30 ವರ್ಷದಲ್ಲೇ ಕಾಶಿಯಲ್ಲಿ ಅತಿ ಹೆಚ್ಚು ಭಕ್ತರು; ವಿಶ್ವನಾಥನ ದರ್ಶನಕ್ಕೆ ಬೇಕು 5 ಗಂಟೆ
ಕಾಶಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಭಕ್ತರ ಸಂಖ್ಯೆ ಕೋಟಿ ದಾಟಿದೆ. ಕಳೆದ 30 ವರ್ಷಗಳಲ್ಲಿಯೇ ಇಷ್ಟು ಭಕ್ತರು ಕಾಶಿಗೆ ಭೇಟಿ ನೀಡಿರಲಿಲ್ಲ. ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಹಲವು ಸಂಚಾರ ಮಾರ್ಗಗಳನ್ನು ಬಂದ್ ಮಾಡಿದ್ದಾರೆ.

ಹಿಂದೂಗಳ ಪರಮಪವಿತ್ರ ಯಾತ್ರಾ ಸ್ಥಳ ಕಾಶಿ ಭಕ್ತರಿಂದ ತುಂಬಿ ತುಳುಕುತ್ತಿದೆ. ಜನವರಿ 24ರಿಂದ ಕಾಶಿಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯಲ್ಲಿ ದ್ವಿಗುಣಗೊಂಡಿದೆ. ಕಳೆದ ನಾಲ್ಕು ದಿನಗಳಲ್ಲಿ ಕಾಶಿಗೆ ಭೇಟಿ ನೀಡಿದ ಭಕ್ತರ ಸಂಖ್ಯೆ ಕೋಟಿ ಮೀರಿದೆ.
ಕಳೆದ 30 ವರ್ಷಗಳಲ್ಲೇ ಅತಿ ಹೆಚ್ಚು ಭಕ್ತರು ಕಾಶಿಗೆ ಭೇಟಿ ನೀಡಿದ್ದಾರೆ. ವಿಶ್ವನಾಥನ ದರ್ಶನಕ್ಕೆ ಕಿಲೋ ಮೀಟರ್ ಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕು. ಕಾಲಭೈರವ ದೇವಾಲಯದವರೆಗೂ ಭಕ್ತರ ಸರದಿ ಸಾಲು ಇತ್ತು ಎಂದರೆ ಭಕ್ತರ ಸಂಖ್ಯೆಯ ಅಂದಾಜು ಮಾಡಬಹುದು.
ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನೂಕುನುಗ್ಗಲು ತಪ್ಪಿಸಲು ಪೊಲೀಸರು ಹಲವು ಸಂಚಾರ ಮಾರ್ಗಗಳನ್ನು ಬಂದ್ ಮಾಡಿದ್ದಾರೆ. ಆಟೋ ಸಂಚಾರ ನಿಷೇಧಿಸಿದ್ದಾರೆ. ಕಾಶಿ ಪ್ರವೇಶಿಸುವ ಪ್ರವಾಸಿ ಟಿಟಿ, ಬಸ್ ಗಳನ್ನು 15 ಕಿಮೀ ದೂರದಲ್ಲೇ ತಡೆಯುತ್ತಿದ್ದಾರೆ.
ಇನ್ನು, ಗಂಗಾನದಿ ತಟಗಳೆಲ್ಲ ಜನರಿಂದ ತುಂಬಿ ತುಳುಕುತ್ತಿದೆ. ದಶ್ವಾಮೇಧ ಘಾಟ್ ಸೇರಿದಂತೆ ಎಲ್ಲ ಘಾಟ್‌ಗಳಲ್ಲೂ ಜನರು ಗಂಗಾಸ್ನಾನ ಮಾಡಿ, ಬೋಟಿಂಗ್ ನಲ್ಲಿ ನದಿ ಸುತ್ತುತ್ತಾ ಸಂಭ್ರಮಿಸುತ್ತಿದ್ದಾರೆ..
ಕುಂಭಮೇಳ ಮುಗಿಸಿ ಕಾಶಿಗೆ ಬರುತ್ತಿರುವರು ಒಂದೆಡೆಯಾದರೆ, ಕಾಶಿ ವಿಶ್ವನಾಥನ ದರ್ಶನ ಮಾಡಿ ಕುಂಭಮೇಳದತ್ತ ತೆರಳುತ್ತಿರುವವರು ಇನ್ನೊಂದೆಡೆ. ಒಟ್ಟಾರೆ, ಶಿವರಾತ್ರಿ ಮುಗಿಯುವವರೆಗೂ ಕಾಶಿಯಲ್ಲಿ ಭಕ್ತಸಾಗರ ಸೇರುವುದು ನಿಶ್ಚಿತ.