ಕೇರಳ: ಋತುಮತಿಯಾದ ಪಾರ್ವತಿ ದೇವಿಯನ್ನೇ ದೇವಾಲಯದಿಂದ ಹೊರಗಿಡ್ತಾರೆ ಇಲ್ಲಿ!
ಕೇರಳದ ದೇಗುಲವೊಂದರಲ್ಲಿ ಪಾರ್ವತಿ ದೇವಿಗೆ ವರ್ಷಕ್ಕೆ ಒಂದು ಬಾರಿ ಮೂರು ದಿನಗಳ ಕಾಲ ಋತುಚಕ್ರ ಆಗುತ್ತೆ. ಈ ಸಮಯದಲ್ಲಿ ದೇವಿಯನ್ನು ದೇಗುಲದಿಂದಲೇ ಹೊರಕ್ಕೆ ಕಳುಹಿಸಲಾಗುತ್ತೆ ಅನ್ನೋ ವಿಷ್ಯ ಗೊತ್ತಾ ನಿಮಗೆ?
ಋತುಚಕ್ರ (Periods) ಆಗೋದು ಭೂಮಿ ಮೇಲಿನ ಸಾಮಾನ್ಯ ಮಹಿಳೆಯರಿಗೆ ಮಾತ್ರ ಅಂತ ನೀವು ಅಂದುಕೊಂಡ್ರೆ ಅದು ತಪ್ಪು, ದೇವಿಗೂ ಸಹ ಋತುಚಕ್ರ ಆಗುತ್ತೆ. ಅದನ್ನ ನಾವು ಗುವಾಹಟಿಯ ಕಾಮಾಕ್ಯ ದೇವಿ (Kamakya Devi) ಮತ್ತು ಕೇರಳದ ಚೆಂಗನ್ನೂರ್ ಮಹಾದೇವ ದೇವಾಲಯದಲ್ಲಿರುವ ಪಾರ್ವತಿ ದೇವಿ ದೇವಾಲಯಗಳಲ್ಲಿ ಕಾಣಬಹುದು. ಈ ದೇಗುಲಗಳು ವರ್ಷದ ನಿರ್ದಿಷ್ಟ ಸಮಯಗಳಲ್ಲಿ ಮೂರು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಆ ಸಮಯದಲ್ಲಿ ದೇವಿಗೆ ಮುಟ್ಟಾಗುತ್ತದೆ ಎನ್ನುವ ನಂಬಿಕೆ ಇದೆ. ಆ ಸಮಯದಲ್ಲಿ ದೇವಿಯು ಕೆಂಫು ಬಣ್ಣಕ್ಕೆ ತಿರುಗಿ, ಅಲ್ಲಿಟ್ಟ ವಸ್ತ್ರಗಳು ಸಹ ಕೆಂಪಾಗುತ್ತವೆ ಎನ್ನುತ್ತಾರೆ ಜನ. ಈ ದೇಗುಲಗಳ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ನಾವು ಭಾರತೀಯ ಮಹಿಳೆಯರು ಮುಟ್ಟಿನ (Periods) ಸಮಯದಲ್ಲಿ ಕೆಲವೊಂದು ಕೆಲಸ ಮಾಡಬಾರದು, ಮನೆಯಿಂದ ಹೊರಗೆ ಹೋಗಬಾರದು, ಯಾರಿಂದಲೂ ಮುಟ್ಟಿಸಿಕೊಳ್ಳಬಾರದು ಅನ್ನೋದನ್ನು ಕೇಳಿಯೇ ಬೆಳೆದಿರುತ್ತೇವೆ. ಮೂರು ದಿನಗಳ ಕಾಲ ಏಕಾಂತದಲ್ಲಿರಬೇಕು, ಇತರರನ್ನು ಮುಟ್ಟಬಾರದು, ಉಪ್ಪಿನಕಾಯಿ (Pickle) ಮುಟ್ಟಬಾರದು, ಪ್ರತ್ಯೇಕ ಬಟ್ಟೆಗಳು, ಪಾತ್ರೆಗಳು, ಕೋಣೆಗಳು, ಇರೋದನ್ನು ಇಂದಿಗೂ ಹಲವೆಡೆ ಕಾಣಬಹುದು. ಇದನ್ನ ಮೂಢನಂಬಿಕೆ ಎಂದು ಜನ ಹೇಳಿದ್ರೂ, ಅದನ್ನು ಪಾಲಿಸಿಕೊಂಡು ಬರೋರು ಇನ್ನೂ ಇದ್ದಾರೆ.
