ನವಶಕ್ತಿ ವೈಭವ: ಅಮ್ಮನವರಾಗಿ ಕಣ್ತುಂಬಿದ ಪುಟ್ಟ ಗೌರಿಯರು!
ಹೆಣ್ಣುಮಕ್ಕಳನ್ನು ದೇವಿಯಾಗಿ ಕಾಣುವ ಹೊಸ ಟ್ರೆಂಡ್
ಮಕ್ಕಳಿಗೆ ದೇವರಂತೆ ಮೇಕಪ್ ಮಾಡುವ ವಿದ್ಯಾನವೀನ್
ಸ್ಯಾರಿಡ್ರೇಪಿಸ್ಟ್ ವಿದ್ಯಾನವೀನ್ ಪ್ರಯತ್ನಕ್ಕೆ ಮೆಚ್ಚುಗೆಯ ಮಹಾಪೂರ
Bala tripurasundari
ಮಕ್ಕಳು ದೇವರ ಸಮಾನ. ಸಾಮಾನ್ಯವಾಗಿ ಕೃಷ್ಣಾಷ್ಟಮಿ ಬಂದರೆ ಮಗಳಿಗೆ ರಾಧೆಯಂತೆ, ಮಗನಿಗೆ ಕೃಷ್ಣನಂತೆ ವೇಷ ಹಾಕಿ ಸಂಭ್ರಮಿಸುತ್ತೇವೆ. ಅಂತೆಯೇ ಸಂಕ್ರಾಂತಿಗೆ ಹೆಣ್ಮಕ್ಕಳಿಗೆ ಉದ್ದ ಲಂಗ ತೊಡಿಸಿ ಉದ್ದ ಜೆಡೆ ಹಾಕಿ ಮನೆಮನೆಗೆ ಎಳ್ಳು ಬೆಲ್ಲ ಬೀರಲು ಕಳುಹಿಸಲಾಗುತ್ತದೆ. ಹಬ್ಬದಲ್ಲಿ ಮಕ್ಕಳನ್ನು ವಿವಿಧ ರೂಪದಲ್ಲಿ ಅಲಂಕರಿಸಿ ನೋಡುವುದು ಮತ್ತೊಂದು ರೀತಿಯ ಹಬ್ಬ. ನವರಾತ್ರಿಯಲ್ಲಿ ಸಾಮಾನ್ಯವಾಗಿ ಒಂದೊಂದು ದಿನ ಒಂದೊಂದು ಬಣ್ಣದ ಉಡುಗೆ ಧರಿಸುವುದು ಈಗ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ.
ಈ ನಿಟ್ಟಿನಲ್ಲಿ ವಿದ್ಯಾ ನವೀನ್ ಎಂಬ ಅಂತಾರಾಷ್ಟ್ರೀಯ ಸ್ಯಾರಿ ಡ್ರೇಪಿಸ್ಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನವರಾತ್ರಿಯಲ್ಲಿ 9 ದಿನ 9 ದೇವಿಯ ರೂಪದಲ್ಲಿ ಮಕ್ಕಳಿಗೆ ಮೇಕಪ್ ಮಾಡುತ್ತಾರೆ. ಈ ಬಾರಿ ಅವರು 9 ದೇವಿ ಪುಣ್ಯಕ್ಷೇತ್ರಗಳನ್ನು ಥೀಮ್ ಆಗಿ ಆರಿಸಿಕೊಂಡು ಅಲ್ಲಿ ದೇವಿ ಇರುವಂತೆಯೇ ಮಕ್ಕಳ ಮೇಲೆ ದೇವಿ ಗೆಟಪ್ ಹಾಕಿದ್ದಾರೆ.
