ಚಾಕಲೇಟ್, ಡ್ರೈ ಫ್ರುಟ್ಸ್; ಗಣೇಶ ಹಬ್ಬದ ದಿನ ತಯಾರಿಸಿ ವಿಶಿಷ್ಟ ಬಗೆಯ ಮೋದಕಗಳು!
ಗಣೇಶನಿಗೆ ಮೋದಕ ಅಂದ್ರೆ ತುಂಬಾನೆ ಪ್ರೀತಿ. ಗಣೇಶ ಚತುರ್ಥಿ ಅಂದ್ರೆ ಮನೆಮನೆಯಲ್ಲೂ ಗಣೇಶನಿಗೆ ಪ್ರಿಯವಾದ ಮೋದಕ ಮಾಡಿ, ನೈವೇದ್ಯವಾಗಿ ಇಡ್ತಾರೆ ಅಲ್ವಾ? ಯಾವಾಗಲೂ ಒಂದೇ ಬಗೆಯ ಮೋದಕ ಮಾಡಿ ಸಾಕಾಗಿದ್ದರೆ, ಇಲ್ಲಿದೆ ನೋಡಿ ವಿಭಿನ್ನ ಮೋದಕ ರೆಸಿಪಿ.
ಈ ಬಾರಿ ಗಣೇಶೋತ್ಸವಕ್ಕೆ (Ganesh Chaturthi) ಮೋದಕ ಮಾಡಲು ತಯಾರಿ ನಡೆಸಿದ್ದಾರೆ. ಈ ಸಲ ಯಾವಾಗಲೂ ಮಾಡುವಂತೆ ಸಿಂಪಲ್ ಮೋದಕ ಮಾಡೋದು ಬೇಡ. ಬದಲಾಗಿ ಎಳ್ಳು, ಡ್ರೈಫ್ರುಟ್ಸ್, ಚಾಕಲೇಟ್ ಹೀಗೆ ಬೇರೆ ಬೇರೆ ಮೋದಕ ಮಾಡಿ ನೋಡಿ. ಇಲ್ಲಿದೆ ನೀವು ಯಾವೆಲ್ಲಾ ರೀತಿಯ ಮೋದಕ ಮಾಡಬಹುದು ಅನ್ನೋದು…
ಕಾಯಿ ಬೆಲ್ಲ ಹಾಕಿದ ಮೋದಕ: ಇದು ಗಣೇಶೋತ್ಸವಕ್ಕೆ ಮಾಡುವಂತಹ ಸಾಮಾನ್ಯವಾದ ಮೋದಕವಾಗಿದೆ. ಅಕ್ಕಿ ಹಿಟ್ಟಿನ ಮಧ್ಯದಲ್ಲಿ ತೆಂಗಿನಕಾಯಿ ತುರಿ, ಬೆಲ್ಲ ಮತ್ತು ಏಲಕ್ಕಿಯ ಮಿಶ್ರಣ ಹಾಕಿ ತಯಾರು ಮಾಡುವಂತಹ ಮೋದಕ ಇದಾಗಿದೆ.
ಫ್ರೈಡ್ ಮೋದಕ: ಸ್ವಲ್ಪ ವಿಭಿನ್ನವಾದ ಮೋದಕ ಮಾಡಲು ಬಯಸಿದ್ರೆ ತೆಂಗಿನಕಾಯಿ ತುರಿ, ಬೆಲ್ಲ ಮತ್ತು ಏಲಕ್ಕಿಯ ಮಿಶ್ರಣವನ್ನು ಗೋಧಿ ಅಥವಾ ಮೈದಾ ಹಿಟ್ಟಿನ ಮಧ್ಯದಲ್ಲಿಟ್ಟು, ಎಣ್ಣೆಯಲ್ಲಿ ಡೀಪ್ ಫ್ರೈ (fried Modak) ಮಾಡಿದ್ರೂ ಚೆನ್ನಾಗಿರುತ್ತೆ.
