9 ತಿಂಗಳ ಬಳಿಕ ಗಲ್ವಾನ್ ಘರ್ಷಣೆ ಸಾವು-ನೋವು ಒಪ್ಪಿಕೊಂಡ ಚೀನಾ!
ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇನ್ನು ಚೀನಾ ತಮಗೇನು ನಷ್ಟವಾಗಿಲ್ಲ, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಜಗತ್ತಿಗೆ ಸಾರುವ ಪ್ರಯತ್ನ ಮಾಡಿತ್ತು. ಆದರೆ 9 ತಿಂಗಳ ಬಳಿಕ ಸಾವು-ನೋವನ್ನು ಚೀನಾ ಒಪ್ಪಿಕೊಂಡಿದೆ.
ಭಾರತ-ಚೀನಾ ನಡುವಿನ ಗಡಿ ಸಂಘರ್ಷ ಅಂತ್ಯಗೊಳಿಸಲು ನಿರಂತರ ಮಾತುಕತೆ ನಡೆಯುತ್ತಿದೆ. ಭಾರತದ ಪ್ರಯತ್ನಕ್ಕೆ ಫಲ ಸಿಗುತ್ತಿದೆ. ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದೆ.
ಈ ಬೆಳವಣಿಗೆ ನಡುವೆ ಇದೀಗ ಭಾರತದ ಜೊತೆಗಿನ ಗಲ್ವಾನ್ ಘರ್ಷಣೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಅನ್ನೋದನ್ನು ಬಹಿರಂಗ ಪಡಿಸಿದೆ.
ಗಲ್ವಾನ್ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಆದರೆ ನಮಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವಿಶ್ವದ ಮುಂದೆ ನಾಟಕವಾಡಿತ್ತು. ಇದೀಗ ಗಲ್ವಾನ್ ಘರ್ಷಣೆಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿರುವುದನ್ನು ಚೀನಾ ಒಪ್ಪಿಕೊಂಡಿದೆ.
ವರದಿಗಳ ಪ್ರಕಾರ ಚೀನಾ ಸೇನಾ ಮಿಲಿಟರಿ ಕಮಾಂಡರ್ ಕ್ಸಿಜಿಯಾಂಗ್ ಗಲ್ವಾನ್ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಚೆನ್ ಹೊಂಗ್‌ಜನ್, ಚೆನ್.ಕ್ಸಿಯಾಂಗ್ರಾಂಗ್, ಕ್ಸಿಯೋ ಸಿಯುಯಾನ್ ಹಾಗೂ ವಾಂಗ್ ಝುಹರಾನ್ ಗಲ್ವಾನ್ ಗರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ
ಚೀನಾ ಸೇನೆ ಗಲ್ವಾನ್ ಘರ್ಷಣೆಯಲ್ಲಿ ಸಾವನ್ನಪ್ಪಿದ ನಾಲ್ವರು ಯೋಧರು ಮರಣೋತ್ತರ ಪ್ರಶಸ್ತಿ ನೀಡಿದೆ. ಅಧೀಕೃತವಾಗಿ ನಾಲ್ವರ ಹೆಸರನ್ನು ಚೀನಾ ಬಹಿರಂಗ ಪಡಿಸಿದೆ.
ರಷ್ಯಾದ ನ್ಯೂಸ್ ಎಜೆನ್ಸಿ TASS ತನ್ನ ಗಲ್ವಾನ್ ಘರ್ಷಣೆ ಕುರಿತ ವಿಸ್ತೃತ ವರದಿಯಲ್ಲಿ ಚೀನಾದ ಕನಿಷ್ಠ 45 ಯೋಧರು ಸಾವನ್ನಪ್ಪಿದ್ದಾರೆ ಎಂದಿತ್ತು.
ಮೇ ತಿಂಗಳಲ್ಲಿ ಗಲ್ವಾನ್‌ನಲ್ಲಿ ತಿಕ್ಕಾಟ ಆರಂಭಗೊಂಡಿತ್ತು. ಜೂನ್ ತಿಂಗಳಲ್ಲಿ ಗಲ್ವಾನ್ ಘರ್ಷಣೆ ನಡೆತ್ತು. ಕಬ್ಬಿಣ ರಾಡ್, ಕಲ್ಲುಗಳಿಂದ ಚೀನಾ ಸೇನೆ ಏಕಾಏಕಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿತ್ತು.
ಇದಕ್ಕೆ ಪ್ರತಿಯಾಗಿ ಭಾರತ ಕೂಡ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಭಾರತಕ್ಕಿಂತ ಹೆಚ್ಚಿನ ಸಾವು-ನೋವು ಚೀನಾಗೆ ಆಗಿದೆ ಅನ್ನೋ ಮಾಹಿತಿ ಇದೆ. ಆದರೆ ಚೀನಾ ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸಿತ್ತು. ಇದೀಗ ಒಂದೊಂದೆ ಸತ್ಯಗಳು ಹೊರಬರುತ್ತಿದೆ.