ಹೂವು, ಹಾರ ಎಲ್ಲಾ ಬಿಟ್ಟು ಶಿವನು ತನ್ನ ಕುತ್ತಿಗೆಯಲ್ಲಿ ಹಾವನ್ನು ಸುತ್ತಿರೋದು ಯಾಕೆ?
ಭಗವಂತ ಶಿವನು ತನ್ನ ಕುತ್ತಿಗೆಯಲ್ಲಿ ಹಾರ, ಹೂವುಗಳನ್ನು ಹಾಕುವ ಬದಲಾಗಿ ಒಂದು ನಾಗರಹಾವನ್ನು ಸುತ್ತಿಕೊಂಡಿರೋದು ಯಾಕೆ? ಇದಕ್ಕೆ ಕಾರಣ ಏನು ಅನ್ನೋದು ಗೊತ್ತಾ ನಿಮಗೆ?

ಶಿವರಾತ್ರಿ ನಿನ್ನೆನೇ ಆಯ್ತು. ದೇಶಾದ್ಯಂತ ಸಂಭ್ರಮದಿಂದ ಶಿವನ ಪೂಜೆಯನ್ನು ಭಕ್ತರು ಮಾಡಿದ್ದಾರೆ. ಶಿವ ಮಂದಿರಕ್ಕೆ ತೆರಳಿ ಶಿವನ ದರ್ಶನ ಪಡೆದು ಬಂದಿದ್ದಾರೆ. ಅಷ್ಟೇ ಅಲ್ಲ ಮಹಾ ಕುಂಭಮೇಳದಲ್ಲೂ ಶಿವರಾತ್ರಿಯಂದು ಕೊನೆಯ ಪುಣ್ಯ ಸ್ನಾನ ಜರುಗಿದೆ. ಇವತ್ತು ಶಿವನ ಕುರಿತಾದ ಒಂದು ಇಂಟ್ರೆಸ್ಟಿಂಗ್ ವಿಷಯದ ಬಗ್ಗೆ ನಾವು ನಿಮಗೆ ಹೇಳ್ತಿದ್ದೇವೆ.
ಶಿವನ ರೂಪವೇ ವಿಚಿತ್ರ. ಆತ ಉಳಿದ ಎಲ್ಲಾ ದೇವರಂತೆ ಇರೋದೇ ಇಲ್ಲ. ವಿಭಿನ್ನತೆಯ ವಿಭಿನ್ನನು ಶಿವ. ಮೈಗೆ ಭಸ್ಮ ಬಳಿಯುತ್ತಾನೆ, ಸ್ಮಶಾನದಲ್ಲಿ ವಾಸ ಮಾಡುತ್ತಾನೆ. ತಲೆಯಲ್ಲಿ ಚಂದ್ರನನ್ನೇ ಕೂರಿಸಿದ್ದಾನೆ. ಅಷ್ಟೇ ಯಾಕೆ ಹೂವಿನ ಬದಲಾಗಿ ಕುತ್ತಿಗೆಯಲ್ಲಿ ಹಾವನ್ನು ಸುತ್ತಿದ್ದಾನೆ ಶಿವ/
ಶಿವನು ತನ್ನ ಕುತ್ತಿಗೆಯಲ್ಲಿ ಹಾವನ್ನು ಇಟ್ಟುಕೊಂಡಿರುವುದನ್ನು ನೀವು ನೋಡಿರುತ್ತೀರಿ ಅಲ್ವಾ? ಆದರೆ ಶಿವನ ಕುತ್ತಿಗೆಯಲ್ಲಿ ಹಾವು ಹೇಗೆ ಬಂತು? ಯಾವಕ್ಕಾಗಿ ಶಿವ ತನ್ನ ಕುತ್ತಿಗೆಗೆ ಹೂವು, ಹೂವಿನ ಹಾರ ಬಿಟ್ಟು ಹಾವನ್ನು ಸುತ್ತಿಕೊಂಡ ಅನ್ನೋದು ಗೊತ್ತಾಗಬೇಕು ಎಂದಾದರೆ ಮುಂದೆ ಓದಿ.
