ನೂಡಲ್ಸ್ ಅಂಟು ಅಂಟಾಗುತ್ತಾ? ಹೀಗೆ ಮಾಡಿದ್ರೆ ಸರಿ ಹೋಗುತ್ತೆ ನೋಡಿ
ಹೆಚ್ಚಿನ ಮಕ್ಕಳು ಮ್ಯಾಗಿ ಅಥವಾ ನೂಡಲ್ಸ್ ತಿನ್ನಲು ಇಷ್ಟಪಡುತ್ತಾರೆ. ಆದರೆ, ಮನೆಯಲ್ಲಿ ಮ್ಯಾಗಿ ಅಥವಾ ನೂಡಲ್ಸ್ ತಯಾರಿಸುವಾಗ ಅನೇಕ ಬಾರಿ ಒಂದಲ್ಲ ಒಂದು ತಪ್ಪು ನಡೆದೇ ನಡೆಯುತ್ತೆ. ಜೊತೆಗೆ ಇದು ರೆಸ್ಟೋರೆಂಟ್ ನಲ್ಲಿ ಸಿಗೋ ನೂಡಲ್ಸ್ ನಂತೆ ರುಚಿಕರವಾಗುವುದಿಲ್ಲ. ನೂಡಲ್ಸ್ ಅನ್ನು ಬೇಯಿಸುವಾಗ ನಾವು ಮಾಡೋ, ಕೆಲವು ಸಣ್ಣ ತಪ್ಪುಗಳು ಅವು ಅಂಟಿಕೊಳ್ಳುವಂತೆ ಮಾಡುತ್ತವೆ ಮತ್ತು ನೂಡಲ್ಸ್ ರುಚಿಯನ್ನು ಸಹ ನೀಡೋದಿಲ್ಲ. ನೂಡಲ್ಸ್ ಚೆನ್ನಾಗಿ ಬೆಂದಿದ್ದರೂ ಸಹ ಅವು ಅಂಟಂಟು ಆಗಿರೋದ್ರಿಂದ ತಿನ್ನಲು ಯಾರಿಗೂ ಇಷ್ಟವಾಗೋದಿಲ್ಲ. ಹಾಗಿದ್ರೆ ಅಂಟಿಕೊಳ್ಳದಂತೆ ನೂಟಲ್ಸ್ ತಯಾರಿಸೋದು ಹೇಗೆ?
ಅಡುಗೆಮನೆಯಲ್ಲಿ ನೂಡಲ್ಸ್ ತಯಾರಿಸುವಾಗ ಅಂಟುವ ಸಮಸ್ಯೆ ಉಂಟಾಗುತ್ತದೆ. ಜಿಗುಟಾದ ನೂಡಲ್ಸ್ ಬಡಿಸಿದಾಗ ಅದು ತಿನ್ನಲು ಚೆನ್ನಾಗಿರೋದಿಲ್ಲ. ನೀವು ಮನೆಯಲ್ಲಿ ನೂಡಲ್ಸ್ ಅನ್ನು ತಯಾರಿಸುತ್ತಿದ್ದರೆ, ಚೌಮಿನ್ ಅನ್ನು ಕುದಿಸುವಾಗ ಕೆಲವು ಟಿಪ್ಸ್ ಅನುಸರಿಸಿದ್ರೆ ಮಾರ್ಕೆಟ್ ಅಥವಾ ರೆಸ್ಟೋರೆಂಟಿನಲ್ಲಿ ಸಿಗುವಂತಹ ಉದುರುದುರಾದ ನೂಡಲ್ಸ್ ತಯಾರಿಸಬಹುದು. ಅಂತಹ ನೂಡಲ್ಸ್ ನೋಡಲು ಚೆನ್ನಾಗಿರುತ್ತೆ ಮತ್ತು ರುಚಿಯಲ್ಲಿ ರುಚಿಕರವಾಗಿರುತ್ತದೆ. ಮನೆಯಲ್ಲಿ ನೂಡಲ್ಸ್ ತಯಾರಿಸುವಾಗ ಏನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು ನೋಡೋಣ.
ಚೌಮಿನ್ ಅನ್ನು ತುಂಡು ಮಾಡ್ಬೇಡಿ
ನೀವು ನೂಡಲ್ಸ್ ಅನ್ನು ಬೇಯಿಸಲು ಬಯಸಿದ್ರೆ, ಅವುಗಳನ್ನು ಯಾವತ್ತೂ ಮುರಿಯಬೇಡಿ. ನೂಡಲ್ಸ್ ಅನ್ನು ತುಂಡು ಮಾಡಿ, ಅವುಗಳಿಗೆ ನೀರು ಹಾಕಿದ್ರೆ, ಅವು ಬೇಗನೆ ಕುದಿಯುತ್ತವೆ ಮತ್ತು ಅಂಟಿಕೊಳ್ಳುತ್ತವೆ. ಆದುದರಿಂದ ನೂಡಲ್ಸ್ ನ್ನು ತುಂಡು ಮಾಡದೆ ಹಾಗೆಯೇ ಕುದಿಸಿ.
