ಸಣ್ಣ ತಪ್ಪೆಂದು ಇಗ್ನೋರ್ ಮಾಡ್ಬೇಡಿ, ಅವೇ ತರುತ್ತೆ ಜೀವಕ್ಕೆ ಕುತ್ತು
ಕೆಲವೊಮ್ಮೆ ನಾವು ಮಾಡುವಂತಹ ಸಣ್ಣ ಪುಟ್ಟ ತಪ್ಪುಗಳೇ ದೊಡ್ಡ ಸಮಸ್ಯೆಯಾಗಿ ಬದಲಾಗುತ್ತದೆ. ಇದರಿಂದ ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ಎದುರಿಸ ಬೇಕಾಗಬಹುದು. ಆರೋಗ್ಯಕರ ಮತ್ತು ಸದೃಢ ದೇಹಕ್ಕಾಗಿ, ಈ ಬೆಳಗಿನ ಕೆಟ್ಟ ಅಭ್ಯಾಸಗಳಿಂದ ದೂರವಿರಿ, ಇಲ್ಲದಿದ್ದರೆ ರೋಗಗಳು ನಿಮ್ಮನ್ನು ಸುತ್ತುವರಿಯುತ್ತವೆ.
ಕುಶಲಕರ್ಮಿ ತನ್ನ ಯಂತ್ರವನ್ನು ನೋಡಿಕೊಳ್ಳುವಂತೆಯೇ ನಾವು ನಮ್ಮ ದೇಹವನ್ನು ನೋಡಿಕೊಳ್ಳಬೇಕು. ಏಕೆಂದರೆ, ದೇಹದ ಯಾವುದೇ ಭಾಗವು ಅನಾರೋಗ್ಯವಾಗಿದ್ದರೆ, ಫಿಟ್ ದೇಹವನ್ನು ಪಡೆಯುವ ಕನಸು ಭಗ್ನಗೊಳ್ಳಬಹುದು. ಅನೇಕ ಜನರು ಬೆಳಿಗ್ಗೆ ಇಂತಹ ದೊಡ್ಡ ತಪ್ಪುಗಳನ್ನು ಮಾಡುತ್ತಾರೆ, ಇದು ಅವರ ದೇಹಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ. ಈ ಹಾನಿ ಎಷ್ಟು ತೀವ್ರವಾಗಿದೆಯೆಂದರೆ ದೇಹದ ಪ್ರತಿಯೊಂದು ಭಾಗವು ಅನಾರೋಗ್ಯಕರವಾಗಬಹುದು.
ಬೆಳಗಿನ ತಪ್ಪುಗಳು
ದೇಹವನ್ನು ಸಂಪೂರ್ಣವಾಗಿ ಫಿಟ್ ಆಗಿಡಲು ಬಯಸಿದರೆ, ಬೆಳಿಗ್ಗೆ ಎದ್ದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ. ಯಾವ ತಪ್ಪು ಅಂತ ಆಲೋಚನೆ ಮಾಡುತ್ತಿದ್ದೀರಾ? ತಪ್ಪು ಅಲ್ಲ ಎಂದು ಅಂದುಕೊಂಡಿರುವ ತಪ್ಪುಗಳು ಅವು. ಅವುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ.
ಹಾಸಿಗೆಯ ಮೇಲೆ ಚಹಾ/ಕಾಫಿ ಕುಡಿಯುವುದು
ಕೆಲವರಿಗೆ ಕಣ್ಣು ತೆರೆದ ತಕ್ಷಣ ಹಾಸಿಗೆಯಲ್ಲಿ ಚಹಾ ಅಥವಾ ಕಾಫಿ ಬೇಕು. ಆದರೆ ಈ ಅಭ್ಯಾಸ ಬಹಳ ತಪ್ಪು. ಬದಲಾಗಿ, ಬೆಳಿಗ್ಗೆ ಎದ್ದಾಗ, ನಿಮ್ಮ ಹೊಟ್ಟೆಯನ್ನು ಖಾಲಿ ಮಾಡಬೇಕು ಮತ್ತು ನಂತರ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಬೇಕು.
ಬೆಳಗ್ಗೆ ಎದ್ದ ತಕ್ಷಣ ಚಹಾ, ಕಾಫಿ ಕುಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರ ಬದಲಾಗಿ ನೀರು ಕುಡಿದರೆ ಚಯಾಪಚಯ ಕ್ರಿಯೆಯು ಸಕ್ರಿಯಗೊಳ್ಳುತ್ತದೆ ಮತ್ತು ಜೀರ್ಣಕ್ರಿಯೆ ಮತ್ತು ಹೊಟ್ಟೆ ಸರಿಯಾಗಿ ಉಳಿಯುತ್ತದೆ. ಆರೋಗ್ಯಯುತವಾಗಿ ಉಳಿಯಬಹುದು.
ಸೋಷಿಯಲ್ ಮೀಡಿಯಾ ಬಳಕೆ
ಮನಸ್ಸಿನ ಶಾಂತಿಗೆ ಬೆಳಗಿನ ಸಮಯ ಬಹಳ ಮುಖ್ಯ. ಏಕೆಂದರೆ ಈ ಸಮಯದಲ್ಲಿ ಮನಸ್ಸು ಒತ್ತಡಕ್ಕೆ ಒಳಗಾದರೆ, ದಿನವಿಡೀ ಒತ್ತಡದಲ್ಲಿರುತ್ತೀರಿ. ಬೆಳಗ್ಗೆ ಸೋಷಿಯಲ್ ಮೀಡಿಯಾ ನೋಡಿದ್ರೆ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.
