ಪುಲ್ವಾಮಾ ಹುತಾತ್ಮರ ಹೆಣ್ಮಕ್ಕಳನ್ನು ದತ್ತು ಪಡೆದ ಮಹಿಳಾ IAS!
ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಇಂದು ಒಂದು ವರ್ಷ. CRPF ಸೈನಿಕರ ಮೇಲೆ ನಡೆದ ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ಕೃತ್ಯದಿಂದ ಇಡೀ ದೇಶದಲ್ಲೇ ಶೋಕ ಮಡುಗಟ್ಟಿತ್ತು. ಬಾಲಿವುಡ್ ಸ್ಟಾರ್ ಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ದೇಶದ ಜನ ಸಾಮಾನ್ಯರೂ ಹುತಾತ್ಮರ ಕುಟುಂಬದ ನೆರವಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದರು. ಇವರಲ್ಲಿ ಓರ್ವ ಮುಸ್ಲಿಂ ಮಹಿಳಾ IAS ಅಧಿಕಾರಿ ಕೂಡಾ ಸದ್ದು ಮಾಡಿದ್ದರು. ಇವರು ಹುತಾತ್ಮರಾದವರ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು.
ಇದು ಬಿಹಾರದ ಶೇಖ್ ಪುರದ IAS ಅಧಿಕಾರಿ ಹಾಗೂ ಡಿಎಂ ಇನಾಯತ್ ಖಾನ್ ಕತೆ. ಇನಾಯತ್ ಪುಲ್ವಾಮಾ ದಾಳಿ ಬಳಿಕ ಹುತಾತ್ಮರ ಹೆಣ್ಣು ಮಕ್ಕಳನ್ನು ದತ್ತುಪಡೆದು ಸದ್ದು ಮಾಡಿದ್ದರು.
ಇನಾಯತ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಇಬ್ಬರ ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರಿ. ಇನಾಯತ್ ಈ ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅವರನ್ನು ಹಾಡಿ ಹೊಗಳಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ರತನ್ ಠಾಕೂರ್ ಹಾಗೂ ಸಂಜಯ್ ಕುಮಾರ್ ರವರ ಹೆಣ್ಮಕ್ಕಳನ್ನು ದತ್ತು ಪಡೆಯುವುದಾಗಿ ಘೋಷಿಸಿದ್ದರು. ಇದನ್ನು ಹೊರತುಪಡಿಸಿ ಅವರು ತಮ್ಮ ಎರಡು ದಿನದ ವೇತನವನ್ನು ಹುತಾತ್ಮರಿಗೆ ನೀಡುವುದಾಗಿ ತಿಳಿಸಿದ್ದರು ಹಾಗೂ ಇತರರಿಗೂ ಹೀಗೆ ಮಾಡುವಂತೆ ಮನವಿ ಮಾಡಿದ್ದರು.
ತಮ್ಮ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೂ ತಮ್ಮ ವೇತನ ಹುತಾತ್ಮರ ಕುಟುಂಬಕ್ಕೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಇನಾಯತ್ ಖಾನ್ 2012ರ ಬ್ಯಾಚ್ ನ ಬಿಹಾರ ಕೇಡರ್ ನ IAS ಅಧಿಕಾರಿ. ಸದ್ಯ ಬಿಹಾರದ ಶೇಖ್ ಪುರದಲ್ಲಿ ಡಿಎಂ ಹುದ್ದೆಯಲ್ಲಿದ್ದಾರೆ. 2011ರ UPSC ಪರೀಕ್ಷೆಯಲ್ಲಿ ಅವರು 176ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
ಇನಾಯತ್ ಖಾನ್ ಮೂಲತಃ, ಉತ್ತರ ಪ್ರದೇಶದ ಆಗ್ರಾ ನಿವಾಸಿ. ಇಲ್ಲೇ ಅವರು ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದರು. ಇಂಜಿನಿಯರಿಂಗ್ ಪದವಿ ಪಡೆದ ಅವರು 1 ವರ್ಷ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ ಮಾಡಿದ್ದರು. ಬಳಿಕ ಅವರು ಈ ಉದ್ಯೋಗಕ್ಕೆ ವಿದಾಯ ಹಾಡಿದ್ದರು.