ಹುಬ್ಬಳ್ಳಿ: ಯುವಪಡೆಯಿಂದ ಸರ್ಕಾರಿ ಶಾಲೆಗಳಿಗೆ ರಂಗು, ಗೋಡೆಗಳೇ ಮಕ್ಕಳಿಗೆ ಪಾಠ ಹೇಳ್ತವೆ..!
ಶಿವಾನಂದ ಗೊಂಬಿ
ಹುಬ್ಬಳ್ಳಿ(ಅ.15): ಈ ಶಾಲೆಗಳ ಪ್ರಾಂಗಣಕ್ಕೆ ಕಾಲಿಟ್ಟರೆ ಸಾಕು, ಶಿಕ್ಷಕರು ಪಾಠ ಹೇಳುವುದಿರಲಿ ಗೋಡೆಗಳೇ ಮಕ್ಕಳಿಗೆ ಪಾಠ ಹೇಳುತ್ತವೆ. ಜಿಲ್ಲೆ, ತಾಲೂಕಿನ ನಕ್ಷೆಗಳು, ಗಣಿತದ ಸೂತ್ರಗಳು, ಕವಿಗಳ ಹೆಸರು, ಅವರ ಕಾವ್ಯನಾಮ ಸೇರಿದಂತೆ ಹಲವಾರು ವಿಷಯಗಳನ್ನು ಗೋಡೆಗಳೇ ಮಕ್ಕಳಿಗೆ ತಿಳಿಸಿಕೊಡುತ್ತವೆ.
ಹುಬ್ಬಳ್ಳಿಯ ‘ರೆವಲ್ಯೂಷನ್ ಮೈಂಡ್ಸ್’ ಎಂಬ ಹೆಸರಿನಿಟ್ಟುಕೊಂಡು ಸರ್ಕಾರಿ ಶಾಲೆಗಳನ್ನು ಅಂದಗೊಳಿಸುತ್ತಿರುವ ಯುವಕರ ಪಡೆಯ ಕೆಲಸವಿದು. ರೆವಲ್ಯೂಷನ್ ಮೈಂಡ್ಸ್ ಎಂಬ ಸಂಘಟನೆ 15 ಜನರ ತಂಡವಿದು. ಇದರಲ್ಲಿ ಇರುವವರು ಎಲ್ಲರೂ ಯುವಕರೇ. ಕೆಲವರು ಎಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳಿದ್ದರೆ, ಮತ್ತೆ ಕೆಲವರು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿದ್ದಾರೆ.
ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿರುವ ಈ ಸಂಘಟನೆ, ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿನ ಮುಖ್ಯೋಪಾಧ್ಯಾಯರಿಂದ ಅನುಮತಿ ಪಡೆದು ಶಾಲೆಯ ಕಾಂಪೌಂಡ್, ಗೋಡೆಗಳಲ್ಲಿ ಬಗೆ ಬಗೆಯ ಕಲಾಕೃತಿಗಳನ್ನು ರಚಿಸುತ್ತದೆ. ಈ ಮೂಲಕ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸುವಂತೆ ಕೆಲಸ ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಬರೋಬ್ಬರಿ 36 ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿದು ಅಂದಗೊಳಿಸಿದೆ. ಈ ತಂಡದಲ್ಲಿರುವವರ ಪೈಕಿ ಕೆಲವರು ಚಿತ್ರಕಲಾವಿದರು ಇದ್ದಾರೆ. ಅವರು ಕಲಾಕೃತಿಗಳನ್ನು ರಚಿಸುತ್ತಾರೆ. ಉಳಿದವರು ಅವರಿಗೆ ನೆರವು ನೀಡುತ್ತಾರೆ. ಒಂದು ವೇಳೆ ಶಾಲೆಯ ಕಟ್ಟಡ ದೊಡ್ಡದಿದ್ದರೆ, ಕಲಾಕಾರರು ಅಗತ್ಯವೆನಿಸಿದರೆ ಬೇರೆ ಕಲಾವಿದರ ನೆರವನ್ನು ಪಡೆದು ಚಿತ್ರಕಲೆಗಳನ್ನು ಬಿಡಿಸುತ್ತಾರೆ.
ಮಕ್ಕಳ ಕಲಿಕೆಗೆ ಅನುಕೂಲವಾಗುವಂತಹ ಕಲಾಕೃತಿಗಳನ್ನು ಇವರು ಗೋಡೆಗಳ ಮೇಲೆ ಬಿಡಿಸುತ್ತಾರೆ. ಪರಿಸರಪ್ರೇಮವುಳ್ಳ ಕೃತಿ, ಗಣಿತದ ಸೂತ್ರಗಳು, ಜಿಲ್ಲೆಯ ನಕಾಶೆ, ಕಾಡಿನ ಚಿತ್ರ, ಕವಿಗಳ ಹೆಸರು, ಅವರ ಭಾವಚಿತ್ರ ಹೀಗೆ ಬಗೆ ಬಗೆಯ ಚಿತ್ರಗಳನ್ನು ಬಿಡಿಸುತ್ತಾರೆ. ಮಕ್ಕಳ ಪಾಠದಲ್ಲಿರುವ (ಸಿಲೆಬಸ್) ಕೃತಿಗಳನ್ನು ರಚಿಸುತ್ತಾರೆ. ಇದರಿಂದ ಮಕ್ಕಳಿಗೆ ಕಲಿಕೆಗೆ ಹೆಚ್ಚು ಸಹಕಾರಿಯಾಗುತ್ತದೆ. ಅತ್ತ ಶಿಕ್ಷಕರು ಪಾಠ ಹೇಳುತ್ತಿದ್ದಂತೆ, ಇತ್ತ ಈ ಚಿತ್ರಗಳನ್ನು ನೋಡುತ್ತಿದ್ದಂತೆ ಮಕ್ಕಳಿಗೆ ಆ ಪಾಠ ಸಂಪೂರ್ಣ ಅರ್ಥವಾಗುತ್ತದೆ ಎಂಬ ಉದ್ದೇಶದಿಂದ ಬಹುತೇಕ ಸಿಲೆಬಸ್‌ಗಳಲ್ಲಿರುವ ಚಿತ್ರಗಳನ್ನೇ ಬಿಡಿಸುತ್ತೇವೆ ಎಂದು ನುಡಿಯುತ್ತಾರೆ ತಂಡದ ಯುವಕ.