ಮಹಿಳೆಯನ್ನೆನೋ ಮುಟ್ಟಿನ ಸಮಯದಲ್ಲಿ ದೂರ ಮಾಡಲಾಗುತ್ತೆ, ಆದರೆ ದೇವರು ಋತುಮತಿಯಾದ್ರೆ ಆಕೆಯನ್ನು ದೂರ ಮಾಡ್ತಾರ ಎಂದು ನೀವು ಕೇಳಿದ್ರೆ, ಖಂಡಿತಾ ಮಾಡ್ತಾರೆ. ಹೌದು ನೀವು ಕೇಳಿದ್ದು ಸರಿಯಾಗಿಯೇ ಇದೆ. ಕೇರಳದ ಈ ದೇಗುಲದಲ್ಲಿ ಋತುಮತಿಯಾದ ದೇವಿಯನ್ನು ದೇಗುಲದಿಂದಲೇ ಹೊರಗಿಡ್ತಾರೆ. ಕೇರಳದ ಚೆಂಗನ್ನೂರ್ ಮಹಾದೇವ ದೇವಸ್ಥಾನದಲ್ಲಿ, (Chengannur Mahadeva Temple Kerala) ಪಾರ್ವತಿ ದೇವಿಗೆ ವರ್ಷಕ್ಕೆ ಒಂದು ಬಾರಿ ಋತುಸ್ರಾವವಾಗುತ್ತೆ. ಅದು ಯಾವಾಗ ಆಗುತ್ತೆ ಅನ್ನೋದು ತಿಳಿಯೋದಿಲ್ಲ. ಅದಕ್ಕಾಗಿ ಪ್ರತಿದಿನ ಬೆಳಗ್ಗೆ ಅವಳ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಆಗಿವೆಯೇ ಎಂದು ಗಮನಿಸೋದು ಇಲ್ಲಿನ ಮುಖ್ಯ ಅರ್ಚಕರ ಕರ್ತವ್ಯ.
ಪಾರ್ವತಿ ಮತ್ತು ಶಿವ ಈ ದೇವಾಲಯದ ಪ್ರಧಾನ ದೇವತೆ ಮತ್ತು ದೇವರು, ಆದರೆ ಮುಟ್ಟಿನ ಆ ಮೂರು ದಿನಗಳಲ್ಲಿ, ಅವಳನ್ನು ಗರ್ಭಗುಡಿಯಿಂದ ಹೊರ ಕರೆದೊಯ್ಯಲಾಗುತ್ತದೆ, ಅಂದ್ರೆ ಮನುಷ್ಯರಂತೆ ದೇವಿಯನ್ನೂ ಮುಟ್ಟಿನ ಸಮಯದಲ್ಲಿ ಹೊರಗೆ ಕೂರಿಸೋದು ಇಲ್ಲಿನ ಸಂಪ್ರದಾಯ. 'ರಕ್ತದ ಕಲೆ' ಕಂಡು ಬಂದಾಗ, ದೇವಿ ನಿಜವಾಗಿಯೂ ಋತುಸ್ರಾವವಾಗಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ಇಲ್ಲಿನ ಸರ್ವೋಚ್ಚ ಅರ್ಚಕರ ಪತ್ನಿಯನ್ನು ಕರೆಯಲಾಗುತ್ತದೆ. ಋತುಸ್ರಾವ ಆಗಿದ್ದರೆ, ಪಾರ್ವತಿ ವಿಗ್ರಹವನ್ನು ಗರ್ಭಗುಡಿಯಿಂದ ಸಣ್ಣ ಕೋಣೆಗೆ ಸ್ಥಳಾಂತರಿಸಲಾಗುತ್ತದೆ ಮತ್ತು ದೇವಾಲಯವನ್ನು ನಾಲ್ಕು ದಿನಗಳವರೆಗೆ ಮುಚ್ಚಲಾಗುತ್ತದೆ.
