ಸಂಜೆ ಸ್ನ್ಯಾಕ್ಸ್‌ಗೆ 20 ನಿಮಿಷದಲ್ಲಿ ತಯಾರಿಸಿ ರುಚಿಕರ ಕ್ರಿಸ್ಪಿ ಮಸಾಲೆ ಪಡ್ಡು
Paddu Making Recipe: ಮಕ್ಕಳಿಗೆ ಮತ್ತು ಕೆಲಸದಿಂದ ಬಂದವರಿಗೆ ರುಚಿಕರವಾದ ತಿಂಡಿ ಬೇಕೆಂದಾಗ ಈ ಪಡ್ಡು ರೆಸಿಪಿ ಬಳಸಿ. ಕೇವಲ 20 ನಿಮಿಷದಲ್ಲಿ ಚಿರೋಟಿ ರವೆ ಬಳಸಿ ಕ್ರಿಸ್ಪಿ ಮಸಾಲೆ ಪಡ್ಡು ತಯಾರಿಸುವ ವಿಧಾನ ಇಲ್ಲಿದೆ.

ಮಕ್ಕಳು ಶಾಲೆಯಿಂದ ಬಂದ ಕೂಡಲೇ ಹಸಿವು ಅಂತಾರೆ. ಇತ್ತ ಕೆಲಸದಿಂದ ಬರೋರು ಸಹ ಏನಾದ್ರು ತಿನ್ನೋಕೆ ಇದೆಯಾ ಎಂದು ಕೇಳುತ್ತಾರೆ. ಟೀ ಜೊತೆ ಸೈಡ್ ಡಿಶ್ ಆಗಿ ರುಚಿಯಾದ ತಿಂಡಿ ಇರಬೇಕೆಂದು ಬಯಸುತ್ತಾರೆ.
Paniyaram
ಇಂದು ನಾವು ಸಂಜೆಗೆ ಕೇವಲ 20 ನಿಮಿಷದಲ್ಲಿ ಹೇಗೆ ರುಚಿಯಾದ ಕ್ರಿಸ್ಪಿ ಮಸಾಲೆ ಪಡ್ಡು ಮಾಡುವ ವಿಧಾನ ಹೇಳುತ್ತಿದ್ದೇವೆ. ಈ ಪಡ್ಡು ಮಾಡಲು ಅಕ್ಕಿ-ಉದ್ದು ನೆನಸಿಟ್ಟು ರುಬ್ಬುವ ಅವಶ್ಯಕತೆ ಇರಲ್ಲ. ಫಟಾಫಟ್ ಅಂತ ಪಡ್ಡು ತಯಾರಿಸಬಹುದು.
ಕ್ರಿಸ್ಪಿ ಮಸಾಲೆ ಪಡ್ಡು ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಚಿರೋಟಿ ರವೆ: 250 ಗ್ರಾಂ, ಮೊಸರು: 200 ಗ್ರಾಂ, ಈರುಳ್ಳಿ: 1 (ಮಧ್ಯಮ ಗಾತ್ರದ್ದು), ಹಸಿಮೆಣಸಿನಕಾಯಿ: 2, ಕೋತಂಬರಿ ಸೊಪ್ಪು, ಕರಿಬೇವು: 4 ಎಲೆ, ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು
ಕ್ರಿಸ್ಪಿ ಮಸಾಲೆ ಪಡ್ಡು ಮಾಡುವ ವಿಧಾನ
ಮೊದಲಿಗೆ ಒಂದು ಬೌಲ್‌ಗೆ ರವೆ ಹಾಕಿಕೊಳ್ಳಿ. ನಂತರ ಇದಕ್ಕೆ ಚೆನ್ನಾಗಿ ಬೀಟ್ (ಕಡೆದುಕೊಂಡಿರುವ) ಮಾಡಿರುವ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮುಚ್ಚಳ ಮುಚ್ಚಿ 15 ನಿಮಿಷ ಎತ್ತಿಟ್ಟುಕೊಳ್ಳಬೇಕು.
15 ನಿಮಿಷದ ಬಳಿಕ ಇದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ, ಹಸಿಮೆಣಸಿನಕಾಯಿ, ಕೋತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. (ಬೇಕಿದ್ರೆ ಕ್ಯಾರೆಟ್, ಸೌತೆಕಾಯಿ, ಬೀಟ್‌ರೂಟ್ ಸೇರಿದಂತೆ ಇತರೆ ತರಕಾರಿ ಸೇರಿಸಿಕೊಳ್ಳಬಹುದು)
ಈಗ ಒಲೆ ಆನ್ ಮಾಡ್ಕೊಂಡು ಪಡ್ಡು ತಯಾರಿಸುವ ಮಣೆ ಇರಿಸಿಕೊಳ್ಳಿ. ಮಣೆ ಬಿಸಿಯಾಗುತ್ತಿದ್ದಂತೆ ಎಣ್ಣೆ ಸವರಿ ಎಲ್ಲಾ ಹೋಲ್‌ಗಳಲ್ಲಿ ಮಾಡಿಕೊಂಡಿರುವ ಮಿಶ್ರಣ ಹಾಕಿ, ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಂಡ್ರೆ ರುಚಿಯಾದ ಪಡ್ಡು ಸವಿಯಲು ಸಿದ್ಧವಾಗುತ್ತದೆ.
pori paniyaram
ಕೊಬ್ಬರಿ ಚಟ್ನಿ ಜೊತೆಯಲ್ಲಿ ಇದನ್ನು ಸವಿಯಬಹುದು. ಬಜ್ಜಿ ಮತ್ತು ಬೋಂಡಾದಂತೆಯೂ ತಿನ್ನಬಹುದು. ಸಂಜೆ ಟೀ ಜೊತೆ ಸವಿಯಲು ಪಡ್ಡು ಸೂಕ್ತವಾದ ತಿಂಡಿಯಾಗಿದೆ. ಬೆಳಗಿನ ತಿಂಡಿಯಲ್ಲಿಯೂ ಇದನ್ನು ಬಳಸಬಹುದು.