ನಿಂತರೆ ನೋವು, ಓಡಾಡಿದ್ರೆ ಸುಸ್ತು...ಏನೇ ಇರಲಿ ಪರಿಹಾರ ಈ ಆಹಾರದಲ್ಲಿದೆ
ಈಗಿನ ದಿನಗಳಲ್ಲಿ ಎಲ್ಲದಕ್ಕೂ ಇತರ ವಸ್ತುಗಳನ್ನೇ ಅವಲಂಬಿಸಿ, ಸ್ವಲ್ಪ ಏನಾದರೂ ಕೆಲಸ ಮಾಡಿದರೆ ಸುಸ್ತಾಗುತ್ತದೆ. ಆಫೀಸ್‌ನಲ್ಲಿ ಅಪ್ಪಿ ತಪ್ಪಿ ಲಿಫ್ಟ್ ಕೆಟ್ಟೋಗಿ ಸೆಕೆಂಡು ಫ್ಲೋರ್‌ಗೆ ಮೆಟ್ಟಿಲೇರಿ ಹೋಗುವಾಗ ಅಥವಾ ಶಾಂಪಿಂಗ್ ಮಾಲ್‌ನಲ್ಲಿ ಒಂದೆರಡು ಗಂಟೆ ಸುತ್ತಾಡಿದರೆ ಸಾಕು, ಉಫ್ ಎನ್ನುವಷ್ಟು ಸುಸ್ತಾಗುತ್ತದೆ. ಹೀಗೆ ಆದರೆ ದೇಹದಲ್ಲಿ ಇನ್ನಷ್ಟು ಎನರ್ಜಿ ತುಂಬಿಕೊಂಡು ದೇಹ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರ್ಥ. ಅಷ್ಟಕ್ಕೂ ದೇಹದ ಕ್ಷಮತೆ ಹೆಚ್ಚಿಸಿಕೊಳ್ಳಲು ಯಾವ ಆಹಾರ ಬೆಸ್ಟ್?
ಜೀವನಶೈಲಿ ಸರಿಯಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ಅಸಮರ್ಪಕ ಜೀವನಶೈಲಿ ಮತ್ತು ಅಸಮರ್ಪಕ ಆಹಾರ ಸೇವನೆ ಪದ್ಧತಿಯಿಂದ ದೈಹಿಕ ಸ್ಥಿತಿ ಹದಗೆಡುತ್ತದೆ. ಅದಕ್ಕಾಗಿ ಯಾವೆಲ್ಲಾ ಆಹಾರವನ್ನು ಸೇವಿಸಿದರೆ ದೇಹ ಕ್ಷಮತೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಮಾಹಿತಿ ಇಲ್ಲಿದೆ.
ಮೊಟ್ಟೆ: ಬೆಳಗಿನ ಉಪಹಾರದಲ್ಲಿ ಬೇಯಿಸಿದ ಮೊಟ್ಟೆ ತಿನ್ನಿ. ಮೊಟ್ಟೆಯಲ್ಲಿ ಪ್ರೊಟೀನ್, ಖನಿಜ, ವಿಟಾಮಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುತ್ತವೆ. ಇವು ಇಡೀ ದಿನಕ್ಕೆ ಬೇಕಾದಷ್ಟು ಎನರ್ಜಿಯನ್ನು ದೇಹದಲ್ಲಿ ತುಂಬುತ್ತದೆ.
ಓಟ್‌ಮೀಲ್: ದಿನವನ್ನು ಒಂದು ಬೌಲ್ ಓಟ್‌ಮೀಲ್‌ನಿಂದ ಆರಂಭಿಸಿದರೆ ದಣಿವಿನಿಂದ ದೂರ ಇರಬಹುದು. ಇದು ಸಂಕೀರ್ಣವಾದ ಕಾರ್ಬೋಹೈಡ್ರೇಟ್ ಆಗಿದ್ದು, ಇದನ್ನು ಸೇವನೆ ಮಾಡಿದರೆ ಜೀರ್ಣ ಕ್ರಿಯೆ ಹೊಂದಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಅಷ್ಟು ಹೊತ್ತು ಜೀರ್ಣಾಂಗ ಕಾರ್ಯಪ್ರವೃತ್ತವಾಗಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಕೂಡ ಇದು ನಿಯಂತ್ರಿಸುತ್ತದೆ.