ನೂಡಲ್ಸ್ ಕುದಿಸುವಾಗ ಎಣ್ಣೆ ಮತ್ತು ಉಪ್ಪನ್ನು ಸೇರಿಸಿ
ನೂಡಲ್ಸ್ ಕುದಿಸುವಾಗ, ಒಂದು ದೊಡ್ಡ ಪಾತ್ರೆಗೆ ಹೆಚ್ಚು ನೀರನ್ನು ಸೇರಿಸಿ ಮತ್ತು ನೀರು ಕುದಿಯಲು ಪ್ರಾರಂಭಿಸಿದಾಗ, ಅದಕ್ಕೆ ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ. ಇದು ನೂಡಲ್ಸ್ ಅಂಟಿಕೊಳ್ಳದಂತೆ, ಅಂದರೆ ಉದುರುದುರಾಗಿ ಮಾಡುತ್ತೆ.
ಚೌಮಿನ್ ಅನ್ನು ಕಡಿಮೆ ಕುದಿಸಿ
ಕುದಿಯುವಾಗ ನೂಡಲ್ಸ್ ಅನ್ನು ಸಂಪೂರ್ಣವಾಗಿ ಬೇಯಿಸಬೇಡಿ. ನೂಡಲ್ಸ್ ನ ಸುಮಾರು 70 ಪ್ರತಿಶತದಷ್ಟು ಮಾತ್ರ ಕುದಿಸಿ. ಪೂರ್ಣಗೊಂಡಾಗ ಅವು ಅಂಟಿಕೊಳ್ಳುತ್ತವೆ. ಮೂರರಿಂದ ನಾಲ್ಕು ನಿಮಿಷಗಳ ಕಾಲ ನೂಡಲ್ಸ್ ಬೇಯಿಸಿದ ನಂತರ ಗ್ಯಾಸ್ ಆಫ್ ಮಾಡಿ.
ನೀರಿನಿಂದ ತೆಗೆಯಿರಿ
ಚೌಮಿನ್ ಅನ್ನು ಕುದಿಸಿದ ನಂತರ, ಅದನ್ನು ನೀರಿನಲ್ಲಿ ಉಳಿಯಲು ಬಿಡಬೇಡಿ, ತಕ್ಷಣವೇ ಅದನ್ನು ಜರಡಿಯಲ್ಲಿ ಹಾಕಿ ನೀರನ್ನು ತೆಗೆಯಿರಿ. ಇದನ್ನು ಜರಡಿಯಲ್ಲಿ ಹರಡಿ ಮತ್ತು ಗಾಳಿಯಲ್ಲಿ ಚೆನ್ನಾಗಿ ಒಣಗಲು ಬಿಡಿ ಮತ್ತು ನೀರನ್ನು ಫಿಲ್ಟರ್ ಮಾಡಲು ಬಿಡಿ.
ನೂಡಲ್ಸ್ ಅನ್ನು ಬೇರ್ಪಡಿಸಿ
ನೂಡಲ್ಸ್ ಜರಡಿಯಲ್ಲಿ ತಣ್ಣಗಾಗಲು ಪ್ರಾರಂಭಿಸಿದಾಗ, ಅದನ್ನು ತಣ್ಣೀರಿನಿಂದ ತೊಳೆಯಿರಿ. ಇದರ ನಂತರ, ಮತ್ತೊಂದು ಪಾತ್ರೆಗೆ ಹಾಕಿ ಮತ್ತು ಚೆನ್ನಾಗಿ ಗಾಳಿ ತಾಗಲು ಬಿಡಿ. ಇದನ್ನು ಮಾಡುವಾಗ, ನೂಡಲ್ಸ್ ತುಂಡಾಗದಂತೆ ನೋಡಿಕೊಳ್ಳುವುದು ತುಂಬಾನೆ ಮುಖ್ಯ.
ನೂಡಲ್ಸ್ ಗೆ ಎಣ್ಣೆ ಹಚ್ಚಿ
ಚೌಮಿನ್ ತಣ್ಣಗಾದ ನಂತರ, ನೂಡಲ್ಸ್ ಗೆ ಕೈಗಳ ಸಹಾಯದಿಂದ ಎಣ್ಣೆ ಹಚ್ಚಿಡಿ. ಇದು ಅಡುಗೆ ಮಾಡುವಾಗ ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡುವುದಿಲ್ಲ. ಜೊತೆಗೆ ನೂಡಲ್ಸ್ ಚೆನ್ನಾಗಿ ಬರುತ್ತದೆ. ಬೇಕಾದರೆ ಟ್ರೈ ಮಾಡಿ ನೋಡಿ.