ಇಸ್ರೇಲ್ ಕಂಡು ಹಿಡಿದಿದೆ ಹೊಸ ಮದ್ದು: ಕೊರೋನಾ ವೈರಸ್‌ಗೆ ಗುದ್ದು
ಅಮೆರಿಕ, ರಷ್ಯಾ, ಭಾರತ, ಚೀನಾ....ಎಲ್ಲಾ ದೇಶಗಳೂ ಕೊರೋನಾಗೆ ಲಸಿಕೆ ಕಂಡು ಹಿಡಿದಿದ್ದು, ಎಲ್ಲೆಡೆ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗುತ್ತಿದೆ. ಆದರೂ, ಕೊರೋನಾ ವೈರಸ್ ಸೋಂಕಿದರೆ ಓಡಿಸುವ ಪರಿಣಾಮಕಾರಿ ಮದ್ದು ಮಾತ್ರ ಇದುವರೆಗೂ ಕಂಡು ಹಿಡಿದಿರಲಿಲ್ಲ. ಆದರೆ, ಈ ವೈರಸ್ ಅನ್ನು ಕೇವಲ ಮೂರರಿಂದ ಐದು ದಿನದೊಳಗೆ ಓಡಿಸುವಂತ ಔಷಧಿ ಕಂಡು ಹಿಡಿದಿರುವುದಾಗಿ ಇಸ್ರೇಲ್ ಆಸ್ಪತ್ರೆಯೊಂದು ಹೇಳಿ ಕೊಂಡಿದೆ.
ಇಸ್ರೇಲ್‌ನ ಟೆಲ್ ಅವಿವ್‌ನ ಇಷಿಲೌ ಮೆಡಿಕಲ್ ಸೆಂಟರ್ ಹೊಸ ಔಷಧಿಯ ಮೊದಲ ಹಂತದ ಪ್ರಯೋಗ ಮುಗಿಸಿದೆ.
ವಿವಿಧ ಕೋರೊನಾ ವೈರಸ್ ಸೋಂಕಿತರ ಮೇಲೆ ಈ ಔಷಧಿಯ ಪ್ರಯೋಗ ನಡೆದಿದ್ದು, ಸಂಪೂರ್ಣ ಯಶಸ್ವಿಯಾಗಿದೆ.
ಸಾಮಾನ್ಯ ಗುಣ ಲಕ್ಷಣಗಳಿರೋ ಸೋಂಕಿತರು ಹಾಗೂ ಗಂಭೀರ ಸ್ವರೂಪದ ಅನಾರೋಗ್ಯ ಕಾಡುತ್ತಿರುವವರ ಮೇಲೆ ಈ ಔಷಧಿಯನ್ನು ಪ್ರಯೋಗಿಸಲಾಗಿದೆ.
ಔಷಧಿ ಪ್ರಯೋಗಿಸಿದ 30 ರೋಗಿಗಳಲ್ಲಿ 29 ಮಂದಿ ಮೂರರಿಂದ ಐದು ದಿನಗಳಲ್ಲಿಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಮದ್ದಿನಲ್ಲಿರುವ ಪ್ರೋಟೀನ್ ರೋಗ ನಿರೋಧಕ ಶಕ್ತಿಯನ್ನು ಸುವ್ಯವಸ್ಥೆಯಲ್ಲಿಟ್ಟು, ರೋಗ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಔಷಧಿ ಪಡೆದ ಕೆಲವೇ ಗಂಟಗಳಲ್ಲಿ ಹೃದಯ, ಶ್ವಾಸಕೋಶ ಹಾಗೂ ಕಿಡ್ನಿಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಕೋರೊನಾ ವೈರಸ್ ಆರ್ಭಟವನ್ನೇ ತಗ್ಗಿಸಲಿದೆ.
ಎಕ್ಸೋಸೋಮಸ್ ಎಂಬ ವಾಹಕವೊಂದು ಶ್ವಾಸಕೋಶಕ್ಕೆ ಸಿಡಿ24 ಎಂಬ ಪ್ರೋಟೀನ್ ಅನ್ನು ರವಾನಿಸುತ್ತದೆ. ಇದು ವೈರಸ್ ಶಕ್ತಿಯನ್ನು ಕುಂದಿಸುವಲ್ಲಿ ಯಶಸ್ವಿಯಾಗಿದೆ, ಎಂದು ಈ ಬಗ್ಗೆ ಸಂಶೋಧನೆ ನಡೆಸುತ್ತಿರುವ ಪ್ರೊ.ನಡೀರ್ ಅರ್ಬರ್ ಹೇಳಿದ್ದಾರೆ.
ಜೀವಕೋಶಗಳ ಮೇಲಿರುವ ಈ ಪ್ರೊಟೀನ್ ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಣದಲ್ಲಿಡುತ್ತದೆ.
ಕೊರೋನಾದಿಂದ ಕಾಡುವ ಅನೇಕ ಅಡ್ಡ ಪರಿಣಾಮಗಳನ್ನು ತಡೆಯುವಲ್ಲಿ ಈ ಪ್ರೊಟೀನ್ ಪರಿಣಾಮಕಾರಿ ಎಂಬುವುದು ಸಂಶೋಧಕರ ವಾದ.
ಮೊದಲ ಹಂತದಲ್ಲಿ ಯಶಸ್ವಿಯಾದ ಔಷಧದ ಮತ್ತಷ್ಟು ಪ್ರಯೋಗಗಳನ್ನು ಇನ್ನು ಎರಡನೇ ಹಂತದಲ್ಲಿ ನಡೆಸಲಾಗುತ್ತದೆ.
ಇಸ್ರೇಲ್ ಆಸ್ಪತ್ರೆಯಲ್ಲಿ ಈ ಔಷಧದ ಪ್ರಯೋಗ ಯಶಸ್ವಿಯಾಗಿ ನಡೆದಿದ್ದು, ಕೋವಿಡ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಬಲ್ಲ ಗೇಮ್ ಚೇಂಜರ್ ಎನ್ನಲಾಗುತ್ತಿದೆ.
ಮನುಷ್ಯನ ಜೀವಕೋಶದಲ್ಲಿರೋ, ರೋಗ ನಿರೋಧಕ ಶಕ್ತಿಯನ್ನು ಉಲ್ಬಣಿಸುವ ಪೋಷಕಾಂಶಗಳನ್ನು ಔಷಧ ರೂಪದಲ್ಲಿ ನೀಡುವುದರಿಂದ ಇದು ಪರಿಣಾಮಕಾರಿಯಾಗಬಲ್ಲ ಔಷಧ ಎಂದೇ ಪರಿಗಣಿಸಲಾಗುತ್ತಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮ ಬೀರದಿರುವುದು ಮತ್ತೊಂದು ಪ್ಲಸ್ ಪಾಯಿಂಟ್.
ಒಟ್ಟಿನಲ್ಲಿ ಕೊರೋನಾಗೆ ವಿವಿಧ ದೇಶಗಳು ಕೇವಲ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗುತ್ತಿದ್ದರೆ, ಇಸ್ರೇಲ್ ರೋಗಕ್ಕೆ ಔಷಧಿ ಕಂಡು ಹಿಡಿದಿರುವುದು ನಿಜಕ್ಕೂ ಔಷಧೀಯ ಕ್ಷೇತ್ರದಲ್ಲಿ ಯಶಸ್ವಿ ಪ್ರಯೋಗ ಎಂದೇ ಹೇಳಬಹುದು.