ಇನ್ನು ಬೆಳಿಗ್ಗೆ ಎದ್ದ ತಕ್ಷಣ ಸಾಮಾಜಿಕ ಮಾಧ್ಯಮವನ್ನು ಬಳಸಬೇಡಿ. ಸೋಷಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ರೀತಿಯ ವಿಷಯಗಳು ಶೇರ್ ಆಗಿರುತ್ತವೆ. ಇವುಗಳು ಒತ್ತಡವನ್ನು ಹೆಚ್ಚಿಸಬಹುದು. ಕೆಟ್ಟ ವಿಚಾರ, ವಿಡೀಯೋಗಳನ್ನು ನೋಡಿ ಮನಸ್ಸು ವಿಕಾರಗೊಳ್ಳಬಹುದು. ಆದುದರಿಂದ ಬೆಳಗ್ಗೆ ಎದ್ದ ತಕ್ಷಣ ಇದನ್ನು ನೋಡಬೇಡಿ. ಬದಲಾಗಿ ಬೆಳಿಗ್ಗೆ ಧ್ಯಾನ ಮಾಡಿ.
ಉಪಹಾರದಲ್ಲಿ ಒಣ ಹಣ್ಣುಗಳನ್ನು ತಿನ್ನದಿರುವುದು
ಬೆಳಗ್ಗಿನ ಉಪಹಾರ ತುಂಬಾ ಮುಖ್ಯ. ಆದರೆ ಬೆಳಗ್ಗಿನ ಆಹಾರದಲ್ಲಿ ಕೇವಲ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಸೇವಿಸುವುದು ಸರಿಯಲ್ಲ. ಅದರ ಜೊತೆಗೆ ಬೇರೆ ಬೇರೆ ರೀತಿಯ ಡ್ರೈ ಫ್ರುಟ್ಸ್ ಸೇವನೆ ಮಾಡುವುದನ್ನು ತಪ್ಪಿಸಬಾರದು.
ವಾಲ್ನಟ್ಸ್ ಮತ್ತು ಬಾದಾಮಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಕಾರಣದಿಂದಾಗಿ ಚಯಾಪಚಯ ಹೆಚ್ಚಾಗುತ್ತದೆ ಮತ್ತು ದೇಹವು ಅಗತ್ಯವಾದ ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಹೃದಯ, ಮನಸ್ಸು ಮತ್ತು ರಕ್ತವನ್ನು ಆರೋಗ್ಯವಾಗಿರಿಸುತ್ತದೆ.
ಉಪಹಾರವನ್ನು ಬಿಡುವುದು
ತಡವಾಗಿ ಎದ್ದ ಕಾರಣ ಜನರು ಉಪಹಾರ ಬಿಟ್ಟು ಬಿಡುತ್ತಾರೆ. ಈ ಕಾರಣದಿಂದಾಗಿ ಚಯಾಪಚಯವು ನಿಧಾನಗೊಳ್ಳುತ್ತದೆ ಮತ್ತು ತೂಕ ಹೆಚ್ಚಾಗುವುದು ಪ್ರಾರಂಭವಾಗುತ್ತದೆ. ಆದ್ದರಿಂದ ಎಂದಿಗೂ ಉಪಹಾರವನ್ನು ಬಿಟ್ಟುಬಿಡಬೇಡಿ.
ಬೆಳಗ್ಗಿನ ಉಪಹಾರ ತುಂಬಾ ಮುಖ್ಯ. ಇದನ್ನು ಬಿಟ್ಟರೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಜೊತೆಗೆ ಬೆಳಗಿನ ಉಪಾಹಾರದಲ್ಲಿ ಫೈಬರ್, ಪ್ರೋಟೀನ್ ಆಹಾರಗಳನ್ನು ಸೇರಿಸಿ. ಇದರಿಂದ ದಿನ ಪೂರ್ತಿಗೆ ಬೇಕಾಗುವಂತಹ ಶಕ್ತಿ ದೊರೆಯುತ್ತದೆ. ಹೌದು, ಬೆಳಗ್ಗಿನ ಉಪಹಾರ ದೇಹಕ್ಕೆ ರಿಚಾರ್ಜ್ ಮಾಡುತ್ತದೆ. ಆದುದರಿಂದ ಇದನ್ನು ಸೇವಿಸಲೇಬೇಕು.
ಕಾರ್ಡಿಯೋ ವ್ಯಾಯಾಮ ಮಾಡದಿರುವುದು
ಚುರುಕಾದ ವಾಕಿಂಗ್, ಜಾಗಿಂಗ್, ಬೆಳಿಗ್ಗೆ ಓಟದಂತಹ ಕಾರ್ಡಿಯೋ ವ್ಯಾಯಾಮಗಳನ್ನು ಮಾಡದಿದ್ದರೆ ದೇಹದಲ್ಲಿ ಬೊಜ್ಜು ತುಂಬುವಂತೆ ಮಾಡುತ್ತದೆ. ಏಕೆಂದರೆ ಹೃದಯ, ಮನಸ್ಸು ಮತ್ತು ದೇಹದ ಇತರ ಭಾಗಗಳನ್ನು ಆರೋಗ್ಯವಾಗಿಡಲು, ಪ್ರತಿದಿನ ಕಾರ್ಡಿಯೋ ವ್ಯಾಯಾಮ ಮಾಡುವುದು ಅವಶ್ಯಕ.