ಸಿಜಿಐ-ಪಿಎಂ ಖಾಸಗಿ ಕಾರ್ಯಕ್ರಮ ಭೇಟಿ ಇದು ಮೊದಲೇನಲ್ಲ!
ಪ್ರಧಾನಿ ನರೇಂದ್ರ ಮೋದಿ ಅವರು ಸಿಜೆಐ ಡಿವೈ ಚಂದ್ರಚೂಡ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ರಾಜಿ ಮಾಡಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗಳನ್ನು ಕೆಲವರು ಎತ್ತಿದ್ದಾರೆ.
ಬುಧವಾರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪಿಎಂಓ ಒಂದು ವಿಡಿಯೋ ಹಂಚಿಕೊಂಡಿತ್ತು. ಮರಾಠಿ ಸ್ಟೈಲ್‌ನ ವಸ್ತ್ರ ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನಿವಾಸಕ್ಕೆ ಆಗಮಿಸಿದ್ದರು.
ಸಿಜೆಐ ಡಿವೈ ಚಂದ್ರಚೂಡ್ ಅವರ ನಿವಾಸದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಗೆ ನಿವಾಸಕ್ಕೆ ಬರುವಂತೆಯೂ ಅವರು ಆಹ್ವಾನ ನೀಡಿದ್ದರು. ಮನೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಜೆಐ ಚಂದ್ರಚೂಡ್ ಹಾಗೂ ಅವರ ಪತ್ನಿ ಕಲ್ಪನಾ ದಾಸ್ ಸ್ವಾಗತಿಸಿದ್ದರು
Chandrachud- Modi
ಆಹ್ವಾನವಿದ್ದ ಕಾರಣಕ್ಕೆ ಡಿವೈ ಚಂದ್ರಚೂಡ್ ಅವರ ದೆಹಲಿ ನಿವಾಸಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಗಣೇಶ ಮೂರ್ತಿಗೆ ಆರತಿ ಮಾಡಿ ಪೂಜೆ ಸಲ್ಲಿಸಿದರು. ಈ ವೇಳೆ ಸಿಜೆಐ ಸಂಸ್ಕೃತದ ಶ್ಲೋಕ ಹೇಳುವುದು ಕಂಡುಬಂದರೆ, ಅವರ ಪತ್ನಿ ಗಂಟೆ ಬಾರಿಸುತ್ತಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಡಪಂಥೀಯ ವ್ಯಕ್ತಿಗಳು ಹಾಗೂ ವಿರೋಧ ಪಕ್ಷಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಭೂಷಣ್ ಹಾಗೂ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಕೂಡ ನ್ಯಾಯಾಂಗದ ಸ್ವಾತಂತ್ರ್ಯವನ್ನು ಸಿಜೆಐ ರಾಜಿ ಮಾಡಿಕೊಂಡಿದ್ದಾರೆ ಎನ್ನುವ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು.
ದೇಶದ ಪ್ರಧಾನಿಗಳು ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಖಾಸಗಿ ಕಾರ್ಯಕ್ರಮದಲ್ಲಿ ಅಥವಾ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಇದು ಮೊದಲೇನಲ್ಲ. ಹಿಂದೆಯೂ ಇಂಥ ಘಟನೆಗಳು ಆಗಿದ್ದವು. ಅದರಲ್ಲಿ ಪ್ರಮುಖವಾದದ್ದು 2009ರ ಇಫ್ತಾರ್ ಪಾರ್ಟಿ.
ಅಂದು ಪ್ರಧಾನಿಯಾಗಿದ್ದ ಮನ್‌ಮೋಹನ್ ಸಿಂಗ್ ಅವರು 2009ರ ಸೆಪ್ಟೆಂಬರ್ 18 ರಂದು ಪ್ರಧಾನಿ ನಿವಾಸದಲ್ಲಿಯೇ ಇಫ್ತಾರ್ ಪಾರ್ಟಿ ಆಯೋಜನೆ ಮಾಡಿದ್ದರು. ಅಂದು ಈ ಕಾರ್ಯಕ್ರಮಕ್ಕೆ ಸಿಜೆಐ ಆಗಿದ್ದ ಕೆಜಿ ಬಾಲಕೃಷ್ಣನ್ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಭಾಗಿಯಾಗಿದ್ದರು.