ಸೋಯಾಬೀನ್ : ಮಾಂಸ ಖಂಡಗಳ ಬಲವನ್ನು ಹೆಚ್ಚಿಸುವ ಸೋಯಾಬಿನ್, ಪ್ರೊಟೀನ್, ವಿಟಾಮಿನ್ ಮತ್ತು ಖನಿಜಗಳಿಂದ ಶ್ರೀಮಂತವಾಗಿದೆ. ಆದುದರಿಂದ ಇದನ್ನು ಸೇವನೆ ಮಾಡುವುದರಿಂದ ದೇಹ ಸದೃಢವಾಗುತ್ತದೆ.
ಅಕ್ರೋಟು: ನಿಮ್ಮ ತಿಂಡಿಯ ಡಬ್ಬದಲ್ಲಿ ಅಕ್ರೋಟಿಗೆ ಕೂಡ ಸ್ಥಾನವಿರಲಿ. ಇದು ದೇಹ ಕ್ಷಮತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಒಮೆಗಾ -3 ಕೊಬ್ಬಿನ ಆಮ್ಲ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ.
ಪೀನಟ್ ಬಟರ್: ಅತ್ಯಂತ ಆರೋಗ್ಯಕರವಾದ ಶೇಂಗಾದ ಪೇಸ್ಟ್‌ನ್ನು ಸ್ಯಾಂಡ್‌ವಿಚ್ ಜೊತೆಗೆ ಸೇವಿಸಿ. ಇದರಿಂದ ಇಡೀ ದಿನ ದೇಹದ ಸಾಮರ್ಥ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಒಮೆಗಾ-3 ಕೊಬ್ಬಿನ ಆಮ್ಲ ಹೊಂದಿರುವ ಶೇಂಗಾ, ಹೃದಯ ಮತ್ತು ಮೆದುಳನ್ನು ಆರೋಗ್ಯಕರವಾಗಿಡುತ್ತದೆ.
ಹಸಿರು ತರಕಾರಿ: ಹಸಿರು ತರಕಾರಿಯೂ ಮೈಕ್ರೋ ಪೌಷ್ಠಿಕ ಅಂಶಗಳಿಂದ ಶ್ರೀಮಂತವಾಗಿದ್ದು, ದೇಹವನ್ನು ಆರೋಗ್ಯಕರವಾಗಿಡಲು ನೆರವಾಗುತ್ತದೆ. ಇದರಲ್ಲಿರುವ ವಿಟಾಮಿನ್, ಫೈಬರ್‌ಗಳು ದೇಹದ ಕ್ಷಮತೆಯನ್ನು ಹೆಚ್ಚಿಸುತ್ತದೆ.
ಬಾಳೆ ಹಣ್ಣು: ಕಾರ್ಬೋಹೈಡ್ರೇಟ್‌ನಿಂದ ತುಂಬಿರುವ ಬಾಳೆ ಹಣ್ಣು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೀಟ್‌ರೂಟ್: ಬೀಟ್‌ರೂಟ್‌ನಲ್ಲಿ ವಿಟಾಮಿನ್ ಎ ಮತ್ತು ಸಿ ಹೇರಳವಾಗಿದೆ. ಇದು ನಿಮ್ಮನ್ನು ದಿನ ಪೂರ್ತಿ ಲವಲವಿಕೆಯಲ್ಲಿಡುತ್ತದೆ.
ಒಟ್ಟಿನಲ್ಲಿ ಮೇಲೆ ಹೇಳಿದ ಹಣ್ಣು-ತರಕಾರಿಗಳನ್ನು ನಿಮ್ಮ ಊಟ-ತಿಂಡಿಯ ಭಾಗವನ್ನಾಗಿ ಮಾಡಿಕೊಳ್ಳಿ. ಈ ಮೂಲಕ ಆರೋಗ್ಯಕರ ಜೀವನ ಸಾಗಿಸಿ.