ದಿಕ್ಕು, ಫುಡ್ ಎಲ್ಲ ಬದಲಾಯಿಸಿ ನೋಡಿ, ನಿದ್ರೆ ಬಂದೇ ಬರುತ್ತದೆ ಇಲ್ ಕೇಳಿ!
ರಾತ್ರಿಯಲ್ಲಿ ನಿದ್ರಿಸಲು ಹಲವರು ಕಷ್ಟ ಪಡುತ್ತಿರುತ್ತಾರೆ. ಹಾಸಿಗೆಯಲ್ಲೇ ಒದ್ದಾಡುತ್ತಾ, ಮಧ್ಯರಾತ್ರಿಯಾದರೂ ನಿದ್ರಿಸುವುದಿಲ್ಲ. ಅದರಲ್ಲಿಯೂ ಮೊಬೈಲ್ ನೋಡ್ತಾ ಕೂತರಂತೂ ಕೇಳುವುದೇ ಬೇಡ. ಆದರೆ ಇದು ಒಳ್ಳೆಯದಲ್ಲ. ಅನಗತ್ಯ ಆರೋಗ್ಯ ಸಮಸ್ಯೆಗಳನ್ನು ಇದು ಬರ ಮಾಡಿಕೊಳ್ಳುತ್ತದೆ. ಹಾಗಾಗಿ ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಏನು ಮಾಡಬೇಕೆಂದು ನಾವು ಹೇಳ್ತೇವೇ ಕೇಳಿ.
ಒಂದು ವಯಸ್ಸಲ್ಲಿ ನಿದ್ರೆ ಬರುವುದಿಲ್ಲ ಎಂದು ಯಾರಾದ್ರೂ ಹೇಳಿದರೆ ವಿಚಿತ್ರ ಎನಿಸುತ್ತಿತ್ತು. ಆದರೀಗ ಎಲ್ಲರೂ ನಿದ್ರೆ ಬರುತ್ತಿಲ್ಲ ಎಂದು ದೂರುತ್ತಿದ್ದಾರೆ. ನಿದ್ರೆ ಬರುತ್ತಿಲ್ಲ ಎಂದು ಗಂಟೆಗಟ್ಟಲೆ ರಾತ್ರಿಯಲ್ಲಿ ಫೋನ್ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ. ಸರಿಯಾಗಿ ನಿದ್ರೆ ಮಾಡದಿದ್ದರೆ ಹಲವು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ನಿದ್ರೆ ಬಾರದವರು ರಾತ್ರಿಯಲ್ಲಿ ಏನು ಮಾಡಿದರೆ ನಿದ್ರೆ ಬರುತ್ತದೆ? ಇಲ್ಲಿವೆ ಟಿಪ್ಸ್.
ನಿದ್ರೆಯ ಗುಣಮಟ್ಟ
ಆಹಾರದಲ್ಲಿ ಬದಲಾವಣೆ: ನಮ್ಮಲ್ಲಿ ಕೆಲವರು ಮದುವೆಗಳು, ಸಮಾರಂಭಗಳು ಅಥವಾ ರಾತ್ರಿಯಲ್ಲಿ ಹೊಟ್ಟೆ ಭಾರವಾಗುವಂಥ ಆಹಾರ ಸೇವಿಸುತ್ತಾರೆ. ವಿಶೇಷವಾಗಿ ಕೋಳಿ, ಮೀನು, ಮಾಂಸದಂತಹ ಮಾಂಸಾಹಾರವನ್ನು ಸೇವಿಸುತ್ತಾರೆ. ಆದರೆ ಇವನ್ನು ರಾತ್ರಿ ಸೇವಿಸಿದರೆ ಬೇಗ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್, ಹೊಟ್ಟೆ ಅಸ್ವಸ್ಥತೆಯಂತಹ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತವೆ. ಇದು ನಿದ್ರೆಯನ್ನು ಕಸಿಯುವುದರಲ್ಲಿ ಅನುಮಾನವೇ ಇಲ್ಲ. ಅಕಸ್ಮಾತ್ ಮಾಂಸಾಹಾರ ಸೇವಿಸಬೇಕೆಂದಿದ್ದರೆ ಮೂರು, ನಾಲ್ಕು ಗಂಟೆಗಳ ಮೊದಲೇ ಸೇವಿಸಿ. ಆಗ ಅಜೀರ್ಣ, ನಿದ್ರಾಹೀನತೆಯಂತಹ ಸಮಸ್ಯೆ ಕಾಡುವುದಿಲ್ಲ. ಮಲಗೋ ಮುನ್ನ ಸ್ವಲ್ಪ ನೀರು ಕುಡಿಯಿರಿ.
ಮಲಗುವ ಮುನ್ನ ಸ್ನಾನ
ರಾತ್ರಿ ನಿದ್ರೆ ಇಲ್ಲವಾದರೆ ಮಲಗುವ ಮುನ್ನ ಸ್ನಾನ ಮಾಡಿ. ಆಯಾಸದಿಂದಲೂ ನಿದ್ರೆ ಬರುವುದಿಲ್ಲ. ಹಾಗಾಗಿ ಮಲಗುವುದಕ್ಕೆ 15 ರಿಂದ 20 ನಿಮಿಷ ಮೊದಲು ಅಥವಾ ಅರ್ಧ ಗಂಟೆ ಮೊದಲು ಸ್ನಾನ ಮಾಡಿ. ಇದು ನಿಮ್ಮ ದೇಹವನ್ನು ನಿರಾಳವಾಗಿಸಿ., ಸೊಂಪಾದ ನಿದ್ರೆ ಬರುವಂತೆ ಮಾಡುತ್ತದೆ.
ದಿಕ್ಕು ಬದಲಾಯಿಸಿ ನೋಡಿ: ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹಿರಿಯರು ಹೇಳುವ ಮಾತು ನೆನಪಿರಲಿ. ಮೂಢನಂಬಿಕೆ ಎಂದರೂ ವೈಜ್ಞಾನಿಕವಾಗಿಯೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ. ತಲೆಯನ್ನು ಉತ್ತರ ದಿಕ್ಕಿಗೆ ಇಟ್ಟು ಮಲಗಿದಾಗ ರಕ್ತ ನಿಧಾನವಾಗಿ ಮೆದುಳಿನ ಕಡೆಗೆ ಹರಿಯುತ್ತದೆ. ಮೆದುಳಿಗೆ ರಕ್ತ ಸಂಚಾರ ಹೆಚ್ಚಾದರೆ ನಿದ್ರೆ ಬರುವುದು ಕಷ್ಟ. ಹಾಗಾಗಿ ಈ ದಿಕ್ಕಿಗೆ ತಲೆ ಹಾಕಿ ಮಲಗಬೇಡಿ.