ನಿಮಿಷಾ ಪ್ರಿಯಾ ಬಿಡುಗಡೆಗೆ ರಾಜತಾಂತ್ರಿಕ ಪ್ರಯತ್ನ; ಇತ್ತ ಶಾಕ್ ನೀಡಿದ ತಲಾಲ್ ಕುಟುಂಬ
ಯೆಮನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾ ಬಿಡುಗಡೆಗೆ ಭಾರತ ಸರ್ಕಾರ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಇತ್ತ ಸಂತ್ರಸ್ತ ಕುಟುಂಬ ಯಾರ ಭೇಟಿಗೆ ಒಪ್ಪದೇ ಶಾಕ್ ನೀಡಿದೆ.

ಯೆಮನ್ ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಬಿಡುಗಡೆಗೆ, ಭಾರತ ಸರ್ಕಾರ ಇರಾನ್ ಸೇರಿದಂತೆ ಹಲವು ರಾಷ್ಟ್ರಗಳ ಜೊತೆ ಮಾತುಕತೆ ನಡೆಸುತ್ತಿದೆ. ನಿಮಿಷಾ ಪ್ರಿಯಾ ಮರಣದಂಡನೆಯನ್ನು ಮುಂದೂಡಿದ ನಂತರ ಬಿಡುಗಡೆಗೆ ರಾಜತಾಂತ್ರಿಕ ಪ್ರಯತ್ನಗಳು ಚುರುಕಾಗಿವೆ. ಯೆಮನ್ ಜೊತೆ ಉತ್ತಮ ಸಂಬಂಧ ಹೊಂದಿರುವ ರಾಷ್ಟ್ರಗಳ ಜೊತೆ ಮಾತುಕತೆ ನಡೆಸಿ ನಿಮಿಷಾಳ ಬಿಡುಗಡೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಂತ್ರಸ್ತ ತಲಾಲ್ ಕುಟುಂಬ ಯಾರನ್ನು ಭೇಟಿಯಾಗಲು ಮುಂದಾಗುತ್ತಿಲ್ಲ. ಹಾಗಾಗಿ ಸಂಧಾನ ಮಾತುಕತೆಗೆ ಭಾರತದಿಂದ ನಿಯೋಗ ಕಳುಹಿಸೋದು ಕಷ್ಟ ಎಂದು ಕೇಂದ್ರ ಸರ್ಕಾರ ಹೇಳಿದೆ. ಯೆಮೆನ್‌ಗೆ ಇಲ್ಲಿಂದ ಮಧ್ಯಸ್ಥಿಕೆ ತಂಡ ಕಳುಹಿಸುವ ಮೊದಲು ಎಲ್ಲಾ ಅಂಶಗಳನ್ನು ಪರಿಗಣಿಸಲಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮಧ್ಯಸ್ಥಿಕೆ ನಿಯೋಗ ಕಳುಹಿಸೋದು ಸೂಕ್ತವಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ನಾಲ್ವರು ಸದಸ್ಯರ ಮಧ್ಯಸ್ಥಿಕೆ ತಂಡವನ್ನು ಯೆಮೆನ್‌ಗೆ ಕಳುಹಿಸಲು ಅನುಮತಿ ನೀಡಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು. ಈ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ಅಟಾರ್ನಿ ಜನರಲ್ ನ್ಯಾಯಾಲಯದ ಗಮನಕ್ಕೆ ತಂದರು. ಇದೇ ವೇಳೆ ಮರಣದಂಡನೆ ಮುಂದೂಡಲಾಗಿದ್ದು, ಹೊಸ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂಬ ಮಾಹಿತಿಯನ್ನು ಅಟಾರ್ನಿ ಜನರಲ್ ಮಾಹಿತಿ ನೀಡಿದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಯೆಮನ್ ಗೆ ಹೋಗಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವಂತೆ ಸೂಚಿಸಿದೆ. ಮಧ್ಯಸ್ಥಿಕೆ ತಂಡ ಯೆಮೆನ್‌ಗೆ ಹೋಗುವ ಬಗ್ಗೆ ಕೇಂದ್ರ ಪರಿಶೀಲಿಸಲಿ ಎಂದು ನ್ಯಾಯಾಲಯ ಹೇಳಿದೆ. ನಿಮಿಷಾ ಪ್ರಿಯಾ ತಾಯಿ ಯೆಮೆನ್‌ನಲ್ಲಿದ್ದಾರೆ. ಕೇಂದ್ರ ಸರ್ಕಾರ ಅರ್ಜಿಯನ್ನು ಪರಿಗಣಿಸುತ್ತದೆ ಎಂದು ಆಕ್ಷನ್ ಕೌನ್ಸಿಲ್ ನ ಕಾನೂನು ಸಲಹೆಗಾರ ಸುಭಾಷ್ ಚಂದ್ರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಹಣ ಸ್ವೀಕರಿಸಿ ಮಗಳಿಗೆ ಕ್ಷಮೆ ನೀಡಬೇಕೆಂದು ನಿಮಿಷಾ ಪ್ರಿಯಾ ಪ್ರಯತ್ನಿಸುತ್ತಿದ್ದಾರೆ.
ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಜೊತೆ ನಾವು ಕೆಲಸ ಮಾಡಲು ಬಯಸುತ್ತವೆ. ನಾಲ್ಕು ಜನರ ನಿಯೋಗದಲ್ಲಿ ಸರ್ಕಾರದ ಇಬ್ಬರು ಪ್ರತಿನಿಧಿಗಳು ಇರಬೇಕೆಂದು ನಾವು ಮನವಿ ಮಾಡಿಕೊಂಡಿದ್ದೇವೆ ಎಂದು ಸುಭಾಷ್ ಚಂದ್ರನ್ ಹೇಳುತ್ತಾರೆ.
ಕೇರಳದ ಮುಸ್ಲಿಂ ವಿದ್ವಾಂಸ, ಇಂಟರ್‌ನ್ಯಾಷನಲ್ ಆ್ಯಕ್ಷನ್ ಕೌನ್ಸಿಲ್ ಮತ್ತು ಸರ್ಕಾರದ ಇಬ್ಬರು ಪ್ರತಿನಿಧಿಗಳು ಸೇರಿದಂತೆ ಒಟ್ಟು ನಾಲ್ಕು ಜನರ ನಿಯೋಗ ಯೆಮೆನ್‌ಗೆ ತೆರಳಲು ಅನುಮತಿ ನೀಡಬೇಕೆಂದು ಅರ್ಜಿ ಸಲ್ಲಿಕೆಯಾಗಿದೆ. ನಿಮಿಷಾ ಪ್ರಿಯಾ ಪ್ರಕರಣ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಲಾಗಿದೆ.