ವಸಂತ ಪಂಚಮಿ ಶುಭ ದಿನ ರಾಮ ಲಲ್ಲಾ ಶೃಂಗಾರ ದರ್ಶನ, ಪುನೀತರಾದ ಭಕ್ತ ಗಣ!
ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡು ತಿಂಗಳು ಸಮೀಪಿಸುತ್ತಿದೆ. ಇಂದು ವಂಸತ ಪಂಚಮಿ ಶುಭದಿನ. ರಾಮ ಮಂದಿರದಲ್ಲಿನ ರಾಮ ಲಲ್ಲಾಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದೆ. ಅಲೌಕಿಕ ಶೃಂಗಾರ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ರಾಮಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿದೆ. ಇದೀಗ ಪ್ರತಿ ದಿನ ಲಕ್ಷಾಂತರ ಭಕ್ತರು ಶ್ರೀ ರಾಮಲಲ್ಲಾ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ಇಂದು ವಸಂತ ಪಂಚಮಿ. ಮಾಘ ಮಾಸದ 5ನೇ ದಿನದಂದು ಆಗಮಿಸುವ ವಿಶೇಷ ವಸಂತ ಪಂಚಮಿ ಅಥವಾ ಬಸಂತ ಪಂಚಮಿಯಂದು ಶ್ರೀ ರಾಮಲಲ್ಲಾಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಗಿದೆ.
ಹಳದಿ ಬಣ್ಣದ ರೇಶ್ಮೆ ವಸ್ತ್ರದ ಮೂಲಕ ಶ್ರೀ ರಾಮಲಲ್ಲಾ ವಸಂತ ಪಂಚಮಿ ದಿನ ಕಂಗೊಳಿಸುತ್ತಿದ್ದಾನೆ. ಜೊತೆಗೆ ರಾಮಲಲ್ಲಾಗೆ ತೊಡಿಸಿರುವ ಆಭರಣಗಳು ಭಕ್ತಿ ಪರವಶತೆಯನ್ನು ಹೆಚ್ಚಿಸಿದೆ.
ರೇಶ್ಮೆ ವಸ್ತ್ರ, ಆಭರಣ ಜೊತೆಗೆ ಹೂವಿನ ಅಲಂಕಾರದೊಂದಿಗೆ ರಾಮ ಲಲ್ಲಾನ ದೈವೀಕ ಕಳೆ ಭಕ್ತರನ್ನು ಪಾವನರಾಗಿ ಮಾಡುತ್ತಿದೆ. ವಸಂತ ಪಂಚಮಿ ದಿನ ರಾಮಲಲ್ಲಾ ದರ್ಶನ ಪಡೆದ ಭಕ್ತರು ಅತೀವ ಸಂತಸಗೊಂಡಿದ್ದಾರೆ.
ವಸಂತ ಪಂಚಮಿಯ ಇದೇ ದಿನ(ಫೆ.14) ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯಲ್ಲಿ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಮಂದಿರವನ್ನು ಉದ್ಘಾಟಿಸಿದ್ದಾರೆ.
ರಾಮ ಮಂದಿರಕ್ಕೆ ಪ್ರತಿ ದಿನ ಲಕ್ಷಾಂತರ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ ಲಕ್ಷಾಂತರ ರೂಪಾಯಿ ದೇಣಿಗೆ ಹಾಗೂ ಕೋಟ್ಯಾಂತರ ರೂಪಾಯಿ ಅಮೂಲ್ಯ ಆಭರಣಗಳನ್ನೂ ದೇಣಿಗೆಯಾಗಿ ನೀಡುತ್ತಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಭಕ್ತರಾದ ಅಖಿಲ ಭಾರತ ಮಾಂಗ್ ಸಮಾಜ 1.75 ಕೇಜಿ ತೂಕದ 108 ಕಡ್ಡಿಗಳನ್ನು ಹೊಂದಿರುವ ಬೆಳ್ಳಿ ಪೊರಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಜನವರಿ 22ಕ್ಕೆ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆಯಾಗಿತ್ತು. ಜನವರಿ 23ರಿಂದ ರಾಮ ಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗಿತ್ತು. ಮೊದಲ ವಾರದಲ್ಲೇ 19 ಲಕ್ಷ ಭಕ್ತರು ರಾಮ ಮಂದಿರ ದರ್ಶನ ಪಡೆದಿದ್ದರು.