ಗೆಳೆಯರೊಂದಿಗೆ ವಾಕ್ ಮಾಡ್ತಿದ್ದ CRPF ಯೋಧನ ಹತ್ಯೆ: ಕನ್ವರ್ ಯಾತ್ರೆಯಲ್ಲಿ ನಡೆದಿತ್ತು ಜಗಳ
ಹರಿಯಾಣದ ಸೋನಿಪತ್‌ನಲ್ಲಿ ೨೯ ವರ್ಷದ ಸಿಆರ್‌ಪಿಎಫ್ ಯೋಧ ಕೃಷ್ಣ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕನ್ವರ್ ಯಾತ್ರೆಯ ವೇಳೆ ಇಬ್ಬರು ಯುವಕರೊಂದಿಗೆ ಜಗಳವಾದ ಬಳಿಕ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೋನಿಪತ್: ಹರಿಯಾಣದ ಸೋನಿಪತ್ ನಗರದಲ್ಲಿ 29 ವರ್ಷದ ಸಿಆರ್‌ಪಿಎಸ್ ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಖೇಡಿ ದಮ್ಕನ್ ಗ್ರಾಮದ ನಿವಾಸಿಯಾಗಿರುವ ಯೋಧ ಕೃಷ್ಣ ಅವರನ್ನು ಹತ್ಯೆ ಮಾಡಲಾಗಿದೆ. ಮೃತ ಯೋಧನ ತಂದೆ ಬಲವಂತ್ ದೂರು ನೀಡಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ರಿಷಿಕಾಂತ್ ಮಾಹಿತಿ ನೀಡಿದ್ದಾರೆ.
ಕನ್ವರ್ ಯಾತ್ರೆ ವೇಳೆ ಇಬ್ಬರು ಯುವಕರೊಂದಿಗೆ ಸಿಆರ್‌ಪಿಎಫ್ ಯೋಧ ಕೃಷ್ಣ ಜಗಳ ಮಾಡಿಕೊಂಡಿದ್ದರು. ನಮ್ಮ ನಾಲ್ಕು ತಂಡ ಆರೋಪಿಗಳ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಿದೆ. ಸಿಆರ್‌ಪಿಎಫ್ ಯೋಧನಾಗಿದ್ದ ಕೃಷ್ಣ, ಚಂಡೀಗಢನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಎಸಿಪಿ ರಿಷಿಕೇಷ್ ಹೇಳಿದ್ದಾರೆ.
ಸಿಆರ್‌ಪಿಎಫ್ ಯೋಧ ಕೃಷ್ಣ ಜುಲೈ 16 ಮತ್ತು 17ರಂದು ರಜೆ ಪಡೆದು ಗ್ರಾಮಕ್ಕೆ ಆಗಮಿಸಿದ್ದರು. ಸ್ನೇಹಿತರೊಂದಿಗೆ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಜುಲೈ 22ರಂದು ಕನ್ವರ್ ಯಾತ್ರೆಯಿಂದ ಹಿಂದುರುಗಿ ಬರುತ್ತಿರುವ ಸಂದರ್ಭದಲ್ಲಿ ತಮ್ಮದೇ ಗ್ರಾಮದ ಮತ್ತೊಂದು ಯುವಕರ ಗುಂಪಿನೊಂದಿಗೆ ಜಗಳ ಮಾಡಿಕೊಂಡಿದ್ದರು.
ಈ ಘಟನೆ ನಡೆದ ಮರುದಿನ ರಾತ್ರಿ ಗೆಳೆಯರೊಂದಿಗೆ ರಸ್ತೆ ಬದಿಯಲ್ಲಿ ಕೃಷ್ಣ ವಾಕ್ ಮಾಡುತ್ತಿದ್ದರು. ಈ ವೇಳೆ ಗಾಡಿಯಲ್ಲಿ ಬಂದ ಇಬ್ಬರು ಯುವಕರು, ಪಿಸ್ತೂಲ್‌ನಿಂದ ಕೃಷ್ಣನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಎದೆಗೆ ಗುಂಡು ತಗುಲಿದ್ದು, ಕೃಷ್ಣ ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಕೂಡಲೇ ಕೃಷ್ಣನ ಗೆಳೆಯರು ಕುಟುಂಬಸ್ಥರು ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಈ ಸಂಬಂಧ ಅಜಯ್, ನಿಶಾಂತ್ ಮತ್ತು ಆನಂದ್ ಎಂಬ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.