ಇದು ಫ್ಲೈಟ್ ಅಲ್ಲ, ಮೋದಿ ಉದ್ಘಾಟಿಸಲಿರುವ ಭಾರತೀಯ ರೈಲು!
ಮೊದಲ ನೋಟಕ್ಕೆ ವಿಮಾನವೇ ಅನ್ನೋ ಅನುಮಾನ ಬಂದರೂ ಅಚ್ಚರಿಯಿಲ್ಲ. ಆದರೆ ಇದು ಭಾರತೀಯ ರೈಲು. ನಾಳೆ ಉದ್ಘಾಟನೆ ಮಾಡಲಿರುವ 8 ರೈಲುಗಳ ಮಾಹಿತಿಯನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ವಿಮಾನಕ್ಕಿಂತ ಮಿಗಿಲಾದ, ಅತ್ಯಾಧುನಿಕ ಸೌಲಭ್ಯದ ಈ ರೈಲು, ಮಾರ್ಗ, ಸಮಯದ ಕುರಿತು ವಿವರ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಜ.17 ರ ಬೆಳಗ್ಗೆ 11 ಗಂಟೆ ಗುಜರಾತ್‌ನಲ್ಲಿ 8 ರೈಲು ಹಾಗೂ ರೈಲ್ವೇ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಸರ್ದಾರ್ ವಲ್ಲಬಾಯಿ ಪಟೇಲ್ ಏಕತಾ ಪ್ರತಿಮೆಗೆ ತಡೆ ರಹಿತ ರೈಲು ಸೇರಿದಂತೆ 8 ಹೊಸ ರೈಲಗಳನ್ನು ಮೋದಿ ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತು ಸ್ವತಃ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಅದರಲ್ಲೂ ಅಹಮ್ಮದಾಬಾದ್ ಹಾಗೂ ಕೆವಾಡಿಯಾ ನಡುವಿನ ಜನ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಇಡೀ ವಿಶ್ವದ ಗಮನ ಸೆಳೆದಿದೆ. ಕಾರಣ ಈ ರೈಲಿನ ಬೋಗಿಗಳು ವಿಶ್ವದರ್ಜೆ ಮಟ್ಟದಲ್ಲಿದ್ದು, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ರೀತಿಯಲ್ಲಿದೆ.
ದಾಭೋಯ್ - ಚಂದೋಡ್ ಗೇಜ್ ಪರಿವರ್ತಿಸಿದ ಬ್ರಾಡ್ ಗೇಜ್ ರೈಲ್ವೆ ಮಾರ್ಗ, ಚಂದೋಡ್ - ಕೆವಾಡಿಯಾ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗ, ಹೊಸದಾಗಿ ವಿದ್ಯುದ್ದೀಕರಿಸಿದ ಪ್ರತಾಪನಗರ - ಕೆವಾಡಿಯಾ ವಿಭಾಗ ನಾಳೆ ಉದ್ಘಾಟನೆಗೊಳ್ಳಲಿದೆ.
ರೈಲುಗಳ ಜೊತೆಗೆ ಪ್ರಧಾನಿ ಮೋದಿ ದಬೋಯ್, ಚಂದೋಡ್ ಮತ್ತು ಕೆವಾಡಿಯಾದ ಹೊಸ ನಿಲ್ದಾಣ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ. ಈ ಕಟ್ಟಡಗಳನ್ನು ಸ್ಥಳೀಯ ವೈಶಿಷ್ಟ್ಯಗಳು ಮತ್ತು ಆಧುನಿಕ ಪ್ರಯಾಣಿಕರ ಸೌಲಭ್ಯಗಳನ್ನು ಒಳಗೊಂಡ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.
ಕೆವಾಡಿಯಾ ನಿಲ್ದಾಣವು ಹಸಿರು ಕಟ್ಟಡ ಪ್ರಮಾಣೀಕರಣದೊಂದಿಗೆ ಭಾರತದ ಮೊದಲ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿನ ಬುಡಕಟ್ಟು ಪ್ರದೇಶದಲ್ಲಿನ ಅಭಿವೃದ್ಧಿ ಚಟುವಟಿಕೆಗಳಿಗೆ ನೂತನ ರೈಲು ಉತ್ತೇಜನ ನೀಡಲಿದೆ.
ಹೊಸ ರೈಲಿನಿಂದ ನರ್ಮದಾ ನದಿಯ ದಡದಲ್ಲಿ ನೆಲೆಸಿರುವ ಪ್ರಮುಖ ಧಾರ್ಮಿಕ ಮತ್ತು ಪ್ರಾಚೀನ ಯಾತ್ರಾ ಸ್ಥಳಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ, ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ,
ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಈ ಪ್ರದೇಶವು ಹೊಸ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ವಿಡಿಯೋ ಕಾನ್ಫೆರನ್ಸ್ ಮೂಲಕ ಮೋದಿ ಈ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