ಕಡಿಮೆ ಉಪ್ಪು ಬಾಯಿಗೆ ರುಚಿಸದೇ ಇರಬಹುದು, ಆರೋಗ್ಯಕ್ಕೆ ಮಾತ್ರ ಒಳ್ಳೇದು
ಅಧಿಕ ರಕ್ತದೊತ್ತಡ ಹೃದ್ರೋಗ ಅಥವಾ ಇನ್ನಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಮಾತ್ರ ಕಡಿಮೆ ಉಪ್ಪನ್ನು ಸೇವಿಸಬೇಕು ಎಂಬ ಅಭಿಪ್ರಾಯ ಸಾಮಾನ್ಯ ಜನರಲ್ಲಿದೆ. ಆದರೆ ಸತ್ಯವೇನೆಂದರೆ, ಅತಿಯಾದ ಉಪ್ಪು ಯಾರಿಗಾದರೂ ಗಂಭೀರವಾದ ಹಾನಿಯನ್ನುಂಟುಮಾಡಬಹುದು. ಉಪ್ಪನ್ನು ಅತಿಯಾಗಿ ಸೇವಿಸೋದರಿಂದ ಹೃದ್ರೋಗದಿಂದ ಹಿಡಿದು ಕ್ಯಾನ್ಸರ್ ವರೆಗೂ ಹಲವು ಸಮಸ್ಯೆಗಳನ್ನುಂಟು ಮಾಡುತ್ತೆ. ಕಡಿಮೆ ಉಪ್ಪು ಸೇವಿಸೋದ್ರಿಂದ ನಿಮಗೆ ಏನೆಲ್ಲಾ ಲಾಭ ಇದೆ ಅನ್ನೋದನ್ನು ನೋಡೋಣ.
ಅಧಿಕ ರಕ್ತದೊತ್ತಡದ ರೋಗಿಗಳಿಗೆ ಕಡಿಮೆ ಉಪ್ಪನ್ನು ತಿನ್ನಲು ಸೂಚಿಸಲಾಗುತ್ತದೆ. 2015 ರಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಆಹಾರದಲ್ಲಿ ಅತಿಯಾದ ಉಪ್ಪಿನ ಸೇವನೆಯು ಸಾಮಾನ್ಯ ಜನರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸಿದೆ. ಈ ಕಾರಣಕ್ಕಾಗಿಯೇ ಜನರು ಸೋಡಿಯಂ ಸೇವನೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗುತ್ತಿದೆ.
ಆರೋಗ್ಯವಾಗಿರಲು ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ತಿನ್ನಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ವಿಶೇಷವಾಗಿ ನೀವು ಅಧಿಕ ರಕ್ತದೊತ್ತಡ (high blood pressure) ಅಥವಾ ಯಾವುದೇ ದೀರ್ಘಕಾಲದ ಕಾಯಿಲೆಯೊಂದಿಗೆ ಹೋರಾಡುತ್ತಿದ್ದರೆ ಹೆಚ್ಚು ಉಪ್ಪು ತಿನ್ನಲೇ ಬಾರದು. ನೀವು ದಿನವಿಡೀ ಎಷ್ಟು ಉಪ್ಪನ್ನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಗಮನ ಹರಿಸಿ. ಇದಲ್ಲದೆ, ಸಂಸ್ಕರಿಸಿದ ಆಹಾರಗಳು, ಬ್ರೆಡ್, ಕೆಚಪ್, ಚಿಪ್ಸ್, ಬೆಣ್ಣೆ ಮತ್ತು ಚೀಸ್ ನಂತಹ ವಸ್ತುಗಳು ಸಹ ಹೆಚ್ಚಿನ ಪ್ರಮಾಣದ ಉಪ್ಪನ್ನು ಹೊಂದಿರುತ್ತವೆ. ಇವುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಕಡಿಮೆ ಉಪ್ಪನ್ನು ತಿನ್ನುವುದರಿಂದ ನಮ್ಮ ದೇಹವು ಯಾವ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ತಿಳಿಯೋಣ.
1. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ
ಸೀಮಿತ ಪ್ರಮಾಣದ ಸೋಡಿಯಂ ನಿಮ್ಮನ್ನು ರಕ್ತದೊತ್ತಡದ (blood pressure) ಸಮಸ್ಯೆಯಿಂದ ರಕ್ಷಿಸುತ್ತದೆ ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಏಕೆಂದರೆ ಉಪ್ಪಿನ ಅತಿಯಾದ ಸೇವನೆಯು ದೀರ್ಘಾವಧಿಯಲ್ಲಿ ಅಪಧಮನಿಗಳು, ಹೃದಯ ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದಲ್ಲದೆ, ಆಹಾರದಲ್ಲಿ ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವ ಜನರು ದೀರ್ಘಕಾಲ ಬದುಕುತ್ತಾರೆ ಎಂದು ಸಹ ತಿಳಿದು ಬಂದಿದೆ.
2. ಹೃದ್ರೋಗ ಸಮಸ್ಯೆ ಕಾಡೋದಿಲ್ಲ
ಉಪ್ಪನ್ನು ಕಡಿಮೆ ಸೇವಿಸಿದರೆ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ, ಅಲ್ಲದೇ ಹೃದಯಾಘಾತ (heart attack), ಪಾರ್ಶ್ವವಾಯು ಮತ್ತು ಇತರ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ (ಬಿಎಂಜೆ) ಪ್ರಕಟವಾದ ಸಂಶೋಧನೆಯ ಪ್ರಕಾರ, ಆಹಾರದಲ್ಲಿ ಕಡಿಮೆ ಸೋಡಿಯಂ ತೆಗೆದುಕೊಳ್ಳುವ ಪ್ರಿಹೈಪರ್ಟೆನ್ಷನ್ ಹೊಂದಿರುವ ಜನರಲ್ಲಿ ಹೃದಯರಕ್ತನಾಳದ ಕಾಯಿಲೆಗಳ ಅಪಾಯ 25-30% ಕಡಿಮೆ ಎಂದು ಕಂಡುಹಿಡಿಯಲಾಗಿದೆ. ಇದಲ್ಲದೆ, ಕಡಿಮೆ ಉಪ್ಪನ್ನು ತಿನ್ನೋದ್ರಿಂದ ಹೃದಯಾಘಾತ ಅಥವಾ ಹೃದಯ ಶಸ್ತ್ರಚಿಕಿತ್ಸೆಯ ನಂತರ ವೇಗವಾಗಿ ಮತ್ತು ಉತ್ತಮವಾಗಿ ಚೇತರಿಸಿಕೊಳ್ಳಲು ಸಹಾಯವಾಗುತ್ತೆ.
3. ಮೂಳೆಗಳು ಸಹ ಬಿಗಿಯಾಗಿರುತ್ತವೆ
ಮೂತ್ರ ವಿಸರ್ಜನೆಯ ಮೂಲಕ ಕ್ಯಾಲ್ಸಿಯಂ ನಮ್ಮ ದೇಹದಿಂದ ಬಿಡುಗಡೆಯಾಗುತ್ತದೆ. ದೇಹವು ಬಿಡುಗಡೆ ಮಾಡುವ ಕ್ಯಾಲ್ಸಿಯಂ ಪ್ರಮಾಣವು ದೇಹದಲ್ಲಿರುವ ಸೋಡಿಯಂನ ಪ್ರಮಾಣವನ್ನು ಅವಲಂಬಿಸಿರುತ್ತದೆ. ನಾವು ಹೆಚ್ಚು ಉಪ್ಪನ್ನು ಸೇವಿಸಿದರೆ, ಅದು ಮೂತ್ರದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಅನ್ನು ಬಿಡುಗಡೆ ಮಾಡುತ್ತದೆ. ಇದು ಆಸ್ಟಿಯೊಪೊರೋಸಿಸ್ ನಂತಹ ಗಂಭೀರ ಮೂಳೆ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಕಡಿಮೆ ಉಪ್ಪು ಸೇವಿಸೋದ್ರಿಂದ ಮೂಳೆಗಳ ಸಮಸ್ಯೆ ಕಾಡೋದಿಲ್ಲ.
