ಅಮೆರಿಕಕ್ಕೆ ಹಾರ್ಬೇಕಂದ್ರೆ ಇಲ್ಲಿ ಪುಟ್ಟ ವಿಮಾನ ಇಟ್ಟು ಪ್ರಾರ್ಥಿಸಬೇಕು!
ಭಾರತದಲ್ಲಿ ಹಲವಾರು ಧರ್ಮಗಳೂ, ದೇವರೂ ಇದ್ದಾರೆ. ಆ ದೇವರ ಸ್ವರೂಪ ಹಲವು. ಕೇವಲ ಹಿಂದೂ ಧರ್ಮವೊಂದರಲ್ಲೇ 33 ಕೋಟಿ ದೇವಾನುದೇವತೆಗಳಿದ್ದಾರೆ ಎಂದು ನಂಬುತ್ತೇವೆ. ನಾವು ಹಸುವಿನಿಂದ ಹಿಡಿದು ಹಾವಿನವರೆಗೂ, ಪ್ರಕೃತಿಯಿಂದ ಹಿಡಿದು ಕೆಲ ಮನುಷ್ಯರವರೆಗೂ ಪೂಜಿಸುತ್ತೇವೆ. ಇವೆಲ್ಲವೂ ನಮ್ಮ ಜೀವನಕ್ರಮದ ಭಾಗವೇ ಆಗಿರುವುದರಿಂದ ವಿಶೇಷವೆನಿಸುವುದಿಲ್ಲ. ಆದರೆ, ಇಷ್ಟೊಂದರ ಮಧ್ಯೆ ವಿಶೇಷವೂ, ವಿಚಿತ್ರವೂ ಎನಿಸುವಂಥದ್ದನ್ನೂ ಪೂಜಿಸುವ ಕೆಲ ದೇವಾಲಯಗಳಿವೆ. ಆ ದೇವಾಲಯಗಳು ಯಾವುವು, ಎಲ್ಲಿವೆ, ಅಲ್ಲಿ ಏನು ಪೂಜಿಸಲ್ಪಡುತ್ತವೆ, ಏನೇನು ನಂಬಿಕೆಗಳಿವೆ ನೀವೇ ನೋಡಿ...
ಏರೋಪ್ಲೇನ್ ಗುರುದ್ವಾರ
ಹವಾಯ್ ಜಹಾಜ್ ಗುರುದ್ವಾರ ಎಂದೇ ಹೆಸರಾಗಿರುವ ಈ ಏರೋಪ್ಲೇನ್ ಗುರುದ್ವಾರ ಪಂಜಾಬ್‌ನ ಜಲಂಧರ್‌ನಲ್ಲಿದೆ. ವಿದೇಶಕ್ಕೆ ಹೋಗಲು ಬಯಸುವವರು ಇಲ್ಲಿ ಬಂದು ಪುಟಾಣಿ ಏರೋಪ್ಲೇನನ್ನು ಹುತಾತ್ಮ ಬಾಬಾ ನಿಹಾಲ್ ಸಿಂಗ್ ಗುರುದ್ವಾರದ ಬಳಿ ಇಟ್ಟು ಬೇಡಿಕೊಳ್ಳುತ್ತಾರೆ. ಆಗ ಕೋರಿಕೆ ಈಡೇರುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಅಮೆರಿಕಕ್ಕೆ ಹೋಗಬಯಸುವವರಿಗೆ ಇಲ್ಲಿ ಆಶೀರ್ವಾದ ಪಕ್ಕಾ ಎಂಬ ನಂಬಿಕೆಯಿದೆ.
ಓಂ ಬಣ್ಣ ದೇವಾಲಯ
ರಾಜಸ್ಥಾನದ ಜೋದ್‌ಪುರದಲ್ಲಿರುವ ಓಂ ಬಣ್ಣ ದೇವಾಲಯದಲ್ಲಿ ಪ್ರವಾಸಿಗರು ಬಂದು 350 ಸಿಸಿಯ ಬುಲೆಟ್ ಬಾಬಾನಿಗೆ ನಮಸ್ಕಾರ ಮಾಡಿ ತಮ್ಮ ಜರ್ನಿ ಸುರಕ್ಷಿತವಾಗಿರಲೆಂದು ಬೇಡಿಕೊಳ್ಳುತ್ತಾರೆ. 1998ರಲ್ಲಿ ಇಲ್ಲೊಂದು ಅಪಘಾತದಲ್ಲಿ ಪಕ್ಕದ ಊರಿನ ಮಗು ತೀರಿ ಹೋಯಿತು. ನಂತರ ಅಪಘಾತವಾದ ಬೈಕನ್ನು ಪೋಲೀಸ್ ಠಾಣೆಗೆ ತೆಗೆದುಕೊಂಡು ಹೋಗಿಡಲಾಯಿತು. ಆದರೆ, ಮರುಬೆಳಗ್ಗೆ ಬೈಕ್ ಅಪಘಾತದ ಸ್ಥಳಕ್ಕೆ ಬಂದು ನಿಂತಿತು. ಇದು ಹಲವು ಬಾರಿ ಪುನರಾವರ್ತನೆಯಾದ ಮೇಲೆ ಬೈಕಿಗೆ ಇಲ್ಲಿಯೇ ದೇವಾಲಯ ಕಟ್ಟಿಸಿ ಪ್ರತಿಷ್ಠಾಪಿಸಲಾಯಿತು.
