- Home
- News
- India News
- Mahakumbhamela 2025: ವಸಂತ ಪಂಚಮಿಯಂದು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿ
Mahakumbhamela 2025: ವಸಂತ ಪಂಚಮಿಯಂದು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿ
Mahakumbhamela 2025: ಗುರುದೇವ್ ಶ್ರೀ ಶ್ರೀ ರವಿಶಂಕರರೊಡನೆ ಜಗತ್ತಿನ ಸಾವಿರಾರು ಸಾಧಕರು ವಿಶ್ವಧ್ಯಾನದಲ್ಲಿ ಪಾಲ್ಗೊಂಡರು ಮತ್ತು ಅನೇಕ ಮಿಲಿಯನ್ ಜನರು ಆನ್ಲೈನ್ ನ ಮೂಲಕ ಪಾಲ್ಗೊಂಡರು. 250 ಟನ್ ಆಹಾರ ಮತ್ತಿನ್ನಿತರ ಅವಶ್ಯಕ ವಸ್ತುಗಳನ್ನು ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ ನ ಸ್ವಯಂಸೇವಕರು ವಿತರಿಸಿದರು.

ಫೆಬ್ರವರಿ 2 ರಂದು ಬೆಳಿಗ್ಗೆ, ಆರ್ಟ್ ಆಫ್ ಲಿವಿಂಗ್ ನ ಶಿಬಿರದಿಂದ 800 ಮೀಟರ್ ಗಳಷ್ಟು ದೂರದಲ್ಲಿರುವ ನಾಗವಾಸುಕಿ ಘಟ್ಟದಲ್ಲಿ, ವಿದೇಶದಿಂದಲೂ ಬಂದಿರುವ ಭಕ್ತರೊಂದಿಗೆ ಗಂಗಾ ಸ್ನಾನವನ್ನು ಮಾಡಿದರು. ಅದರ ನಂತರ ಸತುವಾ ಬಾಬಾರವರ ಆಶ್ರಮಕ್ಕೆ ತೆರಳಿ, ಬಾಬಾರವರನ್ನು ಭೇಟಿ ಮಾಡಿ ಆಧ್ಯಾತ್ಮಿಕ ಚರ್ಚೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸೆಕ್ಟರ್ 8, ಬಜರಂಗ್ ದಾಸ್ ಮಾರ್ಗದಲ್ಲಿರುವ ಆರ್ಟ್ ಆಫ್ ಲಿವಿಂಗ್ ನ ಶಿಬಿರದಲ್ಲಿ ರುದ್ರಪೂಜೆ ಮತ್ತು ಗಣೇಶ ಹೋಮವನ್ನು ಆಯೋಜಿಸಲಾಗಿತ್ತು ಮತ್ತು ಭಕ್ತರು ಇದರಲ್ಲಿ ಶ್ರದ್ಧೆಯಿಂದ ಪಾಲ್ಗೊಂಡರು.
ಗುರುದೇವರು ಸ್ವಾಮಿ ಅವಧಾನಂದ ಗಿರಿಯವರ ಆಶ್ರಮಕ್ಕೆ ಭೇಟಿ ನೀಡಿ, ಅವರೊಡನೆ ಆಧ್ಯಾತ್ಮಿಕ ಚರ್ಚೆಯನ್ನು ನಡೆಸಿದರು. ಇದಾದ ನಂತರ ದಿಗಂಬರ ಅಖಾಡದ ಸಾಧುಸಂತರನ್ನು ಭೇಟಿ ಮಾಡಿದರು.
ಗುರುದೇವರ ವತಿಯಿಂದ ಶ್ರೀ ಶ್ರೀ ತತ್ವವು ಭಂಡಾರವನ್ನು ಆಯೋಜಿಸುತ್ತಿದ್ದು, ವಿಭಿನ್ನ ಸಾಧುಸಂತರಿಗೆ ಹತ್ತು ಟನ್ಗಳಷ್ಟು ಆಹಾರದ ಸಾಮಗ್ರಿಗಳನ್ನು ದಾನ ಮಾಡಿದರು. ಅದರಲ್ಲಿ ಬಿಸ್ಕತ್ತು, ತುಪ್ಪ, ಸೋಯ, ಇತ್ಯಾದಿ ಖಾದ್ಯ ವಸ್ತುಗಳು ಒಳಗೊಂಡಿದ್ದವು. ಆರ್ಟ್ ಆಫ್ ಲಿವಿಂಗ್ ನ ಶಿಬಿರದ ಸ್ಥಳದಲ್ಲಿ ಪ್ರತಿನಿತ್ಯವೂ ಭಂಡಾರವು ನಡೆಯುತಲಿದ್ದು, ಬರುವ ಭಕ್ತರಿಗೆ ಆಹಾರವನ್ನು ನೀಡಲಾಗುತ್ತಿದೆ.
