ಕಡಿಮೆ ಹಾಲಿನಲ್ಲಿ ಗಾಢವಾಗಿ ಟೀ ಮಾಡೋ ವಿಧಾನ
ಟೀ ಮಾಡೋದು ಯಾರಿಗೆ ಗೊತ್ತಿಲ್ಲ ಅಂತ ನೀವು ಕೇಳಬಹುದು. ಆದ್ರೆ ಎಲ್ಲಾ ಹೋಟೆಲ್‌ಗಳಲ್ಲಿ ಟೀ ಒಂದೇ ರುಚಿಯನ್ನು ಹೊಂದಿರಲ್ಲ ಎಂದು ನೀವೇ ಒಪ್ಪಿಕೊಳ್ಳುತ್ತೀರಿ. ಇಂದು ನಾವು ರುಚಿಕರವಾಗಿ ಕಡಿಮೆ ಹಾಲಿನಲ್ಲಿ ಗಾಢವಾಗಿ ಟೀ ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ.
ಕೆಲವೊಮ್ಮೆ ಮನೆಗೆ ದಿಢೀರ್ ಅಂತ ಅತಿಥಿಗಳು ಬಂದಾಗ ಟೀ ಮಾಡಲು ಸಾಕಷ್ಟು ಹಾಲು ಇರಲ್ಲ. ಇಂತಹ ಸಂದರ್ಭದಲ್ಲಿ ಕೆಲ ವಿಶೇಷ ಪದಾರ್ಥ ಬಳಸಿ ಗಾಢವಾಗಿ ಟೀ ಮಾಡಬಹುದು. ಇದರಿಂದ ಟೀ ಕುಡಿಯುವ ಜನರಿಗೆ ಹಾಲು ಕಡಿಮೆ ಇದೆ ಅಂತ ಗೊತ್ತೇ ಆಗಲ್ಲ. ಟೀಯ ರುಚಿಯ ಮುಂದೆ ಹಾಲಿನ ಪ್ರಶ್ನೆಯೇ ಬರಲ್ಲ.
ಗಾಢವಾದ ಟೀ ಮಾಡಲು ಬೇಕಾಗುವ ಸಾಮಾಗ್ರಿಗಳು
ಟೀ ಪುಡಿ: ಅರ್ಧ ಟೀ ಸ್ಪೂನ್, ಹಾಲು: ಅರ್ಧ ಕಪ್, ಸಕ್ಕರೆ: ಒಂದೂವರೆ ಟೀ ಸ್ಪೂನ್, ಏಲಕ್ಕಿ: ಒಂದು, ಟೀ ಮಸಾಲೆ: 1/4 ಟೀ ಸ್ಪೂನ್, ನೀರು. (ಟೀ ಮಸಾಲೆ ಪೌಡರ್ ಅಂಗಡಿಗಳಲ್ಲಿ ಸಿಗುತ್ತದೆ.)
ಗಾಢವಾದ ಟೀ ಮಾಡುವ ವಿಧಾನ
ಮೊದಲಿಗೆ ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಳ್ಳಿ. ನಂತರ ಪಾತ್ರೆಗೆ ಸಕ್ಕರೆ ಹಾಕಿಕೊಂಡು ಕಡಿಮೆ ಉರಿಯಲ್ಲಿ ಅದು ಕರುಗುವರೆಗೂ ಚಮಚದಿಂದ ಅಲ್ಲಾಡಿಸುತ್ತಿರಬೇಕು. ಈ ಸಮಯದಲ್ಲಿ ಬೇಕಿದ್ರೆ ಎರಡು ಟೀ ಸ್ಪೂನ್ ನೀರು ಹಾಕಿ ಪಾಕದ ಹದಕ್ಕೆ ಬರೋವರೆಗೂ ಸಕ್ಕರೆ ಕರಗಬೇಕು. ನಂತರ ಈ ಪಾಕಕ್ಕೆ ಜಜ್ಜಿದ ಏಲಕ್ಕಿ ಮತ್ತು ಟೀ ಪುಡಿ ಮಿಕ್ಸ್ ಮಾಡಿಕೊಳ್ಳಿ.
ತದನಂತರ ಇದಕ್ಕೆ ಒಂದರಿಂದ ಎರಡು ಕಪ್‌ನಷ್ಟು ನೀರು ಸೇರಿಸಿ ಏಲಕ್ಕಿಯ ಪರಿಮಳ ಬರೋವರೆಹೂ ಕಡಿಮೆ ಉರಿಯಲ್ಲಿಯೇ ಕುದಿಸಬೇಕು. ಏಲಕ್ಕಿ ಪರಿಮಳ ಬರುತ್ತಿದ್ದಂತೆ ಟೀ ಮಸಾಲೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಎರಡು ನಿಮಿಷ ಕುದಿಸಿಕೊಳ್ಳಬೇಕು. ಕೊನೆಯದಾಗಿ ನಿಮ್ಮ ಬಳಿಯಲ್ಲಿರುವ ಹಾಲು ಸೇರಿಸಿ ಮತ್ತೆ ಎರಡು ನಿಮಿಷ ಕುದಿಸಿದ್ರೆ ಗಾಢವಾದ ಟೀ ಕುಡಿಯಲು ಸಿದ್ಧವಾಗುತ್ತದೆ.