ಖಾಸಗಿ ಶಾಲೆಗಳಿಗಾದರೆ ಬೇಕಾದಷ್ಟು ಖರ್ಚು ಮಾಡಿ ಶಾಲೆಗಳನ್ನು ಸುಂದರಗೊಳಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕೆಂದರೆ ಆ ಕೆಲಸವನ್ನು ಸರ್ಕಾರವೇ ಮಾಡಬೇಕು. ಸರ್ಕಾರಿ ಶಾಲೆಗಳಿಗೆ ಬಡವರ ಮಕ್ಕಳೇ ಬರುತ್ತಾರೆ. ಹೀಗಾಗಿ ಬಡವರ ಮಕ್ಕಳ ಕಲಿಕೆಗೂ ಅನುಕೂಲವಾಗಲಿ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಂತೆ ಸಕಲ ಸೌಲಭ್ಯಗಳನ್ನು ಹೊಂದಿದ ಶಾಲೆಗಳಾಗಲಿ ಎಂಬ ಉದ್ದೇಶದಿಂದ ನಮ್ಮ ಕೈಲಾದಷ್ಟುಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂಬುದು ಈ ಯುವಪಡೆಯ ಹೇಳಿಕೆ. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳನ್ನು ಬಣ್ಣ ಬಳಿದು ಅಂದಗೊಳಿಸುವುದು ಈ ಸಂಘಟನೆಯ ಉದ್ದೇಶ.
ಇನ್ನು ಶಾಲೆಯ ದಿನಗಳಲ್ಲಿ ಕೆಲವು ಸರ್ಕಾರಿ ಶಾಲೆಗಳಿಗೆ ತೆರಳಿ ಪಾಠಗಳನ್ನು ಮಾಡುತ್ತಾರಂತೆ ಈ ತಂಡದ ಯುವಕರು, ಮಕ್ಕಳಿಂದ ಸೀಡ್‌ಬಾಲ್‌ಗಳನ್ನು ಮಾಡಿಸುವುದುಂಟು. ಆದರೆ ಈ ವರ್ಷ ಕೊರೋನಾದಿಂದಾಗಿ ಶಾಲೆಗಳಿಲ್ಲ, ಹೀಗಾಗಿ ಶಾಲೆಗಳಿಗೆ ತೆರಳಿ ಪಾಠ ಮಾಡುತ್ತಿಲ್ಲ. ಸೀಡ್‌ಬಾಲ್ ಮಾಡಿಸುತ್ತಿಲ್ಲ. ಆದರೆ ಶಾಲೆಗಳ ಗೋಡೆಗಳನ್ನು ಅಂದಗೊಳಿಸುವ ಕಾರ್ಯವನ್ನಷ್ಟೇ ಮಾಡುತ್ತಿದೆ ಈ ತಂಡ. ಒಟ್ಟಿನಲ್ಲಿ ರೆವಲ್ಯೂಷನ್ ಮೈಂಡ್ಸ್ ಸಂಘಟನೆಯಿಂದ ಸರ್ಕಾರಿ ಶಾಲೆಗಳು ಅಂದಗೊಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕಳೆದ ಮೂರು ವರ್ಷಗಳ ಹಿಂದೆ ನಮ್ಮ ಸಂಘಟನೆಯನ್ನು ಅಸ್ತಿತ್ವಕ್ಕೆ ತಂದಿದ್ದೇವೆ. ಈ ವರೆಗೆ 36 ಶಾಲೆಗಳ ಗೋಡೆಗಳ ಮೇಲೆ ಕಲಾಕೃತಿಗಳನ್ನು ರಚಿಸಿ ಅಂದಗೊಳಿಸಿದ್ದೇವೆ. ಮಕ್ಕಳ ಕಲಿಕೆಗೆ ಅನುಕೂಲವಾಗುವಂತಹ ಕಲಾಕೃತಿಗಳನ್ನೇ ರಚಿಸುತ್ತೇವೆ ಎಂದು ರೆವ್ಯುಲೇಷನ್ ಮೈಂಡ್ಸ್ ಸಂಸ್ಥಾಪಕ ಅಧ್ಯಕ್ಷರು ವಿನಾಯಕ ಜೋಗಾರಿಶೆಟ್ಟರ್ ಅವರು ತಿಳಿಸಿದ್ದಾರೆ.