ನಾಯಿ ದೇವಾಲಯ
ನಾಯಿ ನಾರಾಯಣ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನಾಯಿಯನ್ನು ದೇವಸ್ಥಾನದೊಳಗೆ ಸೇರಿಸುವವರು ಕಡಿಮೆ. ಆದರೆ, ಚನ್ನಪಟ್ಟಣದಲ್ಲಿ ನಾಯಿಯ ನಂಬಿಕಸ್ಥತನ ಗುಣಕ್ಕೆ ಧನ್ಯವಾದ ಅರ್ಪಿಸಲು ನಾಯಿಯ ಮೂರ್ತಿಯನ್ನೇ ಮಾಡಿ ದೇವಾಲಯದೊಳಗಿರಿಸಿ ಪೂಜಿಸುತ್ತಿದ್ದಾರೆ.
ಸೋನಿಯಾ ಗಾಂಧಿ ದೇವಾಲಯ
ಇದು ವಿಚಿತ್ರವಾದರೂ ಸತ್ಯ. ಆಂಧ್ರ ಪ್ರದೇಶದಲ್ಲಿ ಸೋನಿಯಾ ಗಾಂಧಿಗೂ ಒಂದು ದೇವಾಲಯವಿದೆ. ತೆಲಂಗಾಣವನ್ನು ಆಂಧ್ರದಿಂದ ಬೇರ್ಪಡಿಸಿ ಬೇಡಿಕೆ ಈಡೇರಿಸಿದ್ದಕ್ಕಾಗಿ ಕಾಂಗ್ರೆಸ್ ಬೆಂಬಲಿಗರೊಬ್ಬರು ಸೋನಿಯಾಗೆ ದೇವಾಲಯ ಕಟ್ಟುವ ಮೂಲಕ ಧನ್ಯವಾದ ಹೇಳಿದ್ದಾರೆ.
ಭಾರತ್ ಮಾತಾ ದೇವಾಲಯ
ವಾರಣಾಸಿಯಲ್ಲಿ ಭಾರತ ಮಾತೆಗಾಗಿಯೇ ಒಂದು ದೇವಾಲಯವಿದೆ. 1936ರಲ್ಲಿ ಬಾಬು ಶಿವ ಪ್ರಸಾದ್ ಗುಪ್ತ ಇದನ್ನು ನಿರ್ಮಿಸಿದರೆ, ಮಹಾತ್ಮಾ ಗಾಂಧಿ ಉದ್ಘಾಟಿಸಿದರು. ಇಲ್ಲಿ ಮಾರ್ಬಲ್‌ನಿಂದ ಭಾರತ ಮಾತೆಯ ಮ್ಯಾಪನ್ನು ಮಾಡಿ ಪೂಜಿಸಲಾಗುತ್ತದೆ.
ಸಚಿನ್ ತೆಡೂಲ್ಕರ್ ದೇವಾಲಯ
ಸಚಿನನ್ನು ಕ್ರಿಕೆಟ್ ದೇವರು ಎಂದು ಹೇಳುವುದು ಸರಿಯಷ್ಟೇ. ಆದರೆ, ಬಿಹಾರದ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಸಚಿನ್‌ಗೆ ದೇವಾಲಯವನ್ನೂ ಕಟ್ಟಿಸಿ ಪೂಜಿಸುತ್ತಿದ್ದಾರೆ.
ದುರ್ಯೋಧನ ದೇವಾಲಯ
ಮಹಾಭಾರತದ ಮಹಾವಿಲನ್ ಧುರ್ಯೋಧನನಿಗೂ ಕೇರಳದಲ್ಲಿ ದೇವಾಲಯವಿದೆ! ಇಲ್ಲಿ ದುರ್ಯೋಧನನು 100 ಎಕರೆ ಜಾಗವನ್ನು ಸ್ಥಳೀಯ ರಾಜರಿಗೆ ಉಡುಗೊರೆ ನೀಡಿದ್ದನಂತೆ. ಈಗಲೂ ಇಲ್ಲಿ ದುರ್ಯೋಧನನ ಹೆಸರಲ್ಲೇ ತೆರಿಗೆ ಕಟ್ಟಲಾಗುತ್ತದೆ.
ಕರ್ನಿ ಮಾತಾ ದೇವಾಲಯ
ರಾಜಸ್ಥಾನದ ದೇಶ್ನೋಕೆಯಲ್ಲಿ ಕರ್ನಿ ಮಾತಾ ದೇವಾಲಯವಿದೆ. ಇಲ್ಲಿ ಸಾವಿರಾರು ಇಲಿಗಳು ವಾಸಿಸುತ್ತಿವೆ. ಅವನ್ನು ಇಲಿ ಎಂದು ಕರೆದರೆ ತಪ್ಪಾಗುತ್ತದೆ. ಇಲ್ಲಿ ಬರುವವರು ಇಲಿಗಳನ್ನು ಕಾಬಾಸ್ ಎಂದು ಕರೆದು ಪೂಜ್ಯ ಭಾವದಿಂದ ನೋಡಬೇಕು. ಕಾಲಿಟ್ಟಲೆಲ್ಲ ಇಲಿಯೇ ನಿಮ್ಮನ್ನು ಹೈಜಂಪ್, ಲಾಂಗ್‌ಜಂಪ್ ಮಾಡಿಸುತ್ತವೆ.