ಭಾರತದ ಈ ರಾಜ್ಯದಲ್ಲಿ ಮಳೆ ಬಳಿಕ ಜಮೀನಿನಲ್ಲಿ ಸಿಗುತ್ತೆ ವಜ್ರ
ಮುಂಗಾರು ಮಳೆಯ ನಂತರ ಈ ಜಿಲ್ಲೆಯಲ್ಲಿ ವಜ್ರಗಳು ಸಿಗುತ್ತವೆ ಎಂಬ ನಂಬಿಕೆಯಿದೆ. ಜನರು ಮಳೆಯ ನಂತರ ಮಣ್ಣಿನಲ್ಲಿ ಹೊಳೆಯುವ ಕಲ್ಲುಗಳನ್ನು ಹುಡುಕುತ್ತಾರೆ ಮತ್ತು ಇವುಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಾರೆ ಎಂದು ವರದಿಯಾಗಿದೆ.

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ದೇಶದ ಈ ರಾಜ್ಯದಲ್ಲಿ ವಜ್ರ ಸಿಗುತ್ತವೆ. ಈ ಪ್ರದೇಶದಲ್ಲಿ ಅದೃಷ್ಟ ಪರೀಕ್ಷೆಗಾಗಿ ಸುತ್ತಲಿನ ಜನರು ಆಗಮಿಸುತ್ತಾರೆ. ಮಾನ್ಸೂನ ಮಳೆಗಾಗಿ ಈ ಗ್ರಾಮದ ಜನರು ಕಾಯುತ್ತಿರುತ್ತಾರೆ.
ಭಾರತ ಕೃಷಿ ಪ್ರದಾನ ದೇಶ. ರೈತರು ಮುಂಗಾರು ಮಳೆಗೂ ಮುನ್ನವೇ ಕೃಷಿ ಭೂಮಿಯನ್ನು ಉಳುಮೆಗಾಗಿ ಹದೆಗೊಳಿಸುತ್ತಾರೆ. ಮಳೆಯಾದ ನಂತರ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಆದರೆ ಈ ಹಳ್ಳಿಯ ಜನರು ಮಾತ್ರ ಮಳೆ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಆದ್ರೆ ಕೃಷಿಗಾಗಿ ಅಲ್ಲ. ವಜ್ರಕ್ಕಾಗಿ ಮಳೆಯನ್ನು ಈ ಗ್ರಾಮದ ಜನರು ಕಾಯುತ್ತಿರುತ್ತಾರೆ.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮುಂಗಾರು ಮಳೆಯ ನಂತರ ವಜ್ರ ಸಿಗುತ್ತೆ ಎಂಬ ಮಾತಿದೆ. ಕರ್ನೂಲ್ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಮಳೆಯ ನಂತರ ಮಣ್ಣಿನ ಪದರವನ್ನು ತೆರವುಗೊಳಿಸಿದಾಗ, ಜನರು ಅಲ್ಲಿ ಅಮೂಲ್ಯವಾದ ಕಲ್ಲುಗಳು ಕಾಣಿಸುತ್ತವೆ. ಈ ಕಲ್ಲುಗಳು ಸಂಜೆ ಹೊಳೆಯಲು ಆರಂಭಿಸುತ್ತವೆ. ಈ ಕಲ್ಲುಗಳಿಗೆ ಭಾರೀ ಬೇಡಿಕೆ ಸಹ ಇದೆ ಎಂದು ಹೇಳಲಾಗುತ್ತದೆ.
ಈ ಹಿಂದೆ ಕರ್ನೂಲ್ ಜಿಲ್ಲೆಯ ಮಹಿಳೆಯೊಬ್ಬರಿಗೆ 17 ಲಕ್ಷ ರೂ. ಮೌಲ್ಯದ ವಜ್ರ (ಹೊಳೆಯುವ ಕಲ್ಲು) ಸಿಕ್ಕಿದೆ ಎಂಬ ಸುದ್ದಿ ಬಂದಿತ್ತು. ಈ ಸುದ್ದಿಯ ನಂತರ ಕರ್ನೂಲ್ ಜಿಲ್ಲೆಯ ಹಳ್ಳಿಗಳಲ್ಲಿ ಹೊಳೆಯುವ ಕಲ್ಲಿಗಾಗಿ ಹುಡುಕಾಟ ಆರಂಭವಾಗಿದೆ. ಸುತ್ತಮುತ್ತಲಿನ ಜನರು ಸಹ ಇಲ್ಲಿಗೆ ಆಗಮಿಸಿ ಕಲ್ಲುಗಳಿಗಾಗಿ ಹುಡುಕಾಟ ನಡೆಸುತ್ತಾರೆ.
ಏನಿದರ ಸತ್ಯ?
ಕರ್ನೂಲ್ ಜಿಲ್ಲೆಯಲ್ಲಿ ಅನೇಕ ಗಣಿಗಳಿದ್ದು, ಇಲ್ಲಿ ಗಣಿಗಾರಿಕೆ ನಡೆಯುತ್ತಿರುತ್ತದೆ. ಗಣಿ ಪ್ರದೇಶದ ಸುತ್ತಲಿನ ಭಾಗದಲ್ಲಿ ಮಳೆಯ ನಂತರ ಭೂಮೇಲ್ಭಾಗದ ಮಣ್ಣು ಕೊಚ್ಚಿಕೊಂಡು ಹೋದ ಬಳಿಕ ಇಲ್ಲಿ ಅತ್ಯಮೂಲ್ಯ ಬೆಲೆಬಾಳುವ ಹೊಳೆಯುವ ಕಲ್ಲು (ವಜ್ರ) ಕಾಣಿಸುತ್ತವೆ ಎಂದು ಈ ಭಾಗದ ಜನರು ಹೇಳುತ್ತಾರೆ. ಇಲ್ಲಿಯ ಜನರು ಮಳೆಯಾದ ನಂತರ ಮಣ್ಣು ತೆಗೆದು ಹೊಳೆಯುವ ಕಲ್ಲುಗಳಿಗಾಗಿ ಶೋಧ ನಡೆಸುತ್ತಾರೆ. ಇಲ್ಲಿ ಸಿಗುವ ಕಲ್ಲುಗಳನ್ನು ಮಾರಾಟ ಮಾಡಿ ಜನರು ಹಣ ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ.
ಆಕಾಶದಿಂದ ವಜ್ರದ ಮಳೆ ಆಗುತ್ತಾ?
ವಜ್ರಗಳು ಆಕಾಶದಿಂದ ಮಳೆಯಾಗುವುದಿಲ್ಲ. ಇಲ್ಲಿಯವರೆಗೆ ಎಲ್ಲಿಯೂ ವಜ್ರದ ಮಳೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಭಾರತದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಕಿಂಬರ್ಲೈಟ್ ಮತ್ತು ಲ್ಯಾಂಪ್ರೊಯಿಟ್ ಬಂಡೆಗಳ ಉಪಸ್ಥಿತಿ ಇದೆ, ಇದು ವಜ್ರ ನಿಕ್ಷೇಪಗಳನ್ನು ಸೂಚಿಸುತ್ತದೆ. ಅದಕ್ಕಾಗಿಯೇ ಮಳೆಯ ನಂತರ ಜನರು ಇಲ್ಲಿ ವಜ್ರಗಳು ಸಿಗುತ್ತವೆ.