ಮಹಾಕುಂಭಮೇಳವು ಆಧ್ಯಾತ್ಮಿಕ ಪರಂಪರೆಗಳ ಮತ್ತು ಸಂಸ್ಕೃತಿಯ ಭವ್ಯ ಸಂಗಮವಾಗಿದ್ದು, ಈ ವರ್ಷ ಅದಕ್ಕೆ ಮತ್ತೊಂದು ವಿಶೇಷವನ್ನು ಸೇರ್ಪಡಿಸಲಾಯಿತು. ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ, 'ಮಹಾಕುಂಭದಿಂದ ಗುರುದೇವರೊಡನೆ ಧ್ಯಾನ ಮಾಡಿ'ಕಾರ್ಯಕ್ರಮದಲ್ಲಿ ಅನೇಕ ಸಾವಿರ ಸಾಧಕರು ಭಾಗವಹಿಸಿದರು. ಮಂಗಳವಾರ ಸಂಜೆಯಂದು ಜಾಗತಿಕ ಆಧ್ಯಾತ್ಮಿಕ ಗುರುಗಳಾದ, ಮಾನವತಾವಾದಿಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಸತ್ಸಂಗವನ್ನು ನಡೆಸಿಕೊಟ್ಟರು. ಈ ಸತ್ಸಂಗದಲ್ಲಿ ಅನೇಕ ಸಾವಿರ ತೀರ್ಥಯಾತ್ರಿಗಳೊಡನೆ ಸಂತರೂ ಭಕ್ತಿ ಸಂಗೀತದಲ್ಲಿ ಮತ್ತು ಜ್ಞಾನದಲ್ಲಿ ಮೀಯಲು ಬಂದಿದ್ದರು.
ವಸಂತ ಪಂಚಮಿಯ ದಿನದಂದು ಅನೇಕ ಸಾವಿರ ಜನರಿಗೆ ಆಹಾರವನ್ನು ವಿತರಿಸಲಾಯಿತು. ಮಾಧ್ಯಮದವರೊಡನೆ ಮಾತನಾಡುತ್ತಾ ಗುರುದೇವರು, "ಈ ಕುಂಭಮೇಳವು ಒಂದು ಅದ್ಭುತವಾದ ಅನುಭವ. ಪ್ರತಿಯೊಬ್ಬರ ಆಧ್ಯಾತ್ಮಿಕ ಚೇತನವನ್ನು ಜಾಗೃತಗೊಳಿಸುವ ಅದ್ಭುತ ಅವಕಾಶವಿದು. ವಿಭಿನ್ನ ಸಂಪ್ರದಾಯ ಹಾಗೂ ನಂಬಿಕೆಗಳನ್ನು ಅನುಸರಿಸುತ್ತಿದ್ದರೂ ಸಹ, ಎಲ್ಲರೂ ಒಂದಾಗಿ ಸೇರಿ ಪೂಜಾಪಾಠಗಳನ್ನು ನಡೆಸಬಹುದು ಎಂದು ಇದು ತೋರಿಸುತ್ತದೆ. ಇಂದು ಜಗತ್ತಿನಲ್ಲಿ ಧರ್ಮ ಮತ್ತು ನಂಬಿಕೆಗಳ ನಡುವೆ ಸಂಘರ್ಷ ನಡೆಯುತ್ತಲಿರುವಾಗ, ಅವರೆಲ್ಲರೂ ಇಲ್ಲಿಗೆ ಬಂದು, ವಿವಿಧತೆಯಲ್ಲಿ ಏಕತೆಯ ಸಜೀವ ಉದಾಹರಣೆಯನ್ನು ಇಲ್ಲಿ ಕಾಣಬೇಕು" ಎಂದರು.
