ನೋಡ ಬನ್ನಿ ಬೆಂಗಳೂರಿನ ವಿವಿಧ ಶಿವ ದೇವಾಲಯಗಳಲ್ಲಿ Mahashivratri 2023 ಸಂಭ್ರಮ
ಮಹಾಶಿವರಾತ್ರಿಯ ಈ ದಿನ ಭಾರತದಾದ್ಯಂತ ಎಲ್ಲ ಶಿವ ದೇವಾಲಯಗಳಲ್ಲಿ ಭಕ್ತರ ದಂಡು ಭಕ್ತಿಯ ಮಹಾಪೂರವನ್ನೇ ಹರಿಸುತ್ತಿದೆ. ಬೆಂಗಳೂರಿನ ಶಿವ ದೇವಾಲಯಗಳೆಲ್ಲವೂ ಭಕ್ತರಿಂದ ತುಂಬಿ ತುಳುಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬನ್ನಿ ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿಯ ದಿನದ ಸಂಭ್ರಮ ಹೇಗಿತ್ತು ನೋಡೋಣ..ಫೋಟೋ ಕ್ರೆಡಿಟ್: ಎ.ವೀರಮಣಿ, ಕನ್ನಡ ಪ್ರಭ

ಮಹಾಶಿವರಾತ್ರಿಯ ಈ ದಿನ ಭಾರತದಾದ್ಯಂತ ಎಲ್ಲ ಶಿವ ದೇವಾಲಯಗಳಲ್ಲಿ ಭಕ್ತರ ದಂಡು ಭಕ್ತಿಯ ಮಹಾಪೂರವನ್ನೇ ಹರಿಸುತ್ತಿದೆ. ಬೆಂಗಳೂರಿನ ಶಿವ ದೇವಾಲಯಗಳೆಲ್ಲವೂ ಭಕ್ತರಿಂದ ತುಂಬಿ ತುಳುಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಒಂದೊಂದು ದೇವಾಲಯದಲ್ಲಿ ಅಲ್ಲಿಯ ಪದ್ಧತಿಯಂತೆ ವಿವಿಧ ರೀತಿಯಲ್ಲಿ ಹಬ್ಬ ಆಚರಿಸಲಾಗುತ್ತಿದೆ. ಆಯಾ ದೇವಾಲಯಗಳು ತಮ್ಮದೇ ಆದ ವಿಶಿಷ್ಠ ಕಾರ್ಯಕ್ರಮಗಳನ್ನು ಈ ಜಾಗರಣೆ ರಾತ್ರಿಗಾಗಿ ಸಿದ್ಧ ಮಾಡಿಕೊಂಡಿವೆ. ಬನ್ನಿ ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿಯ ದಿನದ ಸಂಭ್ರಮ ಹೇಗಿತ್ತು ನೋಡೋಣ..
ಬಳೆ ಪೇಟೆಯ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಭಕ್ತರ ದಂಡೇ ನೆರೆದಿತ್ತು. ಮಹಿಳೆಯರ ಸಂಗೀತ ಭಜನಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ವಿಶ್ವೇಶ್ವರನ ಅಲಂಕಾರ ಭಕ್ತಿಯ ಧಾರೆ ಹರಿಸುವಂತಿತ್ತು.
ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರ, ಮಲ್ಲೇಶ್ವರಂನಲ್ಲಿ ಶಿವರಾತ್ರಿ ಸೊಗಸಾಗಿತ್ತು. ಇಲ್ಲಿನ ವಿಶೇಷವೆಂದರೆ ಇಲ್ಲಿ ಶಿವನಿಗೆ ಸ್ವತಃ ನಂದಿಯೇ ಜಲಾಭಿಷೇಕ ಮಾಡುತ್ತಾನೆ. ಹಾಗಾಗಿ ಈ ದೇವಾಲಯಕ್ಕೆ ನಂದೀಶ್ವರ ತೀರ್ಥ ಎನ್ನಲಾಗುತ್ತದೆ.
ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಭಕ್ತರ ದಂಡೇ ಹರಿದು ಬಂದಿತ್ತು. ಬಿಸಿಲಲ್ಲಿ ಗಂಟೆಗಟ್ಟಲೆ ಕಾದು ಶಿವನ ದರ್ಶನಕ್ಕಾಗಿಬಂದವರಿಗಾಗಿ ಮಜ್ಜಿಗೆ, ಪ್ರಸಾದ ವಿತರಣೆ ಸೇವೆ ನಡೆಯಿತು.