ಪುರಾಣಗಳ ಪ್ರಕಾರ, ಶಿವನ ಕುತ್ತಿಗೆಯ ಸುತ್ತ ಸುತ್ತಿಕೊಂಡಿರುವ ಹಾವಿನ ಹೆಸರು ವಾಸುಕಿ. ನಾಗರಾಜ ವಾಸುಕಿ ಶಿವನ ಮಹಾನ್ ಭಕ್ತರಾಗಿದ್ದರು ಎಂದು ಹೇಳಲಾಗುತ್ತದೆ. ಶಿವ ಭಕ್ತನಾಗಿದ್ದ ವಾಸುಕಿ ಶಿವನ ಕೊರಳಲ್ಲಿ ಹಾರವಾಗಿದ್ದೇ ಕೌತುಕ ಕಥೆ.
ಈ ನಾಗನ ವಂಶಕ್ಕೆ ಸೇರಿದ ಜನರನ್ನು ನಾಗವಂಶಿ ಜನರು ಎನ್ನುತ್ತಾರೆ. ಶಿವ, ನಾಗ ವಂಶಿ ಜನರ ಜೊತೆಗೆ ಹಿಮಾಲಯ ಪ್ರದೇಶದಲ್ಲಿ ವಾಸಿಸುತ್ತಿದ್ದರಂತೆ. ಅಷ್ಟೇ ಅಲ್ಲ ಶಿವನು ಅವರೆಲ್ಲರೊಂದಿಗೆ ಗಾಢವಾದ ಸಂಬಂಧವನ್ನು ಹೊಂದಿದ್ದನು. ಇದಕ್ಕೆ ಸಾಕ್ಷಿ ನಾಗೇಶ್ವರ ಜ್ಯೋತಿರ್ಲಿಂಗ.
ನಾಗರಾಜ ವಾಸುಕಿ ಯಾವಾಗಲೂ ಶಿವನ ಆರಾಧನೆಯಲ್ಲಿ ಮಗ್ನರಾಗಿದ್ದರು. ಶಿವನ ಕುರಿತು ವಾಸುಕಿ ಸದಾ ಪೂಜೆ ತಪಸ್ಸನ್ನು ಮಾಡುತ್ತಿದ್ದರಂತೆ. ಆ ತಪಸ್ಸಿನ ಫಲವೇ ವಾಸುಕಿಗೆ ಶಿವನ ಕುತ್ತಿಗೆಗೆ ಹಾರವಾಗುವ ವರವನ್ನೂ ನೀಡಿತ್ತು.
ಸಮುದ್ರದ ಮಂಥನದ ಸಮಯದಲ್ಲಿ, ಮಂಥನಕ್ಕೆ ಬಳಸಿದ ಹಾವು ನೆನಪಿರಬೇಕು ಅಲ್ವಾ? ಅದು ಸರ್ಪ ರಾಜ ವಾಸುಕಿ. ಸಮುದ್ರ ಮಂಥನದ ಸಮಯದಲ್ಲಿ ವಾಸುಕಿಯ ಬಾಯಿಯಿಂದ ವಿಷ ಹೊರಗೆ ಬಂದಾಗ, ಅದನ್ನು ಶಿವನು ಕುಡಿಯುವ ಮೂಲಕ ಜಗತ್ತು ಕೊನೆಯಾಗೋದರಿಂದ ರಕ್ಷಿಸಿದ್ದರು.
ಇದರ ನಂತರ, ನಾಗರಾಜ ವಾಸುಕಿಯ ಭಕ್ತಿಯಿಂದ ಸಂತೋಷಗೊಂಡ ಶಿವನು ಅವನನ್ನು ನಾಗಲೋಕದ ರಾಜನನ್ನಾಗಿ ಮಾಡಿದರಂತೆ. ಅಷ್ಟೇ ಅಲ್ಲ ವಾಸುಕಿ ಸದಾ ತನ್ನ ಜೊತೆಯಾಗಿರಲು, ತನ್ನ ಕುತ್ತಿಗೆಯ ಮೇಲೆ ವಾಸುಕಿಯನ್ನು ಆಭರಣಗಳಂತೆ ಸುತ್ತಿಕೊಂಡರಂತೆ.