ಎಳ್ಳು ಮೋದಕ: ಈ ಮೋದಕ ಮಾಡಲು ಮುಖ್ಯವಾಗಿ ಬೇಕಾಗಿರೋದು ಎಳ್ಳು. ಬೆಲ್ಲ, ರೋಸ್ಟ್ ಮಾಡಿದ ಎಳ್ಳು ಮತ್ತು ಸ್ವಲ್ಪ ಏಲಕ್ಕಿ ಹಾಕಿ ಬೆರೆಸಿದ ಮಿಶ್ರಣವನ್ನು ಅಕ್ಕಿ ಹಿಟ್ಟಿನ ಮಧ್ಯದಲ್ಲಿಟ್ಟು ಬೇಯಿಸುವಂತಹ ಮೋದಕ ಇದಾಗಿದೆ. ಇದು ವಿಭಿನ್ನ ರುಚಿ ನೀಡುತ್ತೆ.
ಚಾಕಲೇಟ್ ಮೋದಕ: ಚಾಕಲೇಟ್ ಕೇಕ್, ಚಾಕಲೇಟ್ ಬರ್ಫಿ ಇವೆಲ್ಲಾ ನೀವು ತಿಂದಿದ್ದೀರಿ ಅಲ್ವಾ? ಈ ಬಾರಿ ಗಣೇಶ ಚತುರ್ಥಿಗೆ ಚಾಕಲೇಟ್ ಮೋದಕ (Chocolate Modak) ಮಾಡಿ ಗಣೇಶನಿಗೆ ನೈವೇದ್ಯ ನೀಡಿ. ಜೊತೆಗೆ ಇದು ಮಕ್ಕಳಿಗೂ ಸಹ ತುಂಬಾನೆ ಇಷ್ಟವಾಗುತ್ತೆ. ಚಾಕಲೇಟನ್ನು ಕರಗಿಸಿ, ಅದಕ್ಕೆ ಸ್ವಲ್ಪ ಬಿಸ್ಕಟ್ ಪುಡಿ, ನಟ್ಸ್, ತೆಂಗಿನ ತುರಿ ಹಾಕಿ ಮೋದಕದ ಆಕಾರ ನೀಡಿದ್ರೆ ಸಾಕು.
ಮಾವಾ ಮೋದಕ: ಮಾವಾ ಅಥವಾ ಕೋಯಾದಿಂದ ತಯಾರಿಸುವಂತಹ ಮೋದಕ ಇದಾಗಿದೆ. ಇದಕ್ಕಾಗಿ ಒಡೆದ ಹಾಲಿನ ಕೆನೆಯನ್ನು ಬಿಸಿಮಾಡಲು ಇಟ್ಟು, ಅದಕ್ಕೆ ಸಕ್ಕರೆ, ಏಲಕ್ಕಿ, ಬೇಕಾದಲ್ಲಿ, ಕೇಸರಿ ಸೇರಿಸಿ ಚೆನ್ನಾಗಿ ಮಗುಚಿ, ಗಟ್ಟಿಯಾಗುತ್ತ ಬಂದಾಗ ಮೋದಕದ ಆಕಾರ ನೀಡಬೇಕು.
ತೆಂಗಿನಕಾಯಿ, ಕೋಕಂ ಮೋದಕ: ತುರಿದ ತೆಂಗಿನಕಾಯಿ, ಬೆಲ್ಲ, ಮತ್ತು ಕೋಕಂ ಹಾಕಿ ಮಾಡುವಂತಹ ಆಕರ್ಷಕ ಮತ್ತು ರುಚಿಕರವಾದ ಮೋದಕ ಇದಾಗಿದೆ. ಇದರಲ್ಲಿರುವ ಕೋಕಂ ನ ರುಚಿ ಮೋದಕಕ್ಕೆ ಸ್ವಲ್ಪ, ಹುಳಿ, ಸ್ವಲ್ಪ ಸಿಹಿ ರುಚಿಯನ್ನು ನೀಡುತ್ತೆ.
ಡ್ರೈ ಫ್ರುಟ್ಸ್ ಮೋದಕ: ಈ ಡ್ರೈ ಫ್ರುಟ್ಸ್ ಮೋದಕವನ್ನು (Dry fruits Modak) ಗೋಡಂಬಿ, ದ್ರಾಕ್ಷಿ, ಖರ್ಜೂರ, ಬಾದಮಿ, ಪಿಸ್ತಾವನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ, ಅದಕ್ಕೆ ಬೆಲ್ಲ ಅಥವಾ ಸಕ್ಕರೆ ಸೇರಿಸಿ ಮಾಡುವಂತಹ ಮೋದಕ ಇದಾಗಿದೆ. ನೀವಿದನ್ನು ಖಂಡಿತಾ ಟ್ರೈ ಮಾಡಲೇಬೇಕು.