ಈ ಮೂರು ದಿನಗಳವರೆಗೆ ದೇವಿಯನ್ನು ಒಬ್ಬಂಟಿಯಾಗಿ ಬಿಡಲಾಗುತ್ತದೆ, ಪುರೋಹಿತರಿಗೆ ಸಂಬಂಧಿಸಿದ ಒಂದೆರಡು ಮಹಿಳೆಯರು, ಪಾರ್ವತಿ ದೇವಿಯನ್ನು ಇರಿಸಲಾಗಿರುವ ಕೋಣೆ ಹೊರಗೆ ಮಲಗುತ್ತಾರೆ. ಮೂರನೇ ದಿನದ ಮಧ್ಯಾಹ್ನ, ಕೆಲವು ಮಹಿಳೆಯರು ದೇವಿ ಇರುವ ಕೋಣೆಗೆ ತೆರಳಿ, ದೇವಿಯ ಹಳೆ ಬಟ್ಟೆಗಳನ್ನು ಧರಿಸುತ್ತಾರೆ. ನಾಲ್ಕನೇ ದಿನ ಧಾರ್ಮಿಕ ವಿಧಾನದಂತೆ ನದಿಯಲ್ಲಿ ಸ್ನಾನ ಮಾಡಿಸಿ, ದೇವಿಯನ್ನು ಉತ್ಸವಕ್ಕೆ ಸಿದ್ಧಗೊಳಿಸ್ತಾರೆ. ಅಚ್ಚರಿಯ ವಿಷ್ಯ ಅಂದ್ರೆ ದೇವಿಯ ರಕ್ತಸಿಕ್ತ ಬಟ್ಟೆಯನ್ನು ಹರಾಜು ಮಾಡಲಾಗುತ್ತೆ, ಅದು ಹೆಚ್ಚಿನ ಬೆಲೆಗೆ ಮಾರಾಟ ಕೂಡ ಆಗುತ್ತೆ ಅನ್ನೋದು ನಿಜ.
ಗುವಾಹಟಿಯಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ಕಾಮಾಕ್ಯ ದೇವಿಗಾಗಿ ಅಂಬುಬಾಚಿ ಮೇಳವನ್ನು ನಡೆಸಲಾಗುತ್ತದೆ. ಇಲ್ಲಿಯೂ ಸಹ, ಆ ಮೂರು ದಿನಗಳ ಕಾಲ, ದೇವಾಲಯವನ್ನು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಹತ್ತಿರದ ಬ್ರಹ್ಮಪುತ್ರ ನದಿಯು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಪವಿತ್ರ ನೀರನ್ನು ನಾಲ್ಕನೇ ದಿನ ಭಕ್ತರಿಗೆ ವಿತರಿಸಲಾಗುತ್ತೆ.
ಕೇರಳದ ದೇವಾಲಯದ ಇತಿಹಾಸಕಾರ ವಕೀಲ ಉನ್ನಿಕೃಷ್ಣನ್ ನಾಯರ್ ಹೇಳುವಂತೆ "ಹುಡುಗಿ ಮೈನೆರೆದಿದ್ದನ್ನು ಆಚರಿಸೋದು ನಮ್ಮ ಸಂಪ್ರದಾಯ, ಅದನ್ನೇ ಇಲ್ಲಿ ದೇಗುಲದಲ್ಲಿ ಉತ್ಸವವಾಗಿ ಆಚರಿಸಲಾಗುತ್ತದೆ. ಇತರ ದೇವಾಲಯಗಳಂತೆ ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಈ ದೇವಾಲಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಮುಟ್ಟಿನ ಸಮಯದಲ್ಲಿ, ದೇವಿಯನ್ನೇ ದೇಗುಲದಿಂದ ಹೊರತಂದು ಬೇರೆ ಕೋಣೆಯಲ್ಲಿ ಇಡೋದು ಇಲ್ಲಿನ ಸಂಪ್ರದಾಯ.