ಮೂಲಭೂತವಾದಿಗಳ ಎದೆ ನಡುಗಿಸಿದ ಇಟಲಿಯ 'ಉಮಾ ಭಾರತಿ' ಜಾರ್ಜಿಯಾ ಮೆಲೋನಿ!
ಜಾಗತಿಕ ವಿಚಾರಗಳ ಬಗ್ಗೆ ಭಾರತದ ಪ್ರಮುಖ ವಾರ್ಷಿಕ ವೇದಿಕೆಯಾದ ರೈಸಿನಾ ಡೈಲಾಗ್‌ನ 2023ರ ಆವೃತ್ತಿಯ ಮುಖ್ಯ ಅತಿಥಿ, ಇಟಲಿ ದೇಶದ ಪ್ರಧಾನಿ ಜಾರ್ಜಿಯಾ ಮೆಲೋನಿ. ದ್ವಿಪಕ್ಷೀಯ ಸಂಬಂಧ ವಿಚಾರ ಬಂದರೆ, ಭಾರತ ಹಾಗೂ ಇಟಲಿ ಸಂಬಂಧ ಅಷ್ಟಕ್ಕಷ್ಟೇ. ಆದರೆ, 46 ವರ್ಷದ ಜಾರ್ಜಿಯಾ ಮೆಲೋನಿ ಇಟಲಿ ಅಧ್ಯಕ್ಷರಾದ ಬಳಿಕ ಭಾರತ-ಇಟಲಿ ಸಂಬಂಧ ಇನ್ನಷ್ಟು ವೃದ್ಧಿಯಾಗಬಹುದು.
ಇಟಲಿಯ ಪ್ರಧಾನಿ 46 ವರ್ಷದ ಜಾರ್ಜಿಯಾ ಮೆಲೋನಿ ಭಾರತದಲ್ಲಿದ್ದಾರೆ. ತಮ್ಮ ಬಲಪಂಥೀಯ ವಿಚಾರಧಾರೆಗಳ ಮೂಲಕವೇ ಅಧಿಕಾರದ ಗದ್ದುಗೆ ಹಿಡಿದ ಈಕೆ, ಇಟಲಿಯ ಮೊಟ್ಟಮೊದಲ ಮಹಿಳಾ ಪ್ರಧಾನಿ.
ಈಕೆಯ ನೇತೃತ್ವದ ಬ್ರದರ್ಸ್ ಆಫ್ ಇಟಲಿ ಪಕ್ಷ ಕಳೆದ ರಾಷ್ಟ್ರೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ 2ನೇ ಮಹಾಯುದ್ಧದ ಬಳಿಕ ಮೊಟ್ಟಮೊದಲ ಬಾರಿಗೆ ಸಂಪೂರ್ಣ ಬಲಪಂಥೀಯ ಧೋರಣೆ ಹೊಂದಿರುವ ಸರ್ಕಾರ ಇಟಲಿಯಲ್ಲಿ ಅಧಿಕಾರಕ್ಕೆ ಬಂದಿದೆ.
ಇಸ್ಲಾಂ ಮೂಲಭೂತವಾದಿಗಳಿಗೆ ಸಾರ್ವಜನಿಕವಾಗಿಯೇ ಎಚ್ಚರಿಕೆ ನೀಡಿದ ದಿಟ್ಟ ನಾಯಕಿ ಈಕೆ. 'ನಿಮ್ಮ ಇಮಾಮ್ ಯಾರು? ಪ್ರಾರ್ಥನೆಗಳಲ್ಲಿ ಏನನ್ನು ಕೇಳಿಕೊಳ್ಳುತ್ತೀರಿ? ನಿಮಗೆ ಬರುವ ಧನಸಹಾಯದ ಮೂಲ ಯಾವುದು? ಎನ್ನುವುದನ್ನು ನೀವು ತಿಳಿಸುವವರೆಗೂ ಇಟಲಿಯಲ್ಲಿ ಹೊಸ ಮಸೀದಿ ನಿರ್ಮಾಣಕ್ಕೆ ಅವಕಾಶವಿಲ್ಲ' ಎಂದು ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು.
