ಖಾಸಗಿ ಶಾಲಾ ಶುಲ್ಕ ಕಡಿತ ಸಾಧ್ಯವಿಲ್ಲ; ಸರ್ಕಾರದ ಆದೇಶದ ವಿರುದ್ದ ಕ್ಯಾಮ್ಸ್ ಪತ್ರ!
ಕೊರೋನಾ ವೈರಸ್ ಕಾರಣ ಪ್ರಸಕ್ತ ಶೈಕ್ಷಣಿಕ ವರ್ಷ ಈಗಷ್ಟೇ ಆರಂಭಗೊಂಡಿದೆ. ಆದರೆ ಫೀಸ್ ಗೊಂದಲ ಮಾತ್ರ ಇನ್ನೂ ಬಗೆಹರಿದಿಲ್ಲ. ಕಳೆದ 10 ತಿಂಗಳಿನಿಂದ ಸತತ ಚರ್ಚೆ, ತಜ್ಞರ ಸಲಹೆ, ಪೋಷಕರ ಅಭಿಪ್ರಾಯ ಸಂಗ್ರಹಿಸಿದ ಸರ್ಕಾರ ಶೇಕಡಾ 30ರಷ್ಟು ಫೀಸ್ ಕಡಿತಕ್ಕೆ ಆದೇಶ ನೀಡಿತ್ತು. ಆದರೆ ಈ ಆದೇಶ ಅವೈಜ್ಞಾನಿಕ ಎಂದು ಇದೀಗ ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್ ಕ್ಯಾತೆ ತೆಗೆದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಆರ್ಥಿಕ, ಮಾನಸಿಕ ಹಾಗೂ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು, ಪೋಷಕರು, ಶಾಲಾ ಆಡಳಿ ಮಂಡಳಿ ಬಳಲಿಹೋಗಿದೆ. ಇದೀಗ ಶಾಲೆ ಆರಂಭಗೊಂಡರೂ ಗೊಂದಲಗಳಿಗೆ ತೆರೆಬೀಳುತ್ತಿಲ್ಲ.
ಹಲವು ಸುತ್ತಿನ ಸಭೆ ಬಳಿಕ ರಾಜ್ಯ ಸರ್ಕಾರ ಖಾಸಗಿ ಶಾಲೆ ಬೋಧನಾ ಶುಲ್ಕದಲ್ಲಿ ಶೇ.30ರಷ್ಟು ಕಡಿತ ಮಾಡಲು ಆದೇಶಿಸಿದೆ. ಅಲ್ಪ ಶೈಕ್ಷಣಿಕ ವರ್ಷ ಹಾಗೂ ಆರ್ಥಿಕ ಸಂಕಷ್ಟದ ಕಾರಣ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು.
ಸರ್ಕಾರದ ಆದೇಶ ಅವೈಜ್ಞಾನಿಕ ಎಂದು ಖಾಸಗಿ ಶಾಲಾ ಒಕ್ಕೂಟ ಕ್ಯಾಮ್ಸ್, ಸರ್ಕಾರಕ್ಕೆ ಪತ್ರ ಬರೆದಿದೆ. ಇಷ್ಟೇ ಅಲ್ಲ ಸರ್ಕಾರದ ಆದೇಶದ ವಿರುದ್ಧ ಕ್ಯಾಮ್ಸ್ ಅಸಮಾಧಾನ ವ್ಯಕ್ತಪಡಿಸಿದೆ.
ಖಾಸಗಿ ಶಾಲೆಗಳಿಗೆ ಆರ್ಥಿಕ ನೆರವು ನೀಡದ ಸರಕಾರ ಶುಲ್ಕ ಸಂಬಂಧ ಆದೇಶ ಮಾಡುವಂತಿಲ್ಲ. ಇದು 2017ರಲ್ಲಿ ಶಿಕ್ಷಣ ಇಲಾಖೆಯ ಮಧ್ಯಂತರ ಆದೇಶದ ಉಲ್ಲಂಘನೆಯಾಗಿದೆ ಎಂದು ಕ್ಯಾಮ್ಸ್ ಹೇಳಿದೆ.
ಆರ್ಥಿಕ ಸಂಕಷ್ಟ ದಲ್ಲಿರುವ ಕ್ಯಾಮ್ಸ್ ಶಾಲೆಗಳ ಮೇಲೆ ಯಾವುದೇ ಕ್ರಮಕೈಗೊಳ್ಳಬಾರದು. ಸರ್ಕಾರಕ್ಕೆ ಈ ವಿಚಾರದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕ್ಯಾಮ್ಸ್ ತನ್ನ ಪತ್ರದಲ್ಲಿ ಹೇಳಿದೆ
ಖಾಸಗಿ ಶಾಲಾಶಿಕ್ಷಕರಿಗೆ ಸರ್ಕಾರ ಆರ್ಥಿಕ ನೆರವು ನೀಡಲಿ. ಇದರಿಂದ ಪೋಷಕರಿಗೂ ಸಹಾಯವಾಗಲಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಪೋಷಕರಿಗೆ ಸರ್ಕಾರ ನೆರವು ನೀಡಲಿ ಎಂದು ಕ್ಯಾಮ್ಸ್ ಕೆಲ ಸಲಹೆ ನೀಡಿದೆ.
ಅನುದಾನ ರಹಿತ ಖಾಸಿಗಿ ಶಾಲೆಗಳು ಸರ್ಕಾರದಿಂದ ಯಾವುದೇ ಹಣಕಾಸಿನ ನೆರವಿಲ್ಲದೆ ಶಿಕ್ಷಣ ನೀಡುತ್ತಿದೆ. ಮಾಸಿಕ ಶುಲ್ಕ, ವಾರ್ಷಿಕ ಶುಲ್ಕದ ಮೂಲಕವೇ ಶೇಕಡಾ 60ರಷ್ಟು ಖಾಸಗಿ ಶಾಲೆಗಳು ನಡೆಯುತ್ತಿವೆ.
ಶಿಕ್ಷಕರ ವೇತನ, ಆಡಳಿತ ಮಂಡಳಿ, ಇತರ ಖರ್ಚುಗಳೆಲ್ಲವೂ ಇದೇ ವಿದ್ಯಾರ್ಥಿಗಳ ಶುಲ್ಕದಿಂದಲೇ ನಿಭಾಯಸಲಾಗುತ್ತಿದೆ. ಇದೀಗ ಶುಲ್ಕ ಕಡಿತ ಮಾಡಿದರೆ, ಶಿಕ್ಷಕರಿಗೆ ವೇತನ ನೀಡಲೂ ಸಾಧ್ಯವಿಲ್ಲ ಎಂದು ಕ್ಯಾಮ್ಸ್ ಹೇಳಿದೆ