ಇಂಗ್ಲೀಷ್ ಟೀಚರ್ ಆಗಿ ಪಾಠ ಮಾಡಿ ಮಕ್ಕಳಲ್ಲಿ ಉತ್ಸಾಹ ತುಂಬಿದ ಜಿಲ್ಲಾಧಿಕಾರಿ ದಿವ್ಯಪ್ರಭು!
ಇಂದು ಶಾಲಾ ಪ್ರಾರಂಭೋತ್ಸವ ದಿನ. ರಜೆಯ ದಿನಗಳನ್ನು ಕಳೆದು ಮರಳಿ ಶಾಲೆಗೆ ಬರುತ್ತಿರುವ ಮಕ್ಕಳನ್ನು ಶಿಕ್ಷಕರು ಅತ್ಯಂತ ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಸಿಹಿ ಹಂಚುವುದು, ಹೂಮಳೆ ಸುರಿಸುವ ಮೂಲಕ ಮಕ್ಕಳನ್ನು ಶಿಕ್ಷಕರು ಸ್ವಾಗತಿಸಿದ್ದಾರೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಸ್ವತಃ ಶಾಲೆಗೆ ತೆರಳಿ ಶಿಕ್ಷಕಿಯಾಗಿ ವಿಶೇಷವಾಗಿ ಬರಮಾಡಿಕೊಂಡಿರುವುದು ಗಮನ ಸೆಳೆದಿದೆ.
ಶಾಲಾ ಪುನಾರಂಭದ ಮೊದಲ ದಿನವಾದ ಇಂದು ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ಮಕ್ಕಳ ಮೇಲೆ ಹೂಮಳೆ ಸುರಿಸಿ, ಚಾಕಲೇಟ್ ಕೊಡುವ ಮೂಲಕ ವಿಶೇಷವಾಗಿ ಬರಮಾಡಿಕೊಂಡರು.
ಮಕ್ಕಳನ್ನ ಅತ್ಯಂತ ಖುಷಿಯಾಗಿ ಸ್ವಾಗತಿಸಿದ ಜಿಲ್ಲಾಧಿಕಾರಿಗಳು ನಂತರ ಸ್ವತಃ ಶಿಕ್ಷಕಿಯಾಗಿ ಎಂಟನೇ ತರಗತಿಯ ಇಂಗ್ಲೀಷ್ ಪಾಠವನ್ನು ಬೋಧನೆ ಮಾಡುವ ಮೂಲಕ ಮಕ್ಕಳ ಗಮನ ಸೆಳೆದರು
ಮಕ್ಕಳಿಗೆ ಯಾವ ಭಾಷೆ ಕಠಿಣ ಎನಿಸುತ್ತದೆ ಎಂದು ಕೇಳಿದಾಗ, ಇಂಗ್ಲೀಷ್ ಭಾಷೆ ಕಠಿಣವಾಗುತ್ತದೆ ಎಂದು ಮಕ್ಕಳು ಹೇಳಿದಾಗ ಅದೇ ಭಾಷೆ ಮೇಲೆ ಪಾಠ ಮಾಡಿದ ಜಿಲ್ಲಾಧಿಕಾರಿಗಳು, ಇಂಗ್ಲೀಷ್ ಭಾಷೆಯನ್ನು ಕೇವಲ ಒಂದು ವಿಷಯವಾಗಿ ನೋಡಬೇಕು ಯಾವುದೇ ಭಾಷೆಯಾಗಲಿ ಅದು ತಪ್ಪಾದರೂ ಮಾತನಾಡಲು ಕಲಿಯಬೇಕು ಎಂದು ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಡಿದ ಪಾಠವನ್ನು ಮಕ್ಕಳು ಕೂಡ ಆಸಕ್ತಿಯಿಂದ ಕೇಳಿದ್ದು ವಿಶೇಷವಾಗಿತ್ತು. ಪಾಠದ ನಂತರ ಮಕ್ಕಳಿಗೆ ಪ್ರಶ್ನೆಗಳನ್ನೂ ಕೇಳಿದ ಜಿಲ್ಲಾಧಿಕಾರಿಗಳು, ಸದ್ಯ ಆರಂಭವಾಗಿರುವ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ಮಕ್ಕಳು ಉತ್ತಮ ಫಲಿತಾಂಶ ಹೊಂದಬೇಕು ಎಂದು ಕಿವಿಮಾತು ಹೇಳಿದರು