ಎಲ್ಲಾ ಬ್ಲಾಗರ್, ಯುಟ್ಯೂಬರ್‌ಗಳಿಗೆ ಶಾಕ್ ಕೊಟ್ಟ ರೈಲ್ವೆ: ಇದು ರಾಷ್ಟ್ರೀಯ ಭದ್ರತೆ ವಿಷಯ
ಪಾಕ್ ಪರ ಗೂಡಚರ್ಯೆ ಪ್ರಕರಣದ ಬೆನ್ನಲ್ಲೇ ಈ ಕ್ರಮಕೈಗೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಬ್ಲಾಗರ್‌ಗಳು ಮತ್ತು ಯೂಟ್ಯೂಬರ್‌ಗಳಿಗೆ ನಿರ್ಬಂಧ ಅನ್ವಯಿಸುತ್ತದೆ.

ಪಾಕ್ ಪರ ಗೂಡಚರ್ಯೆ ಮಾಡಿ ಹರಿಯಾಣ ಮೂಲದ ಜ್ಯೋತಿ ಮಲ್ಹೋತ್ರಾ ಬಂಧನಕ್ಕೊಳಗಾಗಿದ್ದಾಳೆ. ಈ ಪ್ರಕರಣದ ಬೆನ್ನಲ್ಲೆ ಎಚ್ಚೆತ್ತಿರುವ ಭಾರತೀಯ ರೈಲ್ವೆ ಹೊಸ ಆದೇಶ ಪ್ರಕಟಿಸಿದೆ. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಪ್ರಧಾನ ಕಚೇರಿಯನ್ನು ಹೊಂದಿರುವ ಪೂರ್ವ ರೈಲ್ವೆ ನಿಲ್ದಾಣಗಳಲ್ಲಿ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯನ್ನು ನಿಷೇಧಿಸಿದೆ.
ಇನ್ಮುಂದೆ ಎಲ್ಲಾ ಬ್ಲಾಗರ್‌ಗಳು ಮತ್ತು ಯೂಟ್ಯೂಬರ್‌ಗಳು ಪ್ರಧಾನ ಕಚೇರಿ ಹೊಂದಿರುವ ಪೂರ್ವ ರೈಲು ನಿಲ್ದಾಣಗಳಲ್ಲಿ ಯಾವುದೇ ವಿವರವಾದ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿಯದಂತೆ ಸೂಚಿಸಲಾಗಿದೆ. ಜ್ಯೋತಿ ಮಲ್ಹೋತ್ರಾ ಬಂಧನ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ತನ್ನ ವ್ಯಾಪ್ತಿಯಲ್ಲಿರುವ ನಿಲ್ದಾಣಗಳ ವಿವರವಾದ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಾರದು ಅಥವಾ ವೀಡಿಯೊಗಳನ್ನು ಮಾಡಬಾರದೆಂದು ಪೂರ್ವ ರೈಲ್ವೆ ತನ್ನ ಆದೇಶದಲ್ಲಿ ಹೇಳಿದೆ. ಈ ಕುರಿತು ಮಾತನಾಡಿರುವ ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ದೀಪ್ತಮಯ್ ದತ್ತಾ, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ನಿಗಾ ಇರಿಸುತ್ತಾರೆ ಎಂದು ಹೇಳಿದ್ದಾರೆ.
ಕಂಟೆಂಟ್ ಕ್ರಿಯೇಟರ್, ಬ್ಲಾಗರ್‌ಗಳು ರೈಲ್ವೆ ನಿಲ್ದಾಣದ ಸಂಪೂರ್ಣ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಳ್ಳುದಂತೆ ನೋಡಿಕೊಳ್ಳುತ್ತಾರೆ. ನಿಲ್ದಾಣದ ಆವರಣ ಮತ್ತು ಪ್ಲಾಟ್‌ಫಾರ್ಮ್‌ಗಳ ಛಾಯಾಚಿತ್ರ ಅಥವಾ ವೀಡಿಯೊ ತೆಗೆಯುವುದರ ಮೇಲೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ದೀಪ್ತಮಯ್ ದತ್ತಾ ಹೇಳುತ್ತಾರೆ.
ರೈಲು ನಿಲ್ದಾಣಗಳ ಮೇಲ್ವಿಚಾರಣೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿರುವ ಕಾರಣ, ಬ್ಲಾಗರ್‌ಗಳು ಅಥವಾ ಯೂಟ್ಯೂಬರ್‌ಗಳು ನಿಯಮಗಳನ್ನು ಪಾಲನೆ ಮಾಡಬೇಕು. ಕೆಲವು ಬ್ಲಾಗರ್‌ಗಳು ಅಥವಾ ಯೂಟ್ಯೂಬರ್‌ಗಳು ರೈಲ್ವೆ ನಿಲ್ದಾಣಗಳ ವೀಡಿಯೊಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಈ ನಿರ್ಬಂಧ ಅಗತ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.