ರೆಸಿಪಿ: ಅಳಿದುಳಿದ ಆಹಾರದಿಂದ ಈ ತಿನಿಸು ಮಾಡ್ಬಹುದು ನೋಡಿ!
ಮನೆಯಲ್ಲಿ ಅನ್ನ, ದಾಲ್, ರೊಟ್ಟಿ, ಪಲ್ಯಗಳು ಉಳಿಯುವುದು ಸಾಮಾನ್ಯ. ನಮಗೆ ಇಷ್ಟವಿಲ್ಲದಿದ್ದರೂ, ಅವುಗಳನ್ನು ವೇಸ್ಟ್ ಮಾಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರ ವೇಸ್ಟ್ ಮಾಡುವುದನ್ನು ತಪ್ಪಿಸಲು ಇಲ್ಲಿವೆ ಉಪಾಯ. ಉಳಿದಿರುವ ಆಹಾರದಿಂದ ತಯಾರಿಸಬಹುದು ಈ ಸೂಪರ್ ಟೇಸ್ಟಿ ತಿಂಡಿಗಳನ್ನು ಮತ್ತು ಇಲ್ಲಿದೆ ಅವುಗಳ ರೆಸಿಪಿ.
ಅನ್ನದಿಂದ ಸಾಫ್ಟ್ ಇಡ್ಲಿ :
ರಾತ್ರಿ ಸಾಕಷ್ಟು ಅನ್ನ ಉಳಿದಿದ್ದರೆ, ಮರುದಿನ ನೀವು ಅದರಿಂದ ಇಡ್ಲಿ ತಯಾರಿಸಬಹುದು. 2-3 ಚಮಚ ನೀರು ಹಾಕಿ ಅನ್ನವನ್ನು ಮಿಕ್ಸಿ ಮಾಡಿಕೊಳ್ಳಿ. 1 ಕಪ್ ರವೆ, ಅರ್ಧ ಕಪ್ ಮೊಸರು, ಉಪ್ಪು ಮತ್ತು ನೀರು ಬೆರೆಸಿ. ಹಿಟ್ಟು ತಯಾರಿಸಿ 20 ನಿಮಿಷಗಳ ಕಾಲ ಬಿಡಿ. ಈಗ ಇದಕ್ಕೆ ಫ್ರೂಟ್ ಸಾಲ್ಟ್ ಅಥವಾ ಬೇಕಿಂಗ್ ಸೋಡಾ ಸೇರಿಸಿ. ಮೃದುವಾದ ಇಡ್ಲಿಯನ್ನು ತಯಾರಿಸಿ.
ಅನ್ನದ ಕಟ್ಲೆಟ್:
1 ಬೇಯಿಸಿದ ಆಲೂಗಡ್ಡೆ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು, ಶುಂಠಿ ಮತ್ತು ಡ್ರೈ ಮಸಾಲೆಗಳನ್ನು ಅನ್ನಕ್ಕೆ ಮಿಕ್ಸ್ ಮಾಡಿ. 1 ಟೀಸ್ಪೂನ್ ಕಡಲೆ ಹಿಟ್ಟು ಅಥವಾ ಕಾರ್ನ್‌ಫ್ಲೋರ್ ಸೇರಿಸಿ ಮತ್ತು ಅದರಿಂದ ಸಣ್ಣ ಕಟ್ಲೆಟ್ ತಯಾರಿಸಿ. ಬ್ರೆಡ್ ಕ್ರಂಬ್ಸ್‌ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಫ್ರೈ ಮಾಡಿ. ಇದನ್ನು ಪ್ಯಾನ್‌ನಲ್ಲೂ ಫ್ರೈ ಮಾಡಬಹುದು.
