ಮೈಕ್ರೊವೇವ್‌ನಲ್ಲಿ 5 ನಿಮಿಷದಲ್ಲಿ ಮಾಡಬಹುದು ಟೇಸ್ಟಿ ಮಟರ್ ಪನ್ನೀರ್ ಮಸಾಲಾ!
ಉತ್ತರ ಭಾರತದ ಗ್ರೇವಿ ಹಾಗೂ ಕರಿಗಳು ಎಲ್ಲರಿಗೂ ಪ್ರಿಯ. ಆದರೆ ಮನೆಯಲ್ಲಿ ಮಾಡಲು ಹೆಚ್ಚು ಸಮಯ ಹಿಡಿಯುತ್ತದೆ. ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಅಷ್ಟು ಸಮಯ ಯಾರಿಗೆ ಇರುತ್ತೆ ಹೇಳಿ? ಹಾಗಂತ ನಿರಾಶೆ ಬೇಡಿ. ಮೈಕ್ರೊವೇವ್ ಸಹಾಯದಿಂದ ಅತಿ ಸುಲಭವಾಗಿ ಮತ್ತು ಬೇಗ ಮನೆಯಲ್ಲೇ ತಯಾರಿಸಬಹುದು ಮಟರ್ ಪನ್ನೀರ್. ಇಲ್ಲಿದೆ 5 ನಿಮಿಷಗಳಲ್ಲಿ ರುಚಿಕರವಾದ ಮಟರ್ ಪನ್ನೀರ್ ಗ್ರೇವಿ ಮಾಡುವ ವಿಧಾನ.
1 ಕಪ್ ಬೇಯಿಸಿದ ಬಟಾಣಿ, 1/2 ಕಪ್ ಖೋವಾ, 1 ಕಪ್ ಪನ್ನೀರ್,1/2 ಕಪ್ ಟೊಮೋಟೊ, 2 ಲವಂಗ, 2 ಹಸಿರು ಮೆಣಸಿನಕಾಯಿ, ಒಂದು ಚಿಟಿಕೆ ಇಂಗು, 1/4 ಟೀಸ್ಪೂನ್ ಕೊತ್ತಂಬರಿ ಪುಡಿ, 1/4 ಟೀಸ್ಪೂನ್ ಜೀರಿಗೆ ಪುಡಿ, 1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ, 1/4 ಟೀಸ್ಪೂನ್ ಒಣ ಶುಂಠಿ, 1 ಟೀಸ್ಪೂನ್ ಸಕ್ಕರೆ, 1 ಟೀಸ್ಪೂನ್ ಟೊಮೆಟೊ ಪ್ಯೂರಿ 2 ಟೀಸ್ಪೂನ್ ಎಣ್ಣೆ ಉಪ್ಪು ರುಚಿಗೆ ತಕ್ಕಷ್ಟು ಉಪ್ಪು.
ಮೊದಲಿಗೆ ಟೊಮೋಟೊ ಮತ್ತು ಹಸಿ ಮೆಣಸಿನಕಾಯಿ ಹೆಚ್ಚಿ. ಇದರ ನಂತರ, ಖೋವಾವನ್ನು ಮ್ಯಾಶ್ ಮಾಡಿ ಬಟ್ಟಲಿನಲ್ಲಿ ಹಾಕಿ.
ಮೈಕ್ರೊವೇವ್ ಸೇಫ್ ಬಟ್ಟಲಿನಲ್ಲಿ ಒಂದು ಚಮಚ ಎಣ್ಣೆಯನ್ನು ಹಾಕಿ. ಲವಂಗ ಮತ್ತು ಇಂಗು ಹಾಕಿ 1 ನಿಮಿಷ ಮೈಕ್ರೊವೇವ್ ಮಾಡಿ.
ಈಗ ಅದಕ್ಕೆ ಮ್ಯಾಶ್ ಮಾಡಿದ ಖೋವಾ ಸೇರಿಸಿ, ಮತ್ತೆ ಬೌಲ್ ಅನ್ನು ಮೈಕ್ರೊವೇವ್‌ನಲ್ಲಿ 1 ನಿಮಿಷ ಇಡಿ.
ನಂತರ ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನ ಪುಡಿಯನ್ನು ಬಟ್ಟಲಿನಲ್ಲಿ ಹಾಕಿ. ಒಣ ಶುಂಠಿ, ಉಪ್ಪು ಮತ್ತು ಒಂದು ಟೀ ಚಮಚ ನೀರು ಸೇರಿಸಿ. ಈಗ ಮಸಾಲೆಗಳನ್ನು ಅರ್ಧ ನಿಮಿಷ ಮೈಕ್ರೊವೇವ್ ಮಾಡಿ.
ಅರ್ಧ ನಿಮಿಷದ ನಂತರ ಅದಕ್ಕೆ ಟೋಮೆಟೊ ಪ್ಯೂರಿ ಸೇರಿಸಿ. ಸಕ್ಕರೆ, ಬಟಾಣಿ ಸೇರಿಸಿ. ಇದನ್ನು ಮಿಕ್ಸ್ ಮಾಡಿ ಮತ್ತೆ 2 ನಿಮಿಷಗಳ ಕಾಲ ಮೈಕ್ರೊವೇವ್ ಮಾಡಿ.
ಕೊನೆಯದಾಗಿ ಪನ್ನೀರ್ ಸೇರಿಸಿ. ಇನ್ನೊಂದು 30 ಸೆಕೆಂಡುಗಳ ಕಾಲ ಬೇಯಿಸಿ.
ಮಟರ್ ಪನ್ನೀರ್ ಮಸಾಲಾ ರೆಡಿ. ಇದನ್ನು ರೊಟ್ಟಿ ಮತ್ತು ಪರೋಟಾದೊಂದಿಗೆ ಸವಿಯಿರಿ.