ಈ ಬಾರಿ ಮಕ್ಕಳಿಗೆ ಅವರು ಮೇಕಪ್ ಮಾಡಲು ಆರಿಸಿಕೊಂಡ ದೇವಿ ಪುಣ್ಯಕ್ಷೇತ್ರಗಳಿವು-
ಪಾಡ್ಯ - ಕಂಚಿ ಕಾಮಾಕ್ಷಿ
ದ್ವಿತೀಯ - ಮಧುರೈ ಮೀನಾಕ್ಷಿ
ತೃತೀಯ - ಕಾಶಿ ವಿಶಾಲಾಕ್ಷಿ
ಚತುರ್ಥಿ - ಕೊಲ್ಲೂರು ಮೂಕಾಂಬಿಕೆ
ಪಂಚಮಿ - ಸವದತ್ತಿ ಎಲ್ಲಮ್ಮ
ಷಷ್ಠಿ - ಕೊಲ್ಲಾಪುರ ಮಹಾಲಕ್ಷ್ಮೀ
ಸಪ್ತಮಿ - ಶೃಂಗೇರಿ ಶಾರದಾಂಬೆ
ಅಷ್ಟಮಿ - ಬಾಲಾ ತ್ರಿಪುರಸುಂದರಿ
ನವಮಿ - ಬೆಂಗಳೂರು ಜ್ಞಾನಾಕ್ಷಿ ಶ್ರೀ ರಾಜರಾಜೇಶ್ವರಿ
ಹೀಗೆ ಪ್ರತಿಯೊಂದು ದಿನಕ್ಕೂ ವಿಶೇಷ-ವಿಶಿಷ್ಟ ಮತ್ತು ಜಗದ್ವಿಖ್ಯಾತ ಪ್ರಸಿದ್ಧ ದೇವಿ ದೇವಸ್ಥಾನಗಳ ಕಾನ್ಸೆಪ್ಟ್ ಅನ್ನು ಕೈಗೆ ತೆಗೆದುಕೊಂಡು, ಮೂಲವಿಗ್ರಹವನ್ನು ಆಧಾರವಾಗಿಟ್ಟುಕೊಂಡು ಯಶಸ್ವಿಯಾಗಿ ತದ್ರೂಪು ದೇವಿಬಿಂಬವನ್ನು ಮಕ್ಕಳ ಮೇಲೆ ತಂದಿದ್ದಾರೆ.
5 ವರ್ಷದ ಸನ್ನಿಧಿ, 7 ವರ್ಷದ ಸಾಯಿ ಶ್ರೀನಿಧಿ, 4 ವರ್ಷದ ಲಿರಿಷರಿಗೆ ಈ ರೀತಿ ದೇವಿಯ ಗೆಟಪ್ ಹಾಕಿದ್ದಾರೆ. ಇವರ ಈ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ತದ್ರೂಪಿನ ಫೋಟೋಶೂಟ್‌ನಿಂದಾಗಿ 9 ದೇವಿಯ ಕ್ಷೇತ್ರದರ್ಶನವೇ ಮಾಡಿದಷ್ಟು ಸಂತೋಷವಾಗಿದೆ ಎಂದು ನೆಟ್ಟಿಗರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಹೆಣ್ಣು ಮಕ್ಕಳಲ್ಲಿ ಧೈರ್ಯವೇ ಸರ್ವತ್ರ ಸಾಧನವಾಗಬೇಕೆಂದು, ದೇವಿ ಮಹಾತ್ಮೆಯನ್ನೂ, ಪುಣ್ಯ ಕ್ಷೇತ್ರದಲ್ಲಿನ ಅಮ್ಮನವರ ಕಥೆಯನ್ನು ಮಕ್ಕಳಿಗೆ ಹೇಳಿ ಕೊಡುತ್ತಾ ಅವರಲ್ಲಿ ಆ ದೈವಿಕ ಭಾವನೆಯನ್ನು ತುಂಬಿ ಫೋಟೋಶೂಟ್ ಮಾಡಿದ್ದು ಈ ಬಾರಿಯ ವಿಶೇಷ.
ಬೆಂಗಳೂರಿನ VN studioದಲ್ಲಿ redthreadನ ಸಹಯೋಗದಿಂದ ಮಾಡಿದ ಈ photoshoot- ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿ ಹೆಚ್ಚು ಗಮನ ಸೆಳೆದಿದೆ.
ಇದೀಗ ಸೀರೆ ನೆರಿಗೆ ಕಲಾವಿದೆ ವಿದ್ಯಾನವೀನ್‌ಗೆ ರಾಜ್ಯದ ವಿವಿಧ ಭಾಗಗಳಿಂದ ತಮ್ಮ ಮಕ್ಕಳಿಗೆ ಹೀಗೆ ಫೋಟೋಶೂಟ್ ಮಾಡಿಕೊಡುವಂತೆ ಹೆಚ್ಚೆಚ್ಚು ಬೇಡಿಕೆ ಬರುತ್ತಲಿದ್ದು ಈ ಸೇವೆಯನ್ನೂ ವೃತ್ತಿಯಾಗಿ ಸ್ವೀಕರಿಸುವಂತೆ ಮಾಡಿದೆ.
ಮನೆಯ ಮಹಾಲಕ್ಷ್ಮಿಯರನ್ನು ನಂಬಿದ ಮಹಾದೇವಿಯ ರೂಪದಲ್ಲಿ ನೋಡುವುದು ಕೂಡಾ ಎಂಥ ದೈವಿಕ ಭಾವನೆಯಲ್ಲವೇ? ನವರಾತ್ರಿಯನ್ನು ಪ್ರತಿ ವೃತ್ತಿಯವರೂ ತಮ್ಮದೇ ಆದ ರೀತಿಯಲ್ಲಿ ಆಚರಿಸಿ ಸಂಭ್ರಮಿಸಬಹುದು ಎಂಬುದಕ್ಕಿದು ಉದಾಹರಣೆಯಾಗಿದೆ.