ರೊಟ್ಟಿ/ಚಪಾತಿ ಪಿಜ್ಜಾ:
ಉಳಿದಿರುವ ಚಪಾತಿ ಮೇಲೆ ಪಿಜ್ಜಾ ಸಾಸ್, ಕ್ಯಾಪ್ಸಿಕಂ, ಈರುಳ್ಳಿ, ಕಾರ್ನ್ ಮತ್ತು ತುರಿದ ಚೀಸ್ ಇರಿಸಿ. ಅದರ ಮೇಲೆ ಒಂದು ಚಿಟಿಕೆ ಚಿಲ್ಲಿ ಫ್ಲೇಕ್ಸ್ ಮತ್ತು ಇಟಾಲಿಯನ್ ಹರ್ಬ್ಸ್ ಸಿಂಪಡಿಸಿ. ಈಗ ಪ್ಯಾನ್ ಮೇಲೆ ಸ್ವಲ್ಪ ಬೆಣ್ಣೆ ಹಾಕಿ ಮತ್ತು ರೊಟ್ಟಿ ಯಾ ಚಪಾತಿ ಗರಿಗರಿಯಾಗುವವರೆಗೆ ಬೇಯಿಸಿ.
ರೋಟಿ ಚಾಟ್:
ಉಳಿದ ರೋಟಿಯನ್ನು ತ್ರಿಕೋನ ಆಕಾರದಲ್ಲಿ ಕತ್ತರಿಸಿ ಡೀಪ್ ಫ್ರೈ ಮಾಡಿ. ಅದರ ಮೇಲೆ ಚನ್ನಾ, ಆಲೂಗಡ್ಡೆ, ಟೊಮೆಟೊ, ಈರುಳ್ಳಿ, ಹಸಿರು ಚಟ್ನಿ, ಹುಣಸೆ ಚಟ್ನಿ ಮತ್ತು ಮೊಸರು ಹಾಕಿ. ಮೇಲಿನಿಂದ ಚಾಟ್ ಮಸಾಲ ಮತ್ತು ಹಸಿರು ಕೊತ್ತಂಬರಿ ಉದುರಿಸಿ ಎಂಜಾಯ್ ಮಾಡಿ.
ಚಪಾತಿ/ ರೋಟಿ ನೂಡಲ್ಸ್:
ಉಳಿದ ಚಪಾತಿಯನ್ನು ಉದ್ದ ಮತ್ತು ತೆಳ್ಳಗೆ ಕಟ್ ಮಾಡಿ ಕೊಳ್ಳಿ. ಈರುಳ್ಳಿ, ಕ್ಯಾರೆಟ್, ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ಮತ್ತು ಸೋಯಾ ಸಾಸ್ ಅನ್ನು ಬಾಣಲೆಯಲ್ಲಿ ಮಿಕ್ಸ್ ಮಾಡಿ ಮತ್ತು ಅದಕ್ಕೆ ಕಟ್ ಮಾಡಿದ ಚಪಾತಿ ಸೇರಿಸಿ ಮತ್ತು 2-3 ನಿಮಿಷ ಬೇಯಿಸಿ.
ರೊಟ್ಟಿ ಲಾಡುಗಳು:
ಮೊದಲು ರೋಟಿಯನ್ನು ತರಿತರಿಯಾಗಿ ಪುಡಿಮಾಡಿ. ಸಕ್ಕರೆ, ಹಾಲಿನ ಪುಡಿ ಸೇರಿಸಿ ಮತ್ತೊಮ್ಮೆ ಪುಡಿಮಾಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಪುಡಿ ಮಾಡಿದ ಮಿಶ್ರಣವನ್ನು 2-3 ನಿಮಿಷ ಹುರಿಯಿರಿ ಮತ್ತು ಅದಕ್ಕೆ ಡ್ರೈ ಫ್ರುಟ್ಸ್ ಸೇರಿಸಿ. ಮಿಶ್ರಣ ತಣ್ಣಗಾದಾಗ ಲಡ್ಡು ಆಕಾರವನ್ನು ನೀಡಿ. ಬೇಕಾದರೆ ಅದಕ್ಕೆ ಸ್ವಲ್ಪ ಹಾಲು ಸೇರಿಸಿ.