ಈ ದೇವಾಲಯದ ಶಿಲ್ಪಗಳು ಹಾಗೂ ಪ್ರತಿಮೆಗಳು ಉಳಿದ ದೇವಾಲಯಗಳಲ್ಲಿರುವಂತಿಲ್ಲದೆ, ಎಲ್ಲವೂ ದಕ್ಷಿಣಕ್ಕೆ ಮುಖ ಮಾಡಿರುವುದು ಬಹಳ ವಿಶೇಷವಾಗಿದೆ. 1997ರವೆರಗೂ ಮಣ್ಣಿನೊಳಗೆ ಹೂತಿದ್ದ ದೇವಾಲಯ ನಂತರ ಕಟ್ಟಡ ನಿರ್ಮಾಣಕ್ಕಾಗಿ ಉತ್ಖನನ ನಡೆಸುವಾಗ ಹೊರ ಬಂದಿದೆ.
ಮಲ್ಲೇಶ್ವರಂಗೆ ಹೆಸರು ತಂದು ಕೊಟ್ಟ ಪ್ರಸಿದ್ಧ ಕ್ಷೇತ್ರ ಕಾಡು ಮಲ್ಲೇಶ್ವರ ದೇವಾಲಯ. ಈ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಜನಜಾತ್ರೆಯೇ ಕಂಡುಬಂದಿತು.
ಇಲ್ಲಿ ಉದ್ಭವ ಲಿಂಗ ಕಾಡು ಮಲ್ಲೇಶ್ವರನ ಜೊತೆಗೆ ಗಣಪತಿ, ಕಾಶಿ ವಿಶ್ವನಾಥ, ಮಹಾ ವಿಷ್ಣು, ಆಂಜನೇಯ, ಕಾಲಭೈರವ, ಸೂರ್ಯನಾರಾಯಣ, ಪಾರ್ವತಿ, ದಕ್ಷಿಣಾಮೂರ್ತಿ, ಅರುಣಾಚಲೇಶ್ವರ, ನವಗ್ರಹ, ಸುಬ್ರಹ್ಮಣ್ಯೇಶ್ವರ, ದುರ್ಗಾ ದೇವತೆಯ ಮೂರ್ತಿಗಳೂ ಇವೆ.
ಪುರಾಣ ಕಾಲದಲ್ಲಿ ಗೌತಮ ಋಷಿಗೆ ಶಿವ ಪ್ರತ್ಯಕ್ಷನಾಗಿ ದರ್ಶನ ನೀಡಿದ ಸ್ಥಳ ಇದೇ ಕಾಡು ಮಲ್ಲೇಶ್ವರ ಇರುವ ಸ್ಥಳ ಎನ್ನಲಾಗುತ್ತದೆ. ಈ ಸ್ಥಳಕ್ಕೆ ಐತಿಹ್ಯವಿದೆ.
ಯಶವಂತಪುರದಲ್ಲಿರುವ ವಾಸವಿ ದೇವಾಲಯದಲ್ಲಿ ಹಲವಾರು ಶಿವಲಿಂಗಗಳಿವೆ. ಭಕ್ತರು ಇವುಗಳ ಮೇಲೆ ಸ್ವತಃ ಅಭಿಷೇಕ ಮಾಡಿ ಪ್ರಾರ್ಥಿಸುತ್ತಿರುವ ದೃಶ್ಯ ಕಂಡು ಬಂತು.
ಇಲ್ಲಿನ ನಂದಿಯ ಕಿವಿಯಲ್ಲಿ ತಮ್ಮ ಪ್ರಾರ್ಥನೆಯನ್ನು ಹೇಳುತ್ತಿದ್ದ ಭಕ್ತರು, ಅದನ್ನು ಶಿವನಿಗೆ ತಲುಪಿಸುವಂತೆ ಕೋರಿಕೊಂಡರು.
ಇನ್ನು, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕೂಡಾ ಮಹಾ ಶಿವರಾತ್ರಿ ಸಂಭ್ರಮ ಜೋರಾಗಿತ್ತು. ಶ್ರೀಮಠದಲ್ಲಿರುವ ಶಿವಲಿಂಗಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರಿಂದ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ನಡೆಯಿತು.