸ್ರೋ ಮುಖ್ಯಸ್ಥರಿಗೆ ಕರೆ ಮಾಡಿ ಈ ಐತಿಹಾಸಿಕ ಸಾಧನೆಗಾಗಿ ಅವರನ್ನು ಮತ್ತು ತಂಡವನ್ನು ಅಭಿನಂದಿಸಿದರು. ಶೀಘ್ರದಲ್ಲೇ ತಂಡಕ್ಕೆ ವೈಯಕ್ತಿಕವಾಗಿ ಶುಭಾಶಯ ಕೋರುವುದಾಗಿ ಹಂಚಿಕೊಂಡಿದ್ದರು.
ಆಗಸ್ಟ್ 23 ಬುಧವಾರ ಸಂಜೆ 6:04 ಕ್ಕೆ ಚಂದ್ರಯಾನ - 3 ಸಶಿಯ ದಕ್ಷಿಣ ಧ್ರುವನನ್ನು ಸ್ಪರ್ಸಿಸಿದ್ದು, ಈ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ ಮೊದಲ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ.