ಚಿಕ್ಕಮಗಳೂರು: ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ವರುಣ ಅಡ್ಡಿ, ಮಣ್ಣು ಜಾರಿದ್ರೂ ಬೆಟ್ಟವನ್ನೇರಿದ ಭಕ್ತರು!
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.31): 15 ಸಾವಿರಕ್ಕೂ ಅಧಿಕ ವಾಹನಗಳು. 60 ಸಾವಿರಕ್ಕೂ ಹೆಚ್ಚು ಭಕ್ತರು. ಕಾಲಲ್ಲಿ ಚಪ್ಪಲಿ ಇಲ್ಲ. ನಡೆಯೋಕೆ ದಾರಿ ಇಲ್ಲ. ಆದ್ರು ಬೆಟ್ಟದ ತಾಯಿಯನ್ನ ನೋಡೋ ತವಕ. ಇದು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ದೇವಿರಮ್ಮನ ದರ್ಶನ ಪಡೆಯೋಕೆ ಬಂದ ಭಕ್ತಸಾಗರ.
ಸುಮಾರು 4000 ಅಡಿಗಳಷ್ಟು ಎತ್ತರದ ಗುಡ್ಡದಲ್ಲಿ ನೆಲೆಸಿರೋ ಆ ದೇವಿಯನ್ನ ನೋಡಲು ಜನಸಾಗರವೇ ಹರಿದು ಬಂದಿತ್ತು. ಭಕ್ತರು ಬರಿಗಾಲಲ್ಲಿ ಕಾಡು-ಮೇಡು ಅಲೆದು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತ ಗಣ ಮಳೆಯಿಂದ ಬೆಟ್ಟ ಜಾರುತ್ತಿದ್ದರೂ ಹರಸಾಹಸವನ್ನೇ ಮಾಡಿ ದೇವಿ ದರ್ಶನ ಪಡೆದರು.
ವರ್ಷಕ್ಕೊಮ್ಮೆ ದರ್ಶನ ಕೊಡೋ ಬೆಟ್ಟದ ತಾಯಿಯನ್ನ ನೋಡೋಕೆ ಈ ವರ್ಷ ನಿರೀಕ್ಷೆಗೂ ಭಕ್ತವೃಂದ ಆಗಮಿಸಿತ್ತು.ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯ ದೇವಿರಮ್ಮ ದೇವಿ ದರ್ಶನ ಪಡೆಯುಲು ರಾಜ್ಯ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದರು.
ಬೆಟ್ಟಗಳ ಸಾಲಲ್ಲಿ ಇರುವೆಯಂತೆ ತಳುಕುತ್ತಾ-ಬಳುಕುತ್ತಾ-ತೆವಳುತ್ತಾ ಅಕ್ಕಪಕ್ಕದವರ ನೆರವಿನ ಜೊತೆಗೆ ಮಣ್ಣು ಜಾರುತ್ತಿದ್ದರು ಹಗ್ಗದ ಸಹಾಯದಿಂದ ಬೆಟ್ಟವನ್ನೇರಿದರು.60 ಸಾವಿರಕ್ಕೂ ಅಧಿಕ ಮಂದಿ ಮಳೆಯಿಂದ ಬೆಟ್ಟ ಜಾರುತ್ತಿದ್ದರೂ ದೇವಿ ದರ್ಶನ ಪಡೆದರು.
ಪ್ರತಿ ವರ್ಷವೂ ದೀಪಾವಳಿ ದಿನಂದು ಮಾತ್ರ ಬೆಟ್ಟದ ದೇವಿ ದರ್ಶನ ಭಕ್ತರಿಗೆ ಅವಕಾಶವಿತ್ತು,ಆದ್ರೆ ಈ ಭಾರೀ ದೀಪಾವಳಿ ಮುನ್ನ ದಿನವಾದ ಬುಧವಾರ ಮಧ್ನಾಹದಿಂದಲೇ ಅವಕಾಶವನ್ನು ಮಾಡಕೊಡಲಾಗಿತ್ತು. ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿರೋ ಈ ದೇವಿಯನ್ನ ನೋಡಲು ಭಕ್ತಗಣ ಚಾತಕ ಪಕ್ಷಿಯಂತೆ ಕಾಯ್ತಿರುತ್ತೆ.ಈ ದೇವಾಲಯಕ್ಕೆ ಪ್ರತಿವರ್ಷ ಸಾವಿರಾರು ಭಕ್ತರು ಬರ್ತಾರೆ.
ಸುಮಾರು 6 ಕಿ.ಮೀ. ದೂರವನ್ನ ನಡೆದೇ ಕ್ರಮಿಸಬೇಕು. ಬೆಟ್ಟ-ಗುಡ್ಡಗಳ ಸಾಲಲ್ಲಿ, ಮಂಜಿನ ಮಧ್ಯೆ ಬರಿಗಾಲಲ್ಲಿ ಕಲ್ಲು ಮುಳ್ಳಿನ ದುರ್ಗಮ ಹಾದಿಯಲ್ಲಿ ಹೆಜ್ಜೆ ಹಾಕಬೇಕು. ಎಷ್ಟೆ ಕಷ್ಟವಾದರೂ ಕೇರ್ ಮಾಡದ ಭಕ್ತರು ತಡರಾತ್ರಿಯಿಂದಲೇ ನಡೆಯಲು ಶುರು ಮಾಡುತ್ತಾರೆ.
ಕೊರೆಯುವ ಚಳಿ, ಮೈಮೇಲೆ ಬೀಳೋ ಇಬ್ಬನಿ, ಜಾರೋ ಗುಡ್ಡ, ಕಾಲಿಗೆ ಚುಚ್ಚುವ ಕಲ್ಲುಗಳು ಯಾವುದನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ದೇವಿಯ ದರ್ಶನ ಮಾಡಿ ಸಂತಸಪಟ್ರು. ಇನ್ನೂ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬರಿಗಾಲಲ್ಲಿ ಬೆಟ್ಟವೇರಿ, ದೇವಿ ದರ್ಶನ ಮಾಡೋದನ್ನ ಮಾಜಿ ಸಚಿವ ಸಿ.ಟಿ ರವಿ ಮಿಸ್ ಮಾಡಲಿಲ್ಲ.
ಇನ್ನು ಮಳೆ ಬಂದ ಪರಿಣಾಮ ಬೆಟ್ಟದಲ್ಲಿ ಮಣ್ಣು ಜಾರಿದ ಪರಿಣಾಮ ಕೆಲ ಭಕ್ತರಿಗೆ ಸಣ್ಣಪುಟ್ಟ ಗಾಯವಾದ್ರೆ ಇನ್ನು ಕೆಲ ಭಕ್ತರು ಪ್ರಜ್ಞೆ ತಪ್ಪಿದರು. ಬೆಟ್ಟದಲ್ಲಿ ಪ್ರಜ್ಞೆ ತಪ್ಪಿ ಬಿದ್ದ 25 ವರ್ಷದ ಯುವತಿ ಸಿಂಧು, ಜಯಮ್ಮ ಲೋ ಬಿಪಿಯಿಂದ ಗುಡ್ಡದಲ್ಲೇ ಸುಸ್ತಾದರು. ಬೆಂಗಳೂರು ಮೂಲದ 30 ವರ್ಷದ ದಿವ್ಯಾ ಎಂಬ ಯುವತಿಗೆ ಕಾಲು ಮುರಿತವಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಎಲ್ಲರನ್ನೂ ಗುಡ್ಡದಿಂದ ತಂದು ಆಸ್ಪತ್ರೆಗೆ ಸೇರಿಸಿದರು.
ದೀಪಾವಳಿ ಅಮ್ಯಾವಾಸೆಯ ಹಿಂದಿನ ದಿನ ಬೆಟ್ಟದಲ್ಲಿರೋ ಶಿವನ ಅಸ್ತ್ರಗಳುಳ್ಳ ದುರ್ಗೆಗೆ ವಿಶೇಷ ಪೂಜೆ ನಡೆಯಲಿದೆ. ಆ ಪೂಜೆಯನ್ನ ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬಿಂಡಿಗ ಗ್ರಾಮಕ್ಕೆ ಬಂದೇ ಬರ್ತಾರೆ. ಇಲ್ಲಿ ಹರಕೆ ಕಟ್ಟಿದ್ರೆ ಆ ಹರಕೆ ಈಡೇರೋದ್ರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಹರಕೆ ಕಟ್ಟಿದ-ಕಟ್ಟದ ಭಕ್ತರು ಪ್ರತಿವರ್ಷ ಇಲ್ಲಿಗೆ ಬಂದು ಬೆಟ್ಟವನ್ನು ಹತ್ತಿ ದೇವಿ ದರ್ಶನ ಪಡೆಯುತ್ತಾರೆ. ಇಲ್ಲಿ ಹರಕೆ ಕಟ್ಟಿಕೊಂಡೋರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದ್ರು ಅವರ ಶಕ್ತಿಗನುಸಾರವಾಗಿ ಸೌದೆಯನ್ನ ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನ ದೇವಿಗೆ ಸಮರ್ಪಿಸ್ತಾರೆ.
ಸಮುದ್ರಮಟ್ಟದಿಂದ 4000 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯೋದು. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದೋರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡೋದು.
ಇಂದು ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನೇ ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನ ಆಚರಿಸೋದು.
ಈ ಬೆಟ್ಟದ ತಾಯಿಯನ್ನ ನೋಡೋಕೆ ಪ್ರತಿವರ್ಷ ರಾಜ್ಯ-ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಬರ್ತಾರೆ. ಇಲ್ಲಿನ ಆಹ್ಲಾದಕರ ವಾತಾವರಣವನ್ನ ಸವಿಯೋಕೆ ಬರೋರು ಉಂಟು, ಕಷ್ಟವನ್ನ ಪರಿಹರಿಸೆ ತಾಯಿ ಅಂತ ಬೇಡೋರು ಉಂಟು, ಬೆಟ್ಟ ಹತ್ತಿ ಎಂಜಾಯ್ ಮಾಡೋರು ಇದ್ದಾರೆ.