4. ಮೆದುಳಿನ ಆರೋಗ್ಯ
ಅತಿಯಾದ ಉಪ್ಪಿನ ಪ್ರಮಾಣವು ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತದೆ. ಇದು ಮೆದುಳಿಗೆ ರಕ್ತವನ್ನು ಸಾಗಿಸುವ ಅಪಧಮನಿಗಳನ್ನು ನಿರ್ಬಂಧಿಸಬಹುದು ಅಥವಾ ಕುಗ್ಗಿಸಬಹುದು, ಇದರಿಂದಾಗಿ ಮೆದುಳಿಗೆ ಸಾಕಷ್ಟು ರಕ್ತ ತಲುಪೋದಿಲ್ಲ. ಇದಲ್ಲದೆ, ಇದು ಆಕ್ಸಿಡೇಟಿವ್ ಒತ್ತಡ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಇದು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಉಪ್ಪು ಸೇವಿಸಿದ್ರೆ ಮೆದುಳು ಆರೋಗ್ಯದಿಂದ ಇರಲು ಸಾಧ್ಯವಾಗುತ್ತೆ.
5. ಆರೋಗ್ಯಕರ ಕಿಡ್ನಿ
ಹೆಚ್ಚು ಉಪ್ಪನ್ನು ಸೇವಿಸುವ ಜನರ ಮೂತ್ರಪಿಂಡಗಳು ದೇಹದಿಂದ ಉಪ್ಪನ್ನು ತೆಗೆದುಹಾಕಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ಮೂತ್ರವಿಸರ್ಜನೆಯ ಮೂಲಕ ಹೆಚ್ಚಿನ ಕ್ಯಾಲ್ಸಿಯಂ ಅನ್ನು ತೆಗೆದುಹಾಕುತ್ತದೆ. ಹೆಚ್ಚು ಉಪ್ಪನ್ನು ಸೇವಿಸೋದ್ರಿಂದ ಮೂತ್ರಪಿಂಡದ ಕಲ್ಲುಗಳು ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಇತರ ರೋಗಗಳಿಗೆ ಕಾರಣವಾಗಬಹುದು. ಆದರೆ ಕಡಿಮೆ ಉಪ್ಪನ್ನು ಸೇವಿಸುವ ಮೂಲಕ ಆರೋಗ್ಯಕರ ಕಿಡ್ನಿ ಪಡೆಯಿರಿ.
6. ಹೊಟ್ಟೆ ಉಬ್ಬರ ಸಮಸ್ಯೆ ಇರುವುದಿಲ್ಲ
ನೀವು ಆಹಾರದಲ್ಲಿ ಕಡಿಮೆ ಉಪ್ಪನ್ನು ಸೇವಿಸಿದಷ್ಟೂ ಜೀರ್ಣಕ್ರಿಯೆ ಮತ್ತು ಆರೋಗ್ಯವು ಉತ್ತಮವಾಗಿರುತ್ತದೆ. ಏಕೆಂದರೆ ಹೆಚ್ಚು ಉಪ್ಪನ್ನು ತಿನ್ನುವುದು ಜೀವಕೋಶಗಳಲ್ಲಿ ನೀರಿನ ನಷ್ಟಕ್ಕೆ ಕಾರಣವಾಗುತ್ತದೆ. ಇದು ಹೊಟ್ಟೆಯುಬ್ಬರಿಕೆಗೆ ಕಾರಣವಾಗುವುದಲ್ಲದೆ, ಮುಖದ ಮೇಲೆ ಊತಕ್ಕೂ ಕಾರಣವಾಗುತ್ತದೆ. ಮುಖದ ಮೇಲೆ ಊತ ಮತ್ತು ಆಗಾಗ್ಗೆ ಹೊಟ್ಟೆ ಉಬ್ಬರವನ್ನು ತಪ್ಪಿಸಲು ನೀವು ಬಯಸಿದರೆ, ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ.
7. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತೆ
ಹೌದು! ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಹೊಟ್ಟೆಯ ಕ್ಯಾನ್ಸರ್ (cancer) ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯು ತೋರಿಸಿದೆ. ಹೆಚ್ಚುವರಿ ಉಪ್ಪು ಹೊಟ್ಟೆಯ ಒಳ ಪದರವನ್ನು ಹಾನಿಗೊಳಿಸುತ್ತೆ. ಕಡಿಮೆ ಉಪ್ಪಿನ ಆಹಾರವು ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.