ಕುಂಭ ಪರ್ವದ ಸಾರವೆಂದರೆ ನಿಮ್ಮೊಳಗಿನ ಪೂರ್ಣತೆಯನ್ನು ತಿಳಿಯುವುದು. ಜ್ಞಾನ, ಭಕ್ತಿ ಮತ್ತು ಕರ್ಮ ಒಂದಾಗಿ ಬಂದಾಗ ಮಾತ್ರ ಇದು ನಡೆಯಲು ಸಾಧ್ಯ. ಇಲ್ಲಿ ಹರಿಯುತ್ತಿರುವ ಗಂಗೆಯು ಜ್ಞಾನದ ಪ್ರತೀಕವಾದರೆ, ಯಮುನೆಯು ಭಕ್ತಿಯ ಪ್ರತೀಕ ಮತ್ತು ಅಗೋಚರವಾಗಿರುವ ಸರಸ್ವತಿಯು ಕರ್ಮದ ಪ್ರತೀಕ" ಎಂದರು
ಗುರುದೇವರ ಮಾರ್ಗದರ್ಶನದಲ್ಲಿ ಇದೊಂದು ಪರಿವರ್ತನಕಾರಕವಾದ ಅನುಭವವಾಯಿತು. ಇದು ಐಕ್ಯತೆಯ, ಶಾಂತಿಯ, ಮಾನವತೆಗೆ ಕರುಣೆಯ ಸಂದೇಶವನ್ನು ಕಳುಹಿಸಿತು. ಗುರುದೇವರು, " ಗಂಗ, ಯಮುನಾ ಮತ್ತು ಸರಸ್ವತಿಯ ಸಂಗಮವು ಇಡ, ಪಿಂಗಳ ಮತ್ತು ಸುಷುಮ್ನ ಶಕ್ತಿ ನಾಡಿಗಳನ್ನು ಪ್ರತಿನಿಧಿಸುತ್ತವೆ. ಧ್ಯಾನದಲ್ಲಿ ನಾವು ಸ್ತಬ್ಧರಾದಾಗ ಅಮರತ್ವದ ಅಮೃತವನ್ನು ಅನುಭವಿಸುತ್ತೇವೆ" ಎಂದರು.
ಮಹಾಕುಂಭದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳು. ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ ಅನೇಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಉಚಿತ ಆಹಾರ, ಆಯುರ್ವೇದದ ಆರೈಕೆ ಮತ್ತು ತೀರ್ಥಯಾತ್ರಿಗಳ ಒಳಿತಿನ ಸೇವೆಯನ್ನು 25 ಸೆಕ್ಟರ್ ಗಳಲ್ಲೂ ನಡೆಸುತ್ತಿದೆ. ಆರ್ಟ್ ಆಫ್ ಲಿವಿಂಗ್ ನ ಶಿಬಿರದಲ್ಲಿ ಪ್ರತಿನಿತ್ಯ ಒಂದು ಟನ್ ಖಿಚಡಿಯನ್ನು ಪ್ರತಿನಿತ್ಯ ಎರಡು ಸಲ ಸಿದ್ಧಪಡಿಸಿ, 25,000-30,000 ಭಕ್ತರಿಗೆ ಹಂಚುತ್ತಿದೆ. ಇದರೊಡನೆ ಶ್ರೀ ಶ್ರೀ ತತ್ವದ ಎಂಟು ತಜ್ಞ ನಾಡಿ ವೈದ್ಯರು 5000 ಜನರಿಗೆ ನಾಡಿ ಪರೀಕ್ಷೆಯನ್ನು ನಡೆಸಿ, ಆಯುರ್ವೈದ್ಯಕೀಯ ಸಲಹೆಗಳನ್ನು ನೀಡಿದರು
ಸಂಜೆ ವಸಂತ ಪಂಚಮಿಯ ದಿನದಂದು ನಡೆದ ಸತ್ಸಂಗದಲ್ಲಿ ಗುರುದೇವರು ಎಲ್ಲರಿಗೂ ಧ್ಯಾನ ಮಾಡಿಸಿದರು. ಫೆಬ್ರವರಿ 4 ರಂದು ಗುರುದೇವ್ ಶ್ರೀ ಶ್ರೀ ರವಿಶಂಕರರು ಪ್ರಯಾಗ್ ರಾಜ್ ನಿಂದ 180 ದೇಶಗಳಲ್ಲಿರುವ ಕೋಟ್ಯಂತರ ಭಕ್ತರಿಗೆ ಆನ್ಲೈನ್ ಧ್ಯಾನವನ್ನು ನಡೆಸಿಕೊಡಲಿದ್ದಾರೆ.