ಭಾಷಾ ವಿಚಾರದಲ್ಲೂ ಸ್ಪಷ್ಟ ವಿಚಾರಧಾರೆಯನ್ನು ಹೊಂದಿರುವ ಜಾರ್ಜಿಯಾ ಮೆಲೋನಿ, ಇಟಲಿಯ ಮಸೀದಿಗಳಲ್ಲಿ ಮಾಡುವ ಪ್ರಾರ್ಥನೆ, ಇಟಾಲಿಯನ್ ಭಾಷೆಯಲ್ಲಿಯೇ ಇರಬೇಕು. ಬೇರೆ ಯಾವುದೇ ಭಾಷೆಯಲ್ಲಿ ಪ್ರಾರ್ಥನೆ ಮಾಡುವಂತಿಲ್ಲ ಎಂದು ದಿಟ್ಟವಾಗಿ ಹೇಳಿದ ಗಟ್ಟಿಗಿತ್ತಿ ಈಕೆ.
ಕಳೆದ ವರ್ಷ ಸ್ಪೇನ್‌ನಲ್ಲಿ ಇವರು ಮಾಡಿದ್ದ ಭಾಷಣ ಕೂಡ ಸಾಕಷ್ಟು ಹೈಲೈಟ್ ಆಗಿತ್ತು. ಎಲ್‌ಜಿಬಿಟಿ ಲಾಬಿ ನಡೆಯೋದಿಲ್ಲ. ಆದರೆ, ಲೈಂಗಿಕ ಗುರುತಿಗೆ ಸಹಮತವಿದೆ. ಇಸ್ಲಾಂ ಹಿಂಸಾಚಾರಕ್ಕೆ ನಮ್ಮ ನೆಲದಲ್ಲಿ ಅವಕಾಶವಿಲ್ಲ. ಗಡಿಗಳನ್ನು ಭದ್ರಪಡಿಸಲು ಹಿಂಜರಿಯೋದಿಲ್ಲ ಎಂದು ಹೇಳಿದ್ದರು.
2019ರಲ್ಲಿ ಅವರು ಮಾಡಿದ ಭಾಷಣದಲ್ಲಿ, 'ನಾನು ಜಾರ್ಜಿಯಾ, ನಾನು ಮಹಿಳೆ, ನಾನೊಬ್ಬಳು ತಾಯಿ, ನಾನು ಕ್ರಿಶ್ಚಿಯನ್' ಎಂದು ಹೇಳಿದ್ದರು. ಯಾರನ್ನೂ ಓಲೈಕೆ ಮಾಡಿ ಅಧಿಕಾರಿ ಹಿಡಿಯುವ ಆಸೆ ನನಗಿಲ್ಲ ಎಂದಿದ್ದರು.
2008ರಲ್ಲಿ ಸಿಲ್ವಿಯೋ ಬೆರ್ಲೋಸ್ಕನಿ ಸರ್ಕಾರದಲ್ಲಿ ಜಾರ್ಜಿಯಾ ಮೆಲೋನಿ, ಅತ್ಯಂತ ಕಿರಿಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.
ಬೆನಿಟೋ ಮುಸಲೋನಿಯನ್ನು ಜಾರ್ಜಿಯಾ ಮೆಲೋನಿ ಅಪಾರವಾಗಿ ಮೆಚ್ಚುತ್ತಾರೆ. ಅವರು ಏನೇ ಮಾಡಿದ್ದರೂ, ಎಲ್ಲವನ್ನೂ ಇಟಲಿಗಾಗಿ ಮಾಡಿದ್ದರು. ಕಳೆದ 50 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಮುಸಲೋನಿಗಿಂತ ದೊಡ್ಡ ನಾಯಕನಿಲ್ಲ ಎಂದು ಹೇಳಿದ್ದರು.
ಇಟಲಿಯ ಮೊಟ್ಟಮೊದಲ ಮಹಿಳಾ ಪ್ರಧಾನಿ ಎನಿಸಿಕೊಂಡಿರುವ ಜಾರ್ಜಿಯಾ ಮೆಲೋನಿ ಸರ್ಕಾರ, 2ನೇ ಮಹಾಯುದ್ಧದ ಬಳಿಕ ಇಟಲಿಯಲ್ಲಿ ರಚನೆಯಾದ ಸಂಪೂರ್ಣ ಬಲಪಂಥೀಯವಾದದ ಸರ್ಕಾರ ಎನಿಸಿದೆ.