Dharmasthala Laksha Deepotsava: ಪಾದಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿ
ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಷೇತ್ರ ಧರ್ಮಸ್ಥಳ. ಸದ್ಯ ಇಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತಾಧಿಗಳು ಗುಂಪು ಗುಂಪಾಗಿ ದೇವಾಲಯದತ್ತ ಆಗಮಿಸುತ್ತಿದ್ದಾರೆ. 5 ದಿನಗಳ ಲಕ್ಷದೀಪೋತ್ಸವ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಪಾದಯಾತ್ರೆ ನಡೆದಿದ್ದು, ಜನರು ಸಾಗರೋಪಾದಿಯಲ್ಲಿ ಸೇರಿದ್ದರು.
ವರದಿ: ಸುಚೇತಾ ಹೆಗ್ಡೆ, ಎಸ್.ಡಿ.ಎಂ, ಉಜಿರೆ
ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಸಂಭ್ರಮ ಆರಂಭಗೊಂಡಿದೆ. ಕ್ಷೇತ್ರವನ್ನು ವಿದ್ಯುದೀಪಗಳಿಂದ ಅಲಂಕರಿಸಲಾಗಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಬೃಹತ್ ಚಪ್ಪರ ಹಾಕಲಾಗಿದ್ದು, ಅಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ ನಡೆಯುತ್ತಿದೆ. ವಿವಿಧ ರೀತಿ ಜ್ಞಾನವರ್ಧಕ ಮಾಹಿತಿಗಳು, ಕ್ಷೇತ್ರದಿಂದ ನಡೆಯುವ ಸೇವಾ ಪ್ರಕಲ್ಪಗಳ, ಸರ್ಕಾರದ ಯೋಜನಗಳ ತಿಳಿವಳಿಕೆ ಸಂದರ್ಶಕರಿಗೆ ಸಿಗುತ್ತಿದೆ.
ಚಿತ್ರಗಳು: ಅರ್ಪಿತ್ ಇಚ್ಛೆ, ಶಶಿಧರ್ ಮತ್ತು ಗ್ಲೆನ್ ಮೋನಿಸ್, ಎಸ್.ಡಿ.ಎಂ ಉಜಿರೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಹತ್ತನೇ ವರ್ಷದ ಪಾದಯಾತ್ರೆಯಲ್ಲಿ ಇಪ್ಪತೈದು ಸಾವಿರಕ್ಕೂಅಧಿಕ ಭಕ್ತರು ಪಾಲ್ಗೊಂಡಿದ್ದರು. ಶ್ರೀ ಜನಾರ್ಧನ ಸ್ವಾಮಿದೇವಾಲಯದಿಂದ ಆರಂಭಗೊಂಡ ಪಾದಯಾತ್ರೆಗೆ ದೀಪ ಬೆಳಗಿಸುವುದರ ಮೂಲಕ ದೇವಾಲಯದ ಮುಖ್ಯಸ್ಥ ಶರತ್‌ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು.
ಕಳೆದೆರಡು ವರ್ಷ ಕೊರೋನಾ ಕಾರಣದಿಂದ ಸರಳವಾಗಿ ನಡೆದಿದ್ದ ಪಾದಯಾತ್ರೆ ಈ ಬಾರಿ ವಿಜೃಂಭಣೆಯಿಂದ ನಡೆದಿದ್ದು ಸಾಗರೋಪಾದಿಯಲ್ಲಿ ಜನರು ಮಂಜುನಾಥ ಸ್ವಾಮಿಯ ಸನ್ನಿಧಿಗೆ ಭಕ್ತಿ ಭಾವದೊಂದಿಗೆ ತೆರಳಿದರು. 50 ಯಕ್ಷಗಾನ ವೇಷಧಾರಿಗಳು, ವಿವಿಧ ಭಜನಾ ಮಂಡಳಿಗಳು ಪಾದಯಾತ್ರೆಯ ವಿಷೇಶ ಆಕರ್ಷಣೆಯಾಗಿತ್ತು. ಮಕ್ಕಳು, ವೃದ್ಧರು, ಗಣ್ಯವ್ಯಕ್ತಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು,ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಕ್ಷೇತ್ರದ ಹಲವಾರು ಭಕ್ತಾಧಿಗಳು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಪಾದ ಯಾತ್ರೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ್ ಪರಿಷತ್ ಶಾಸಕರುಗಳಾದ ಕೆ.ಪ್ರತಾಪ್ ಸಿಂಹ ನಾಯಕ್, ಕೆ.ಹರೀಶ್‌ಕುಮಾರ್, ಪಾದಯಾತ್ರೆ ಸಮಿತಿಯ ಸಂಚಾಲಕಾರದ ಪೂರನ್ ವರ್ಮ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕಡಾ. ಎಲ್. ಹೆಚ್.ಮಂಜುನಾಥ್, ಅಖಿಲ ಕರ್ನಾಟಕ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಮಸ್ವಾಮಿ ಹಾಗೂ ಮತ್ತಿತರ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಯಾತ್ರೆಗೆ ಅನೇಕ ಮುಂಜಾಗೃತಾ ಕ್ರಮವನ್ನು ವಹಿಸಿದ್ದು, ರಕ್ಷಣಾ ದೃಷ್ಟಿಯಿಂದ ಆರಕ್ಷಕ ಪಡೆ, ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ಅಲ್ಲಲ್ಲಿ ಬಾಯಾರಿಕೆಗೆ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.ಎಲ್ಲಾ ವ್ಯವಸ್ಥೆಗಳನ್ನು ಸ್ವಯಂ ಸೇವಕರ ತಂಡ ನಿಭಾಯಿಸಿತು.ಉಜಿರೆಯಿಂದ ಆರಂಭವಾದ ಪಾದಯಾತ್ರೆ ಮಂಜುನಾಥನ ಸನ್ನಿಧಿಯಲ್ಲಿ ಸಂಪೂರ್ಣಗೊಂಡಿತು.
ನಿನ್ನೆಯಿಂದ ಆರಂಭಗೊಂಡ ಲಕ್ಷ ದೀಪೋತ್ಸವ ನವೆಂಬರ್ 23ರ ತನಕ ನಡೆಯಲಿದೆ. ಜೊತೆಗೆ 90ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಇಂದು ಕೆರೆಕಟ್ಟೆ ಉತ್ಸವ, ನವೆಂಬರ್ 21ರ ಸೋಮವಾರದಂದು ಲಲಿತೋದ್ಯಾನ ಉತ್ಸವ ನಡೆಯಲಿದೆ. ನವೆಂಬರ್ 22ರಂದು ಕಂಚಿಮಾರುಕಟ್ಟೆ ಉತ್ಸವ, ನವೆಂಬರ್ 23ರಂದು ಗೌರಿ ಮಾರುಕಟ್ಟೆ ಉತ್ಸವ, ನವೆಂಬರ್ 24ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ಬೆಳಗ್ಗೆ ಗಂಟೆ 6.30ರಿಂದ 11 ಮಧ್ಯಾಹ್ನ11 ಗಂಟೆಗೆ ಮಹಾಪೂಜೆ , 12.30ರಿಂದ 2.30ರ ವರೆಗೆ, ಸಂಜೆ 5ರಿಂದ ರಾತ್ರಿ 8.30ರ ತನಿಕ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಬಹುದಾಗಿದೆ.