ರಾಮಮಂದಿರದಿಂದ ತಂದ ಅಕ್ಷತೆ ಹೀಗೆ ಬಳಸಿದ್ರೆ ಶ್ರೀರಾಮನ ಅನುಗ್ರಹ ಪ್ರಾಪ್ತಿ
ಇಂದು ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈಗಾಗಲೇ ಶ್ರೀರಾಮ ಭಕ್ತರು ಆಮಂತ್ರಣ ಪತ್ರಿಕೆ ಹಾಗೂ ಅಕ್ಷತೆಯನ್ನು ಮನೆಮನೆಗೆ ತಲುಪಿಸಿದ್ದಾರೆ. ಅದನ್ನು ಯಾವ ರೀತಿ ಬಳಸಿಕೊಳ್ಳಬೇಕು ಅನ್ನೋ ಮಾಹಿತಿ ಇಲ್ಲಿದೆ.
ಇಂದು ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಶ್ರೀರಾಮನ ಬಾಲ ರೂಪದ ವಿಗ್ರಹವನ್ನು ಅಯೋಧ್ಯೆ ರಾಮ ಮಂದಿರದಲ್ಲಿ ಇರಿಸಲಾಗುತ್ತದೆ. ಕೋಟ್ಯಾಂತರ ಭಕ್ತಾಧಿಗಳು ಈ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶಾದ್ಯಂತ ಸಂಭ್ರಮ ಮುಗಿಲು ಮುಟ್ಟಿದೆ.
ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಗಳಾಗುವಂತೆ ಶ್ರೀರಾಮ ಭಕ್ತರು ಆಮಂತ್ರಣ ಪತ್ರಿಕೆ ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಈಗಾಗಲೇ ಮನೆ ಮನೆಗೆ ಹಂಚಿದ್ದಾರೆ ಈ ವಸ್ತುಗಳ ಪೈಕಿ, ಅಯೋಧ್ಯೆಯಿಂದ ಪೂಜಿಸಲ್ಪಟ್ಟ ಹಳದಿ ಅಕ್ಕಿಯನ್ನು (ಅಕ್ಷತೆ) ಸಹ ಜನರಿಗೆ ನೀಡಲಾಗಿದೆ.
ರಾಮಮಂದಿರ ಉದ್ಘಾಟನೆಯ ದಿನವನ್ನು ವಿಶೇಷವಾಗಿಸಲು, ರಾಮಭಕ್ತರು ಮನೆ ಮನೆಗೆ ತೆರಳಿ, ಮಂತ್ರಾಕ್ಷತೆಯನ್ನು ಹಂಚಿದ್ದಾರೆ. ಆದರೆ ಆ ಮಂತ್ರಾಕ್ಷತೆಯನ್ನು ಏನು ಮಾಡಬೇಕು, ಯಾವ ರೀತಿ ಉಪಯೋಗಿಸಬೇಕು ಎಂಬ ಬಗ್ಗೆ ಹಲವರಿಗೆ ತಿಳಿದಿಲ್ಲ.
ಹಿಂದೂ ಧರ್ಮದಲ್ಲಿ ಅಕ್ಷತೆಗೆ ಮಹತ್ವದ ಸ್ಥಾನವಿದೆ. ಯಾವುದೇ ಪೂಜೆ ಅಥವಾ ಆಚರಣೆಗಳು ಅಕ್ಷತೆಯಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಅನ್ನವು ದೇವರಿಗೆ ಸಮ ಎಂದು ಹೇಳಲಾಗುತ್ತದೆ. ಹೀಗಾಗಿ ರಾಮಮಂದಿರದಿಂದ ತಂದ ಅಕ್ಷತೆಗೂ ಬಹಳಷ್ಟು ಪ್ರಾಮುಖ್ಯತೆ ಹಾಗೂ ಪಾವಿತ್ರ್ಯತೆಯಿದೆ.
ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನಿಸಿದ ಆಮಂತ್ರಣ ಪತ್ರಿಕೆಯಲ್ಲಿನ ಪವಿತ್ರ ಅಕ್ಷತೆಯನ್ನು ಹಲವು ರೀತಿಯಲ್ಲಿ ಬಳಸಬಹುದು. ಇದರಿಂದ ಮನೆಯಲ್ಲಿ ಅನ್ನಪೂರ್ಣೆ, ಕುಟುಂಬದಲ್ಲಿ ಸಾಮರಸ್ಯ, ಸಮೃದ್ಧಿ ತುಂಬಿರುತ್ತದೆ ಅನ್ನೋದು ನಂಬಿಕೆ.
ಅಕ್ಷತೆ ಕಾಳುಗಳನ್ನು ಮನೆಯ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬಹುದು. ಮನೆಯಲ್ಲಿರುವ ಅಕ್ಕಿ ಡಬ್ಬದಲ್ಲಿ ಈ ಅಕ್ಷತೆಯನ್ನಿಟ್ಟರೆ ಅಕ್ಕಿ ಪಾತ್ರೆಯು ಯಾವಾಗಲೂ ಧಾನ್ಯಗಳಿಂದ ತುಂಬಿಕೊಂಡಿರುತ್ತದೆ. ಈ ಪಾತ್ರೆ ಅಕ್ಷಯ ಪಾತ್ರೆಯಂತೆ ಎಂದಿಗೂ ಖಾಲಿಯಾಗುವುದಿಲ್ಲ.
ಅಕ್ಷತೆಯನ್ನು ಬಳಸಿ, ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನ ಮನೆಯಲ್ಲಿ ಪಾಯಸವನ್ನು ತಯಾರಿಸಬಹುದು. ಆ ಪಾಯಸದಲ್ಲಿ ಈ ಅಕ್ಷತೆಯನ್ನು ಬೆರೆಸಬೇಕು. ಬಳಿಕ ಈ ಪ್ರಸಾದವನ್ನು ಕುಟುಂಬದೊಂದಿಗೆ ಸ್ವೀಕರಿಸಿ. ನಂತರ ಈ ಪಾಯಸವನ್ನು ಎಲ್ಲರಿಗೂ ವಿತರಿಸಿದರೆ ಶ್ರೀರಾಮನ ಅನುಗ್ರಹ ದೊರೆಯುತ್ತದೆ.
ನವ ವಧು ತನ್ನ ಮೊದಲ ಅಡುಗೆಯಲ್ಲಿ ಸಹ ಈ ಅಕ್ಕಿಯನ್ನು ಬಳಸಬಹುದು. ಈ ಮೂಲಕ ತಾಯಿ ಅನ್ನಪೂರ್ಣ ಆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಮನೆಯಲ್ಲಿ ಮಗಳ ಮದುವೆ ಇದ್ದರೆ ಈ ಅಕ್ಕಿಯನ್ನು ಉಡುಗೊರೆಯಾಗಿ ನೀಡಬಹುದು