6 ಬೆಳ್ಳುಳ್ಳಿ ಎಸಳು + 1 ನಿಂಬೆಹಣ್ಣಿನಿಂದ ತಯಾರಿಸಿ ರುಚಿಯಾದ ತಿಂಡಿ; ಚಟ್ಪಟ್ ರೆಸಿಪಿ
ತರಕಾರಿ ಬೆಲೆ ಏರಿಕೆಯ ಸಮಯದಲ್ಲಿ ಕೇವಲ ಬೆಳ್ಳುಳ್ಳಿ ಮತ್ತು ನಿಂಬೆಹಣ್ಣು ಬಳಸಿ 5 ನಿಮಿಷದಲ್ಲಿ ರುಚಿಯಾದ ತಿಂಡಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಅನ್ನಕ್ಕೆ ಒಗ್ಗರಣೆ ಮತ್ತು ಮಸಾಲೆ ಸೇರಿಸಿ ಮಾಡುವ ಈ ಸ್ಪೈಸಿ ರೆಸಿಪಿ ಬೆಳಗಿನ ಉಪಹಾರಕ್ಕೆ ಹೇಳಿಮಾಡಿಸಿದ್ದು.

ಬೆಳಗ್ಗೆಗೆ 5 ನಿಮಿಷದ ತಿಂಡಿ
ಬೆಳಗ್ಗೆ ತಿಂಡಿ ಏನು ಮಾಡೋದು ಒಂದು ಸವಾಲು ಆದ್ರೆ, ತರಕಾರಿ ಬೆಲೆ ಗಗನಕ್ಕೇರಿಕೆ ಆಗುತ್ತಿರೋದು ಮಧ್ಯಮವರ್ಗದವರಿಗೆ ಚಿಂತೆಯನ್ನುಂಟು ಮಾಡಿದೆ. ಇಂದು ನಾವು ನಿಮಗೆ ಕೇವಲ ಬೆಳ್ಳುಳ್ಳಿ ಮತ್ತು ನಿಂಬೆಹಣ್ಣಿನಿಂದ ರುಚಿಯಾದ ಸ್ಪೈಸಿ ತಿಂಡಿ ಮಾಡೋದು ಹೇಗೆ ಎಂದು ಹೇಳುತ್ತಿದ್ದೇವೆ.
ಚಟ್ಪಟ್ ರೆಸಿಪಿಗೆ ಬೇಕಾಗುವ ಸಾಮಾಗ್ರಿಗಳು
ಅನ್ನ: 1 ಕಪ್, ಬೆಳ್ಳುಳ್ಳಿ ಎಸಳು: 6 ರಿಂದ 8, ನಿಂಬೆಹಣ್ಣು: ಒಂದು, ಒಗ್ಗರಣೆಗೆ ಸಾಸಿವೆ ಮತ್ತು ಜೀರಿಗೆ, ಎರಡು ಟೀ ಸ್ಪೂನ್ ಅಡುಗೆಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆಯಷ್ಟು ಅರಿಶಿನ ಪುಡಿ, 1 ಟೀ ಸ್ಪೂನ್ ಅಚ್ಚಖಾರದ ಪುಡಿ
ಚಟ್ಪಟ್ ತಿಂಡಿ ಮಾಡುವ ವಿಧಾನ
ಮೊದಲಿಗೆ ಬೆಳ್ಳುಳ್ಳಿಯ ಎಸಳು ಬಿಡಿಸಿಕೊಂಡು ಎತ್ತಿಟ್ಟುಕೊಳ್ಳಿ. ಒಲೆ ಆನ್ ಮಾಡಿಕೊಂಡು ಬಾಣಲೆಯನ್ನಿಟ್ಟುಕೊಳ್ಳಿ. ಈಗ ಬಾಣಲೆಗೆ ಅಡುಗೆಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸವೆ ಮತ್ತು ಜೀರಿಗೆ ಹಾಕಿ ಸಿಡಿಸಿಕೊಳ್ಳಿ. ಸಾಸವೆ ಸಿಡಿಯುತ್ತಿದ್ದಂತೆಯೇ ಜಜ್ಜಿಕೊಂಡಿರುವ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳಬೇಕು.
ಒಗ್ಗರಣೆ
ಬೆಳ್ಳುಳ್ಳಿ ಪರಿಮಳ ಬರುತ್ತಿದ್ದಂತೆಯೇ ಒಲೆ ಆಫ್ ಮಾಡಿಕೊಂಡು ಅರಿಶಿನ, ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಈಗ ಇದಕ್ಕೆ ಒಂದು ಬೌಲ್ ಅನ್ನವನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಕೊನೆಯದಾಗಿ ನಿಂಬೆಹಣ್ಣಿನ ರಸ ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳಿ.
ಸ್ಪೈಸಿಯಾದ ತಿಂಡಿ
ಎಲ್ಲಾ ಮಸಾಲೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡ ನಂತರ ಒಲೆ ಆನ್ ಮಾಡಿಕೊಂಡು ಒಂದೆರಡು ನಿಮಿಷ ಬಿಸಿ ಮಾಡಿಕೊಂಡ್ರೆ ರುಚಿಯಾದ ಸ್ಪೈಸಿಯಾದ ತಿಂಡಿ ಸವಿಯಲು ಸಿದ್ಧವಾಗುತ್ತದೆ. ಬೇಕಿದ್ರೆ ಕೊನೆಗೆ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿಕೊಳ್ಳಬೇಕು. ಒಗ್ಗರಣೆ ಸಮಯದಲ್ಲಿ ಕರೀಬೇವು, ಉದ್ದಿನಬೇಳೆಯನ್ನು ಸೇರಿಸಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

