ಭಾರತೀಯ ರೈಲ್ವೇಯಿಂದ ಗುಡ್ ನ್ಯೂಸ್, ಔಷಧಿ ಹೋಮ್ ಡೆಲಿವರಿ ಆರಂಭಿಸುತ್ತಿದೆ IRCTC
ಭಾರತೀಯ ರೈಲ್ವೇ ಇದೀಗ ಹೊಸ ಹೊಸ ಸೇವೆಗೆ ತೆರೆದುಕೊಳ್ಳುತ್ತಿದೆ. ಇದೀಗ ಪ್ರಮುಖವಾಗಿ ಔಷಧಿಗಳನ್ನು ಹೋಮ್ ಡೆಲಿವರಿ ಮಾಡಲು ರೈಲ್ವೇ ಮುಂದಾಗಿದೆ. ಮನೆಯಲ್ಲೇ ಕುಳಿತು ರೈಲ್ವೇ ಮೂಲಕ ಆರ್ಡರ್ ಮಾಡಿದರೆ ಸಾಕು, ಔಷಧಿ ಮನೆಗೆ ತಲುಪಲಿದೆ.

ಭಾರತೀಯ ರೈಲ್ವೇ ಹೊಸ ಅಧ್ಯಾಯ ಆರಂಭಿಸುತ್ತಿದೆ. ಆನ್‌ಲೈನ್ ಫಾರ್ಮಸಿ ಹಾಗೂ ಔಷಧಿಗಳ ಹೋಮ್ ಡೆಲಿವರಿ ಸೇವೆಯನ್ನು ಆರಂಭಿಸಲು ಸಜ್ಜಾಗಿದೆ. ಭಾರತೀಯ ರೈಲ್ವೇ ನೆಟ್‌ವರ್ಕ್ ಆಸ್ಪತ್ರೆಗಳಿಂದ ನೇರವಾಗಿ ಔಷಧಿಗಳನ್ನು ಆರ್ಡರ್ ಮಾಡಿದವರಿಗೆ ಮನೆ ಮನೆಗೆ ತಲುಪಿಸುವ ಮಹತ್ವದ ಸೇವೆಗೆ ಭಾರತೀಯ ರೈಲ್ವೇ ತಯಾರಿ ಆರಂಭಿಸುತ್ತಿದೆ.
ಭಾರತೀಯ ರೈಲ್ವೇ ಅಡಿಯಲ್ಲಿ 129 ಆಸ್ಪತ್ರೆ, 586 ಹೆಲ್ತ್ ಯುನಿಟ್ ಕಾರ್ಯನಿರ್ವಹಿಸುತ್ತಿದೆ. ಪ್ರಮುಖವಾಗಿ ಈ ಆಸ್ಪತ್ರೆಗಳು ರೈಲ್ವೇ ನೌಕರರು, ನಿವೃತ್ತಿಯಾದ ಉದ್ಯೋಗಿಗಳು, ಅವರ ಕುಟುಂಬಕ್ಕೆ ಆರೋಗ್ಯ ಸೇವೆ ಒದಗಿಸುತ್ತಿದೆ. ಇದೀಗ ರೈಲ್ವೇ ನೆಟ್‌ವರ್ಕ್ ಆಸ್ಪತ್ರೆ ಫಾರ್ಮಸಿಯನ್ನು ಆನ್‌ಲೈನ್ ಮೂಲಕ ಮನೆ ಮನೆಗೆ ತಲುಪಿಸಲು ರೈಲ್ವೇ ಮುಂದಾಗಿದೆ.
ಇಲ್ಲೀವರೆಗೆ ರೈಲ್ವೇ ಉದ್ಯೋಗಿಗಳು ಅಥವಾ ಸೌಲಭ್ಯ ಪಡೆಯಲು ಅರ್ಹರಾಗಿರುವವರು ಆಸ್ಪತ್ರೆಗೆ ಭೇಟಿ ನೀಡಿ ಔಷಧಿ ಅಥವಾ ತಪಾಸಣೆ ನಡೆಸಬೇಕಿತ್ತು. ಈ ವಿಧಾನವನ್ನು ಇ ಸಂಜೀವಿನಿ ಮೂಲಕ ಬದಲಿಸಲಾಗಿದೆ. ಇದೀಗ ಇ ಫಾರ್ಮಸಿ ಆನ್‌ಲೈನ್ ಡೆಲಿವರಿ ಭಾರತೀಯ ರೈಲ್ವೈ ಸೇವೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ.
ಔಷಧಿ ಹೋಮ್ ಡೆಲಿವರಿ ಮಾತ್ರವಲ್ಲ, ವೈದ್ಯರ ಅಪಾಯಿಟ್ಮೆಂಟ್, ಲ್ಯಾಬರೇಟೊರಿ ಫಲಿತಾಂಶ, ಮೆಡಿಕಲ್ ರೆಕಾರ್ಡ್ ಸೇರಿದಂತೆ ಇತರ ಕೆಲ ಸೇವೆಗಳು ಇದರ ಜೊತೆಗೆ ಲಭ್ಯವಾಗಲಿದೆ. ಈ ಮೂಲಕ ರೈಲ್ವೇ ನೌಕರರು, ನಿವೃತ್ತಿಯಾದವರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ಸೇವೆ ಪರಿಣಾಮಕಾರಿಯಾಗಿದೆ. ವಿಶೇಷ ಅಂದರೆ ಅತೀ ಕಡಿಮೆ ಬೆಲೆಯಲ್ಲಿ ಈ ಸೇವೆಗಳು ದೇಶಾದ್ಯಂತ ಲಭ್ಯವಾಗಲಿದೆ. ಇದಕ್ಕಾಗಿ ಭಾರತೀಯ ರೈಲ್ವೇ ಇದೀಗ ಮಹತ್ವದ ತಯಾರಿ ಆರಂಭಿಸಿದೆ.
ಹೊಸ ವರ್ಷದ ಆರಂಭದಲ್ಲಿ ಅಂದರೆ ಜನವರಿ 2025ರಲ್ಲಿ ರೈಲ್ವೇಯ ಹೊಸ ಸೇವೆಗೆ ಟೆಂಡರ್ ಆಹ್ವಾನಿಸಲಾಗುತ್ತದೆ. ಶೀಘ್ರದಲ್ಲೇ ಎಲ್ಲಾ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ಈ ಸೇವೆಯನ್ನು ಸರ್ಕಾರಿ ಆಸ್ಪತ್ರೆಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಭಾರತೀಯ ರೈಲ್ವೇ ಹಿರಿಯ ಅಧಿಕಾರಿಯೊಬ್ಬರು ಎಕನಾಮಿಕ್ಸ್ ಟೈಮ್ಸ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಜೊತೆಗೆ ಈ ಕುರಿತು ಮಾತುಕತೆ ನಡೆಸಿಲ್ಲ. ಆದರೆ ಭಾರತೀಯ ರೈಲ್ವೇ ರೂಪುರೇಶೆ ಸಿದ್ದಗೊಳಿಸಿದೆ. ಶೀಘ್ರದಲ್ಲೇ ಈ ಕುರಿತ ಚರ್ಚೆ ನಡೆಯಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಭಾರತೀಯ ರೈಲ್ವೇಯ ಈ ಯೋಜನೆ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