ಕೊರೋನಾಗಿಂತಲೂ ಹೆಚ್ಚು ಲಸಿಕೆ ಭಯ: ವೈದ್ಯರನ್ನು ನೋಡಿ ನದಿಗೆ ಹಾರಿದ ಜನ!
ಇಡೀ ದೇಶದಲ್ಲಿ ಸದ್ಯ ಕೊರೋನಾ ಎರಡನೇ ಅಲೆಯದ್ದೇ ಮಾತು. ಒಂದೆಡೆ ಈ ಸೋಂಕಿನಿಂದ ಮುಕ್ತಿ ಪಡೆಯಲು ಜನರು ಹಲವಾರು ಗಂಟೆ ಆನ್‌ಲೈನ್ ರಿಜಿಸ್ಟ್ರೇಷನ್ ಮಾಡಲು ವ್ಯಯಿಸಿ, ಸ್ಲಾಟ್ ಸಿಕ್ಕ ಬಳಿಕ ಕ್ಯೂ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಹೀಗಿರುವಾಗ ಉತ್ತರ ಪ್ರದೇಶದ ಬಾರಾಬಂಕೀ ಜಿಲ್ಲೆಯಲ್ಲಿ ಮಾತ್ರ ವಿಚಿತ್ರ ಘಟನೆ ಕಂಡು ಬಂದಿದೆ. ಇಲ್ಲಿನ ಹಳ್ಳಿಯೊಂದಕ್ಕೆ ಆರೋಗ್ಯ ಸಿಬ್ಬಂದಿ ತಾವಾಗೇ ಜನರಿಗೆ ಲಸಿಕೆ ನೀಡಲು ಬಂದಾಗ ಜನರು ಓಡಲಾರಂಭಿಸಿದ್ದಾರೆ. ಸಾಲದೆಂಬಂತೆ ಈ ಲಸಿಕೆ ಹಾಕಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಸರಯೂ ನದಿಗೆ ಹಾರಿದ್ದಾರೆ.
ಅಚ್ಚರಿಯುಂಟು ಮಾಡುವ ಈ ದೃಶ್ಯ ಕಂಡು ಬಂದಿದ್ದು ಬಾರಾಬಂಕೀ ಜಿಲ್ಲೆಯ ಸಿಸೌದಾ ಹಳ್ಳಿಯದ್ದು. ಇಲ್ಲಿ ಶನಿವಾರ ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಹಳ್ಳಿ ಬಿಟ್ಟು ಓಡಿ ಹೋಗಿ, ಸರಯೂ ನದಿಗೆ ಹಾರಿದ್ದಾರೆ. ಇಲ್ಲಿಂದ ಈಜಿ ಮತ್ತೊಂದು ದಡದಲ್ಲಿ ನಿಂತಿದ್ದಾರೆ.
ವೈದ್ಯರ ತಂಡ ಬರುತ್ತಿರುವುದನ್ನು ಕಂಡು ಗ್ರಾಮಸ್ಥರು ಅದೆಷ್ಟು ಭಯ ಪಟ್ಟಿದ್ದಾರೆಂದರೆ, ಏನು ಮಾಡುವುದೆಂದು ತೋಚದೆ ಸರಯೂ ನದಿಗಿಳಿದಿದ್ದಾರೆ. ಈ ವೇಳೆ ಜನರು ತಮ್ಮ ಜೀವದ ಬಗ್ಗೆಯೂ ಯೋಚಿಸಿಲ್ಲ.
ಅಲ್ಲದೇ ಎಸ್‌ಡಿಎಂ ರಾಜೀವ್ ಶುಕ್ಲಾ ಲಸಿಕೆ ಅಭಿಯಾನ ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸಲು ಬಂದಾಗ ಆರೋಗ್ಯ ಕಾರ್ಯಕರ್ತರು ಸುಮ್ಮನೆ ಕುಳಿತಿರುವುದನ್ನು ನೋಡಿದ್ದಾರೆ. ನಡೆದ ಘಟನೆ ಬಗ್ಗೆ ಮಾಹಿತಿ ಪಡೆದ ಅವರು ಗ್ರಾಮಸ್ಥರಿಗೆ ಬಹಳಷಷ್ಟು ಅರ್ಥೈಸಲು ಯತ್ನಿಸಿದ್ದಾರೆ, ಹೀಗಿದ್ದರೂ ಅವರು ಲಸಿಕೆ ಪಡೆಯಲು ಒಪ್ಪಿಕೊಳ್ಳಲಿಲ್ಲ. ಇನ್ನು ಕೆಲವರು ನದಿ ತಟಕ್ಕೆ ಬಂದು ಎಸ್‌ಡಿಎಂ ಬಳಿ ಮಾತನಾಡಿದ್ದಾರೆ. ಯಾರಾದರೂ ತಮ್ಮನ್ನು ಹಿಡಿದರೆ ನದಿಗೆ ಹಾರುವ ಪ್ಲಾನ್ ಮಾಡಿ ಹೀಗೆ ಮಾಡಿದ್ದಾರೆನ್ನಲಾಗಿದೆ.
ಬಹಳಷ್ಟು ಸಮಯವಾದ ಬಳಿಕ ಎಸ್‌ಡಿಎಂ ಅದೇಗೋ ನದಿಗಹೆ ಹಾರಿದವರನ್ನು ಮರಳಿ ಕರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೆ ಅವರಿಗೆ ಎಲ್ಲಾ ವಿಚಾರ ತಿಳಿಸಿ ಲಸಿಕೆ ಹಾಕುವಂತೆ ಮನವಿ ಮಾಡಿದ್ದಾರೆ. ಹೀಗಿದ್ದರೂ ಇಡೀ ಗ್ರಾಮದಲ್ಲಿ ಕೇವಲ ಹದಿನಾಲ್ಕು ಮಂದಿಯಷ್ಟೇ ಲಸಿಕೆ ಪಡೆದಿದ್ದಾರೆ. ಲಸಿಕೆ ಹಾಕಿಸಿಕೊಂಡರೆ ನಿಮ್ಮ ಪ್ರಾಣ ಉಳಿಯುತ್ತದೆ, ಕೊರೋನಾ ಸೋಂಕಿನಿಂದ ಕಾಪಾಡಿಕೊಳ್ಳಬಹುದೆಂದು ಹೇಳಿದರೂ ಪ್ರಯೋಜನವಾಗಿಲ್ಲ.
ಉತ್ತರ ಪ್ರದೇಶದಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇದೇ ಕಾರಣದಿಂದ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆ ಹಾಕಿಸಲು ಆರೋಗ್ಯ ಸಿಬ್ಬಂದಿಯ ತಂಡವನ್ನು ಕಳುಹಿಸುವ ಕಾರ್ಯ ಆರಂಭಿಸಿದೆ.