ಪಲ್ಯದ ಕಟ್ಲೆಟ್:
ಉಳಿದ ತರಕಾರಿ ಪಲ್ಯಕ್ಕೆ 2 ಬೇಯಿಸಿದ ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, 4 ಟೀ ಚಮಚ ಬ್ರೆಡ್ ಕ್ರಂಬ್ಸ್, 2 ಟೀ ಚಮಚ ಕಾರ್ನ್‌ಫ್ಲೋರ್ ಮತ್ತು ಉಪ್ಪು ಸೇರಿಸಿ ಮತ್ತು ಬೇಕಾದ ಗಾತ್ರದ ಕಟ್ಲೆಟ್ ಮಾಡಿ. ಈಗ ಅದನ್ನು ರವೆಯಲ್ಲಿ ಹೊರಳಿಸಿ ದೊಡ್ಡ ಉರಿಯಲ್ಲಿ ಹುರಿಯಿರಿ ಅಥವಾ ಗ್ರಿಲ್ ಮಾಡಿ.
ರಾಜ್ಮಾ ಗ್ಲೂಟಿ ಕಬಾಬ್:
ಉಳಿದ ರಾಜ್ಮಾವನ್ನು ಚೆನ್ನಾಗಿ ಹುರಿದು ನೀರು ಇಂಗಿಸಿಕೊಳ್ಳಿ. ಹಸಿರು ಮೆಣಸಿನಕಾಯಿ, ಕೊತ್ತಂಬರಿ, ಈರುಳ್ಳಿ ಸೇರಿಸಿ ಕಬಾಬ್ ಆಕಾರವನ್ನು ನೀಡಿ ಫ್ರೈ ಮಾಡಿ.
ದಾಲ್ ಚೀಲಾ:
ಅರ್ಧ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಅಕ್ಕಿ ಹಿಟ್ಟು, 2 ಟೀ ಚಮಚ ಸಣ್ಣಗೆ ಕತ್ತರಿಸಿದ ಶುಂಠಿ-ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು, ಅರ್ಧ ಟೀ ಚಮಚ ಎಣ್ಣೆ ಮತ್ತು ಉಪ್ಪನ್ನು ಉಳಿದ ದಾಲ್‌ಗೆ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಈಗ ನಾನ್‌ಸ್ಟಿಕ್ ಪ್ಯಾನ್‌ನ ಮೇಲೆ ಹಿಟ್ಟು ಸುರಿಯಿದು ದೋಸೆ ತಯಾರಿಸಿ. ಎರಡೂ ಬದಿಗಳನ್ನು ಬೇಯಿಸಿ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ.
ಕಾಟಿ ರೋಲ್:
ಪನ್ನೀರ್, ಚಿಕನ್ ಅಥವಾ ಯಾವುದೇ ತರಕಾರಿ ಪಲ್ಯ ಉಳಿದರೆ ರೋಲ್ ತಯಾರಿಸಬಹುದು. ಗೋಧಿ ಹಿಟ್ಟು, ಮೈದಾ, ಎಣ್ಣೆ ಮತ್ತು ಉಪ್ಪು ಬೆರೆಸಿ ಹಿಟ್ಟು ರೆಡಿ ಮಾಡಿಕೊಳ್ಳಿ. ಅದರಿಂದ ಚಪಾತಿ ತಯಾರಿಸಿ ಅದರ ಮೇಲೆ ಸಾಸ್ ಅಥವಾ ಚಟ್ನಿ ಹಾಕಿ, ಉಳಿದ ತರಕಾರಿಗಳು, ಹಸಿ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬಿಗಿ ರೋಲ್ ಮಾಡಿ ಗ್ರೀಲ್‌ನಲ್ಲಿ ಬೇಯಿಸಿ.