ಬೇಸಿಗೆ ಬಿಸಿಯಲ್ಲಿ ಮನೆಯಲ್ಲೇ ಮಾಡಿ ಮಾವಿನ ಹಣ್ಣಿನ ಐಸ್ ಕ್ರೀಂ
ಮಾವಿನ ಹಣ್ಣು ಹಣ್ಣುಗಳ ರಾಜ. ಬೇಸಿಗೆ ಕಾಲದಲ್ಲಿ ಅತ್ಯಂತ ವಿಶೇಷವಾದ ಒಂದು ವಿಷಯವೆಂದರೆ ಅದು ಮಾವಿನ ಸೀಸನ್ ಸಹ ಹೌದು. ಈ ಹಣ್ಣನ್ನು ಸವಿಯಲು ಅನೇಕರು ವರ್ಷವಿಡೀ ಕಾಯುತ್ತಾರೆ. ಮಾವಿನ ಹಪ್ಪಳ, ಮಾವಿನ ಶರಭತ್ತು, ಮಾವಿನ ಶೇಕ್, ಮ್ಯಾಂಗೋ ಲಸ್ಸಿ, ಚಟ್ನಿ, ಸಾರು ಹೀಗೆ ಸಾಕಷ್ಟು ರುಚಿಕರ ಖಾದ್ಯಗಳನ್ನು ಕೂಡ ಮಾವಿನಿಂದ ಮಾಡಬಹುದು. ಇದರ ಜೊತೆ ಐಸ್ ಕ್ರೀಂ ಸಹ ಮಾಡಬಹುದು. ರೆಸಿಪಿ ಇಲ್ಲಿದೆ.
ಮನೆಯಲ್ಲಿ ತಾಜಾ, ರಸಭರಿತ ಮಾವಿನ ಹಣ್ಣುಗಳಿಂದ ಮಾಡಿದ ಮಾವಿನ ಐಸ್ ಕ್ರೀಮ್ (ಮ್ಯಾಂಗೋ ಐಸ್ ಕ್ರೀಮ್) ಅನ್ನು ಎಂದಾದರೂ ಪ್ರಯತ್ನಿಸಿದ್ದೀರಾ? ಇಲ್ಲದಿದ್ದರೆ, ಇಂದು ಮಾವಿನ ಐಸ್ ಕ್ರೀಮ್ ಪಾಕ ವಿಧಾನವನ್ನು ಮಾಡೋದು ಹೇಗೆ ಅನ್ನೋದನ್ನು ತಿಳಿಯಿರಿ. ಅದನ್ನು ಯಾವಾಗ ಬೇಕಾದರೂ ತಿನ್ನಬಹುದು.
ಮಾಡಲು ಸುಲಭವಾದ, ಮನೆಯಲ್ಲಿ ಮಕ್ಕಳಿಂದ ಹಿಡಿದು ಹಿರಿಯವರೆಗೆ ಬಾಯಿ ಚಪ್ಪರಿಸುತ್ತಾ, ಈ ಬಿಸಿಲಿನ ಬೇಗೆಯ ಮಧ್ಯೆ ಬಾಯಿ ಸವಿ ಮಾಡುತ್ತಾ ಸೇವಿಸಬಹುದು.
ಮ್ಯಾಂಗೋ ಐಸ್ ಕ್ರೀಮ್ ತಯಾರಿಸುವ ಪದಾರ್ಥಗಳು
ಹಾಲು - 2 ಕಪ್
ಕ್ರೀಮ್ - 3 ಕಪ್
ಮಾಗಿದ ಮಾವು (ಪ್ಯೂರಿ) - 2 ಕಪ್
ಮಾವು (ತುಂಡುಗಳಾಗಿ ಕತ್ತರಿಸಿದ್ದು) - 2 ಕಪ್
ಕಸ್ಟರ್ಡ್ ಪೌಡರ್ - 2 ಚಮಚ
ವೆನಿಲ್ಲಾ ಎಸೆನ್ಸ್ - 1 ಟೇಬಲ್ ಸ್ಪೂನ್
ಸಕ್ಕರೆ - 2 ಕಪ್
ಮ್ಯಾಂಗೋ ಐಸ್ ಕ್ರೀಮ್ ರೆಸಿಪಿ
ಮಾವಿನ ಐಸ್ ಕ್ರೀಮ್ ತಯಾರಿಸಲು ಮೊದಲು ಕಸ್ಟರ್ಡ್ ಅನ್ನು ಕಾಲು ಕಪ್ ಹಾಲಿನೊಂದಿಗೆ ಬೆರೆಸಿ ಪಕ್ಕಕ್ಕೆ ಇಡಿ.
ನಂತರ ಉಳಿದ ಹಾಲು ಮತ್ತು ಸಕ್ಕರೆಯನ್ನು ಒಟ್ಟಿಗೆ ಬಿಸಿ ಮಾಡಿ. ಸಕ್ಕರೆ ಹಾಲಿನಲ್ಲಿ ಸಂಪೂರ್ಣವಾಗಿ ಕರಗಲಿ ಮತ್ತು ಕುದಿಯಲು ಬಿಡಿ. ಅದು ಕುದಿಯಲು ಪ್ರಾರಂಭಿಸಿದಾಗ, ಕಸ್ಟರ್ಡ್ ಮಿಶ್ರಣವನ್ನು ಸೇರಿಸಿ ಮತ್ತು ಮತ್ತೆ ಕುದಿಸಿ.
ಕಡಿಮೆ ಉರಿಯಲ್ಲಿ ಒಂದು ನಿಮಿಷ ಬೇಯಿಸಿ ನಂತರ ಗ್ಯಾಸ್ ಆಫ್ ಮಾಡಿ. ಈಗ ಅದನ್ನು ತಣ್ಣಗಾಗಲು ಬಿಡಿ.
ಮಾವಿನ ಪ್ಯೂರಿ, ಮಾವಿನ ತುಂಡುಗಳು, ಕ್ರೀಮ್ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕಾಗಿ ಹ್ಯಾಂಡ್ ಬ್ಲೆಂಡರ್ ಅಥವಾ ಮಷಿನ್ ಬ್ಲೆಂಡ್ ಉಪಯೋಗಿಸಿದರೆ ಉತ್ತಮ, ನಂತರ ಬಿಗಿಯಾದ ಮುಚ್ಚಳವಿರುವ ಪಾತ್ರೆಯಲ್ಲಿ ಹಾಕಿ.
ಇದನ್ನು ಸಂಪೂರ್ಣವಾಗಿ ಹೊಂದಿಸಲು ಸ್ವಲ್ಪ ಸಮಯದವರೆಗೆ ಫ್ರೀಜರ್ ನಲ್ಲಿ ಇರಿಸಿ. ನಂತರ ಅದನ್ನು ಹೊರತೆಗೆದು ಹ್ಯಾಂಡ್ ಬ್ಲೆಂಡರ್ ಸಹಾಯದಿಂದ ಬೀಟ್ ಮಾಡಿ ಮತ್ತೆ ಫ್ರೀಜರ್ನಲ್ಲಿ ಇರಿಸಿ.
ಪಾತ್ರೆಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಬೇಕು ಎಂಬುದನ್ನು ಗಮನಿಸಿ. ಅದು ತುಂಬಾ ಫ್ರೀಜ್ ಆಗಲು ಬಿಡಬೇಡಿ. ಮತ್ತೊಮ್ಮೆ ಬೀಟ್ ಮಾಡಿ ಮತ್ತು ಅದನ್ನು ಫ್ರೀಜರ್ನಲ್ಲಿ ಮತ್ತೆ ಇಡಿ. ಸ್ವಲ್ಪ ಸಮಯದ ನಂತರ ಮಾವಿನ ಐಸ್ ಕ್ರೀಮ್ ಸಿದ್ಧವಾಗುತ್ತದೆ.